Advertisement

 ಮುಂದಿನ ಉಪ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧೆ: ಎಚ್ ಡಿ ಕುಮಾರಸ್ವಾಮಿ

02:09 PM Feb 25, 2021 | Team Udayavani |

ಕಲಬುರಗಿ: ಶೀಘ್ರದಲ್ಲಿಯೇ ನಡೆಯಲಿರುವ ಬಸವ ಕಲ್ಯಾಣ, ಮಸ್ಕಿ ಹಾಗೂ ಸಿಂದಗಿ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ಪರ್ಧಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಆಡಳಿತಾರೂಢ ಪಕ್ಷದ ಎದುರು ಆರ್ಥಿಕ ಸಂಪನ್ಮೂಲದಿಂದ ಎದುರಿಸುವುದು ಕಷ್ಟ ಎಂಬುದರ ಹಿನ್ನೆಲೆಯಲ್ಲಿ ಹೇಳಿರಬಹುದು.‌ ಆದರೆ ಮೂರೂ ಕ್ಷೇತ್ರದಲ್ಲೂ ಜೆಡಿಎಸ್ ಪಕ್ಷ ಸ್ಪರ್ಧಿಸಲಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚಿಸುವುದರೊಂದಿಗೆ ಚಾಲನೆ ನೀಡಲಾಗಿದೆ. ಸಮರ್ಥವಾಗಿ ಚುನಾವಣೆ ಎದುರಿಸಲಾಗುವುದು. ಹಿಂದೆ ಸರಿಯುವುದಿಲ್ಲ‌ ಎಂದು ಪ್ರಕಟಿಸಿದರು.

ಕೇಂದ್ರ ಸರ್ಕಾರದ ಧೋರಣೆ ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರ ಆಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ರಾಜ್ಯ ಸರ್ಕಾರದ ವ್ಯಾಪಕ ಭ್ರಷ್ಟಾಚಾರದ ವಿರುದ್ದ ಅವರ ಶಾಸಕರೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಹೈಕಮಾಂಡ್ ಗೆ ಬರೆಸಿರುವ 11 ಪುಟಗಳ ವರದಿಯೇ ಸಾಕ್ಷಿ ಎಂದು ಟೀಕಿಸಿದರು.

ಇದನ್ನೂ ಓದಿ:ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ಸೂಚಿಸಿದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ

ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರ್ಕಾರದ ಹಗರಣಗಳು ಮುಂದಿನ ದಿನಗಳಲ್ಲಿ ಒಂದೊಂದಾಗಿ ಹೊರಬರಲಿವೆ. ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಹೋಗಿ ಅಲ್ಲಿನ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಪ್ರಸ್ತಾಪಿಸುತ್ತಾರೆ. ಆದರೆ ರಾಜ್ಯದ ಬಿಜೆಪಿ ಸರ್ಕಾರದ ಬಗ್ಗೆ ತುಟಿ ಬಿಚ್ಚದಿರುವುದು ಅವರ ನೈತಿಕತೆಯನ್ನು ಎತ್ತಿತೋರಿಸುತ್ತದೆ ಎಂದು ಎಚ್ ಡಿಕೆ ವಾಗ್ದಾಳಿ ನಡೆಸಿದರು.

Advertisement

ಕಳೆದ ಹಾಗೂ ಪ್ರಸಕ್ತ ವರ್ಷದ ಅತಿವೃಷ್ಡಿ ಹಾನಿಯಿಂದ ಬಿದ್ದಿರುವ ಮನೆಗಳಿಗೆ 5 ಲಕ್ಷ ರೂ ಪರಿಹಾರ ಹಾಗೂ ಬೆಳೆ ಹಾನಿಗೆ ಸೂಕ್ತ ಪರಿಹಾರ ಘೋಷಣೆ ಕಾರ್ಯರೂಪಕ್ಕೆ ಬರಲಿಲ್ಲ. ಕೋವಿಡ್ ಹೇಳಿಕೊಂಡು ಅಪಮಾರ್ಗದಲ್ಲಿ ಸರ್ಕಾರ ಮುನ್ನಡೆಯುತ್ತಿದೆ. ಸರ್ಕಾರವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡೆಸದೇ ಬೇರೆಯವರು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್‌ ಬೆಲೆ ನಿಯಂತ್ರಣ ಕೇಂದ್ರ ಸರ್ಕಾರದ ಕೈಯಲ್ಲಿಲ್ಲ: ಅಶ್ವಥ್ ನಾರಾಯಣ

ರಾಜ್ಯ ಸರ್ಕಾರದ ಜನ ವಿರೋಧಿ ಆಡಳಿತ ಹಾಗೂ ತೈಲ ಬೆಲೆ ಏರಿಕೆ ವಿರುದ್ದ ಜೆಡಿಎಸ್ ಪಕ್ಷ ರಾಜ್ಯ ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಸಿಎಂ ತಿಳಿಸಿದರು.

