Advertisement

ಕಾಮನ್ವೆಲ್ತ್‌ನಿಂದ ಸಕೀನಾ ಹೊರಗಿಡಲು ಹುನ್ನಾರ?

06:00 AM Feb 08, 2018 | |

ಬೆಂಗಳೂರು: ಕರ್ನಾಟಕದ ಖ್ಯಾತ ಪವರ್‌ಲಿಫ್ಟರ್‌ ಫ‌ರ್ಮಾನ್‌ ಬಾಷಾ ಅವರ ಶಿಷ್ಯೆ ಸಕೀನಾ ಖಾತುನ್‌ಗೆ ಮುಂಬರುವ ಕಾಮನ್ವೆಲ್ತ್‌ ಕೂಟದಿಂದ ಕೊಕ್‌ ನೀಡಲಾಗಿದೆ.

Advertisement

ಅರ್ಹತೆ ಇದ್ದರೂ ಉದ್ದೇಶಪೂರ್ವಕವಾಗಿ ಭಾರತೀಯ ಪ್ಯಾರಾಲಿಂಪಿಕ್ಸ್‌ ಸಂಸ್ಥೆ ಪವರ್‌ಲಿಫ್ಟರ್‌ಗಳ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದಿದೆ ಎಂದು ಸಕೀನಾ ಮಾಧ್ಯಮದ ಎದುರು ಬೇಸರ ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ ತನಗೆ ನ್ಯಾಯವಾಗಿ ಸಿಗಬೇಕಾದ ಅವಕಾಶ ಸಿಗದಿದ್ದರೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಸಕೀನಾಗೆ ಅನ್ಯಾಯವಾಗಿದೆ: ಕೋಚ್‌ ಫ‌ರ್ಮಾನ್‌: ಈ ಕುರಿತಂತೆ ಉದಯವಾಣಿಗೆ ಕೋಚ್‌ ಫ‌ರ್ಮಾನ್‌ ಬಾಷಾ ಪ್ರತಿಕ್ರಿಯಿಸಿದ್ದಾರೆ. ಅವರು ಹೇಳಿದ್ದು ಹೀಗೆ..ಸಕೀನಾ 4 ವರ್ಷಗಳಿಂದ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ದಿನವಿಡೀ ಕ್ರೀಡಾಂಗಣದಲ್ಲಿ ರಕ್ತ, ಬೆವರು ಹರಿಸುತ್ತಿರುವುದನ್ನು ಹತ್ತಿರದಿಂದ ನೋಡಿದ್ದೇನೆ. ಕೋಚ್‌ ಆಗಿ ಇದೆಲ್ಲ ನೋವು ತಂದಿದೆ. ಖುಷಿಯ ದಿನಗಳು ಮುಂದೆ ಬರಬಹುದು ಎನ್ನುವುದು ಆಕೆಯ ಕನಸಾಗಿತ್ತು. ಆದರೆ ಭಾರತೀಯ ಪ್ಯಾರಾ ಒಲಿಂಪಿಕ್ಸ್‌ ಸಂಸ್ಥೆ (ಪಿಸಿಐ) ಮಾಡಿರುವ ಬೇಜವಾಬ್ದಾರಿ ಕೆಲಸದಿಂದ ಪ್ರತಿಭಾವಂತೆಗೆ ಸಿಗಬೇಕಾದ ಅವಕಾಶ ತಪ್ಪಿದೆ. ಇದನ್ನು ಸರಿಪಡಿಸುವವರು ಯಾರು? ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳದೆ ಅವರದ್ದೇ ಸರಿ ಅನ್ನುವ ರೀತಿಯಲ್ಲಿ ಪಿಸಿಐ ಅಧಿಕಾರಿಗಳು ಮಾತನಾಡುವುದು ಬೇಸರ ತಂದಿದೆ. ಅರ್ಹತೆ ಪಡೆದುಕೊಂಡ ಮೇಲೆ ಆಯ್ಕೆಯಲ್ಲಿ ಇಂತಹದೊಂದು ತಪ್ಪು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಪರಸ್ಪರ ಕೆಸರೆರಚಾಟ: ಈ ಬಗ್ಗೆ ಉದಯವಾಣಿ ಮೊದಲು ಭಾರತೀಯ ಪ್ಯಾರಾ ಪವರ್‌ಲಿಫ್ಟಿಂಗ್‌ ಸಂಸ್ಥೆ ಕಾರ್ಯದರ್ಶಿ ವಿಜಯ್‌ ಮುನೀಶ್ವರ ಅವರನ್ನು ಮಾತನಾಡಿಸಿತು. ಈ ಬಗ್ಗೆ ತನಗೇನೂ ಗೊತ್ತೇ ಇಲ್ಲ. ಪಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇದಕ್ಕೆ ಉತ್ತರ ನೀಡಬೇಕು ಎಂದರು.

