ಬೆಂಗಳೂರು: “ರಾಜ್ಯವು ಬರದಿಂದ ತತ್ತರಿಸಿದ್ದು, ಇನ್ನೂ ಶೇ.70ರಷ್ಟು ಬಿತ್ತನೆ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮತ್ತು ವಿದೇಶ ಪ್ರವಾಸ ಹಮ್ಮಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಜಯನಗರದ ಬಂಟರ ಸಂಘದಲ್ಲಿ ನಡೆದ ಕೃತ ಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, “ನಾವೇನೂ ಇದನ್ನು ಮಾಡಬೇಡಿ ಎಂದು ಹೇಳುತ್ತಿಲ್ಲ. ಆದರೆ, ಇದು ಸಕಾಲ ಅಲ್ಲ ಎನ್ನುತ್ತಿದ್ದೇವೆ ಅಷ್ಟೇ. ಅದಕ್ಕೂ ಟೀಕೆ ಮಾಡುತ್ತೀರಿ, ಪ್ರತಿಪಕ್ಷದ ಬಗ್ಗೆ ಹಗುರವಾಗಿ ಮಾತನಾಡುತ್ತೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ನಾವು “105 ಶಾಸಕರಿದ್ದೇವೆ; ನೀವು 37 ಸೀಟು ಹೊಂದಿದವರು ಎನ್ನುವುದು ನೆನಪಿರಲಿ’ ಎಂದು ತೀಕ್ಷ್ಣವಾಗಿ ಹೇಳಿದರು.
ಸಮಸ್ಯೆಗಳನ್ನು ತೆಗೆದುಕೊಂಡು ಬಂದ ಜನರಿಗೆ “ಮೋದಿಗೆ ಓಟು ಹಾಕಿದ್ದೀರಾ, ಅವರನ್ನೇ ಕೇಳಿ’ ಎಂಬ ದುರಹಂಕಾರದ ಉತ್ತರ ನೀಡುತ್ತಾರೆ ಸಿಎಂ. ಈ ಧಿಮಾಕಿನ ಮಾತುಗಳಿಗೆ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ಇದೊಂದು ಬೇಜವಾಬ್ದಾರಿ ಸರ್ಕಾರವಾಗಿದ್ದು, ಇದ್ದೂ ಸತ್ತಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತದಾರರಿಗೆ ಅವಮಾನ – ಅಶೋಕ್: ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ಅಹವಾಲು ತೆಗೆದುಕೊಂಡು ತಮ್ಮ ಬಳಿ ಬಂದ ಮತದಾರರನ್ನು ಅವಮಾನಿಸುವ ಮೂಲಕ ಮುಖ್ಯಮಂತ್ರಿ ದೇಶದ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ.
ಈ ರೀತಿಯ ಘಟನೆಗಳು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಮತದಾರರನ್ನು ಅವಮಾನಿಸುವ ಹೇಳಿಕೆಗಳನ್ನು ಅವರು ನೀಡಿದ್ದಾರೆ. ಮುಖ್ಯಮಂತ್ರಿಗಳು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ನೂತನ ಸಂಸದ ತೇಜಸ್ವಿ ಸೂರ್ಯ, ಶಾಸಕ ವಿ.ಸೋಮಣ್ಣ ಮಾತನಾಡಿದರು.