ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನಿಂದ ಜಾಮೀನು ಪಡೆದ ಕೆಲ ಗಂಟೆಗಳ ಬಳಿಕ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಸಂಜೆ (ಸೆ13) ತಿಹಾರ್ ಜೈಲಿನಿಂದ ಹೊರ ಬಂದರು. ಆಮ್ ಆದ್ಮಿ ಪಕ್ಷದ ನಾಯಕರು, ಮುಖಂಡರು, ನೂರಾರು ಕಾರ್ಯಕರ್ತರು ಜೈಕಾರ ಹಾಕುವ ಮೂಲಕ ನಾಯಕನನ್ನು ಸ್ವಾಗತಿಸಿದರು.
ವಾಹನದ ಸನ್‌ರೂಫ್‌ನಲ್ಲಿ ನಿಂತು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ”ದೇಶವನ್ನು ದುರ್ಬಲಗೊಳಿಸಲು ಕೆಲಸ ಮಾಡುತ್ತಿರುವ ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತೇನೆ. ಜೈಲುವಾಸವು ನನ್ನ ಸಂಕಲ್ಪವನ್ನು ಬಲಪಡಿಸಿದೆ”ಎಂದರು.
“ದೇಶವನ್ನು ದುರ್ಬಲಗೊಳಿಸಲು, ವಿಭಜಿಸಲು ದೇಶವಿರೋಧಿ ಶಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ನಾನು ಅವರ ವಿರುದ್ಧ ನಿರಂತರವಾಗಿ ಹೋರಾಡಿದ್ದೇನೆ, ಆ ಹೋರಾಟವನ್ನು ಮುಂದುವರಿಸುತ್ತೇನೆ. ಭಾರತ್ ಮಾತಾ ಕಿ ಜೈ” ಎಂದರು
“ನಾನು ನನ್ನ ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇನೆ, ದೊಡ್ಡ ಕಷ್ಟಗಳನ್ನು ಎದುರಿಸಿದ್ದೇನೆ. ದೇವರು ನನ್ನನ್ನು ಪ್ರತಿ ಹಂತದಲ್ಲೂ ಬೆಂಬಲಿಸಿದ್ದಾನೆ. ನಾನು ಸತ್ಯವಂತನಾಗಿದ್ದರಿಂದ ನನ್ನನ್ನು ಬೆಂಬಲಿಸಿದ್ದಾನೆ. ನನ್ನನ್ನು ಜೈಲಿಗೆ ಹಾಕುವ ಮೂಲಕ ನನ್ನ ನೈತಿಕ ಸ್ಥೈರ್ಯವನ್ನು ಮುರಿಯುತ್ತಾರೆ ಎಂದು ಭಾವಿಸಿದ್ದರು. ನನ್ನ ಸಂಕಲ್ಪ 100 ಪಟ್ಟು ಬಲಗೊಂಡಿದೆ ಮತ್ತು ನನ್ನ ಶಕ್ತಿ 100 ಪಟ್ಟು ಹೆಚ್ಚಾಗಿದೆ.ಜೈಲಿನ ದಪ್ಪ ಗೋಡೆಗಳು ಮತ್ತು ಕಂಬಿಗಳು ನನ್ನನ್ನು ಪುಡಿಗೈಯಲು ಸಾಧ್ಯವಿಲ್ಲ” ಎಂದರು.
ಜೈಲಿನಿಂದ ಬಿಡುಗಡೆಗಾಗಿ ಪ್ರಾರ್ಥಿಸಿದವರಿಗೆ ಕೃತಜ್ಞತೆ ಸಲ್ಲಿಸಿ, ”ನಾನು ಇಂದು ಯಾರ ಆಶೀರ್ವಾದದಿಂದ ಹೊರಬಂದೆನೋ ಆ ದೇವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಲಕ್ಷಗಟ್ಟಲೆ ಜನರು ನನಗಾಗಿ ಪ್ರಾರ್ಥನೆ ಸಲ್ಲಿಸಿದರು, ನನಗಾಗಿ ಪ್ರಾರ್ಥಿಸಲು ದೇವಸ್ಥಾನಗಳು, ಮಸೀದಿಗಳು, ಗುರುದ್ವಾರಗಳಿಗೆ ಹೋದರು. ಅವರೆಲ್ಲರಿಗೂ, ಮಳೆಯನ್ನೂ ಲೆಕ್ಕಿಸದೆ ಇಲ್ಲಿಗೆ ಬಂದವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಜೀವನ ದೇಶಕ್ಕೆ ಮುಡಿಪಾಗಿದೆ. ನನ್ನ ಜೀವನದ ಪ್ರತಿ ಕ್ಷಣ, ನನ್ನ ರಕ್ತದ ಪ್ರತಿ ಹನಿಯೂ ದೇಶಕ್ಕೆ ಸಮರ್ಪಿತವಾಗಿದೆ ಎಂದರು.
ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ED) ಕೇಜ್ರಿವಾಲ್ ಅವರನ್ನು ಬಂಧಿಸಿತ್ತು, ನಂತರ ಅದಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಜೂನ್‌ನಲ್ಲಿ ಕೇಂದ್ರೀಯ ತನಿಖಾ ದಳ (CBI) ಬಂಧಿಸಿತ್ತು.