ಸಿದ್ದರಾಮಯ್ಯಗೆ ಟಾಂಗ್:  ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೈತ್ರಿಗೆ ಮಾಜಿ ಸಿಎಂ ಸಿದ್ರಾಮಯ್ಯ ಅವರಿಗೆ ಇಷ್ಟವಿರಲಿಲ್ಲ. ಜೆಡಿಎಸ್ ಒಂದು ಪಕ್ಷನಾ ಎಂದು ಹೀಯಾಳಿಸಿದ್ದರು. ಆದರೆ ಜೆಡಿಎಸ್ ಶಕ್ತಿ ಏನು ಎನ್ನವುದನ್ನು ನಮ್ಮ ಕಾರ್ಯಕರ್ತರು ಮೈಸೂರು ಮೇಯರ್ ಸ್ಥಾನ ಗೆದ್ದು ತೋರಿಸಿದ್ದಾರೆ ಕುಮಾರಸ್ವಾಮಿ ಟಾಂಗ್ ನೀಡಿದರು.

ಪಾಲಿಕೆ ಚುನಾವಣೆಯಲ್ಲಿ ಸ್ಥಳೀಯವಾಗಿ ನಡೆದ ಹೊಂದಾಣಿಕೆ. ಶಾಸಕ ತನ್ವೀರ ಶೇಠ್ ಬಂದು ವಿನಂತಿ ಮಾಡಿಕೊಂಡಿದ್ದರು ಎಂದು ಕುಮಾರಸ್ವಾಮಿ ವಿವರಿಸಿದರು. ಸಿದ್ದರಾಮಯ್ಯ ಅವರ ದೂರವಾಣಿ ಸಂಭಾಷಣೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರಿಗೆ ಈ ಮೈತ್ರಿ ಬಗ್ಗೆ ಎಷ್ಟು ಸಿಟ್ಟಿದೆ ಎನ್ನುವುದು ತೋರಿಸುತ್ತದೆ ಎಂದು ಮುಗುಳ್ನಕ್ಕು ಹೇಳಿದರು.

ಕಾರು ಖರೀದಿ: ಸಚಿವ, ಸಂಸದರ ಕಾರು ಖರೀದಿಗೆ ಹೆಚ್ಚುವರಿ ಹಣ ಬಿಡುಗಡೆ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಅಭಿವೃದ್ಧಿ ಕಾರ್ಯ ಕೇಳಿದರೆ ಕೊರೊನಾ ಅಂತಿರಿ. ಈಗ ಕಾರು ಖರೀದಿ ಮಾಡದಿದ್ದರೆ ಸರಕಾರಕ್ಕೆ ದರಿದ್ರ ಏನೂ ಬರ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಡುಗೆ ಅನಿಲ ದರ ಒಂದೇ ತಿಂಗಳಲ್ಲಿ ಮೂರನೆ ಬಾರಿ ಏರಿಕೆ..!

ಸಂಘರ್ಷಕ್ಕೆ ಎಡೆ:  ಮೀಸಲಾತಿಗೆ ಆಗ್ರಹಿಸಿ ಸ್ವಾಮಿಜಿಗಳು ರಸ್ತೆಗೆ ಆಗಮಿಸುತ್ತಿರುವುದು ಸರಿಯಲ್ಲ. ಸರಕಾರ ಇದನ್ನು ಲಘುವಾಗಿ ಪರಿಗಣಿಸಬಾರದು. ಗಂಭೀರವಾಗಿ ಪರಿಗಣಿಸಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯಕೊಡಬೇಕು. ಇಲ್ಲದಿದ್ದರೆ ನಾವು ರಾಜಕಾರಣಿಗಳೇ ಜಾತಿ ಜಾತಿ ನಡುವೆ ಸಂಘರ್ಷಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು.‌

ಶಾಸಕ ಬಂಡೆಪ್ಪ ಕಾಶಂಪೂರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ,  ಮುಖಂಡ ನಾಸೀರ ಹುಸೇನ್ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next