ಮುನೀಶ್ವರ ಹೇಳಿಕೆಗೆ ಸಿಇಒ ಶಂಷಾದ್‌ ಕಿಡಿ: ಘಟನೆಗೆ ಕಾರಣ ಪಿಸಿಐ ಸಿಇಒ ಎಂದು ಪ್ರತಿಕ್ರಿಯಿಸಿದ ಭಾರತೀಯ ಪ್ಯಾರಾ ಪವರ್‌ಲಿಫ್ಟಿಂಗ್‌ ಸಂಸ್ಥೆ ಕಾರ್ಯದರ್ಶಿ ವಿಜಯ್‌ ಮುನೀಶ್ವರ ವಿರುದ್ಧ ಪಿಸಿಐ ಸಿಇಒ ಶಂಷಾದ್‌ ಕಿಡಿಕಾರಿದ್ದಾರೆ. ಅವರೊಬ್ಬ ಬೇಜಾವಾಬ್ದಾರಿ ವ್ಯಕ್ತಿ ಎಂದು ಹೇಳಿದ್ದಾರೆ. ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದರು. ಅಷ್ಟೇ ಅಲ್ಲ ಸಮಸ್ಯೆಯನ್ನು ಸರಿಪಡಿಸಿ ಸಕೀನಾ ಕಾಮನ್ವೆಲ್ತ್‌ಗೆ ಕಳುಹಿಸುವ ಪ್ರಯತ್ನ ನಡೆಸುತ್ತೇನೆ ಎಂದರು.

Advertisement

ಯಾರಿವರು ಸಕೀನಾ? ಏನಿದು ಘಟನೆ?
ಸಕೀನಾ ಮೂಲತಃ ವೆಸ್ಟ್‌ ಬೆಂಗಾಲ್‌ನವರು. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಫ‌ರ್ಮಾನ್‌ ಬಾಷಾ ಅವರಿಂದ ಪವರ್‌ಲಿಫ್ಟಿಂಗ್‌ ತರಬೇತಿ ಪಡೆಯುತ್ತಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿದ್ದಾರೆ. ಹಲವು ಕೂಟಗಳಲ್ಲಿ ಕರ್ನಾಟಕವನ್ನೇ ಪ್ರತಿನಿಧಿಸಿದ್ದಾರೆ. ಕನ್ನಡಿಗರೇ ಆಗಿದ್ದಾರೆ. ಇದೇ ವರ್ಷ ಏ.4ರಿಂದ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ಕೂಟ ನಡೆಯಲಿದ್ದು ಸಕೀನಾ ಕೂಡ ಇದಕ್ಕೆ ಹಗಲಿರುಳೆನ್ನದೆ ತಯಾರಿ ನಡೆಸಿದ್ದರು. ವಿದೇಶದಲ್ಲಿ ನಡೆದ ಆಯ್ಕೆ ಕೂಟಗಳಲ್ಲಿ ಭಾಗವಹಿಸಿ ಪದಕದೊಂದಿಗೆ ಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದರು. ಆದರೆ ಮೆಕ್ಸಿಕೊದಲ್ಲಿ ನಡೆದ ಕೂಟದಲ್ಲಿ ಪದಕ ಗೆದ್ದಿಲ್ಲ ಎಂದು ಅರ್ಹತೆ ನಿರಾಕರಿಸಲಾಗಿದೆ. ಡೆಡ್‌ಲೈನ್‌ ಸಮಯದೊಳಗೆ ಪದಕ ಗೆದ್ದಿದ್ದರೂ ಮೆಕ್ಸಿಕೊ ಕೂಟವನ್ನು ಆಧಾರವಾಗಿ ಕೇಳುತ್ತಿರುವ ಪಿಸಿಐ ಮೇಲೆ ಸಕೀನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next