ಅತ್ತ ಉಕ್ರೇನ್ ಮೇಲೆ ರಷ್ಯಾ ದಾಳಿ, ಇತ್ತ ತೈವಾನ್ ಮೇಲೆ ದಾಳಿಗೆ ಚೀನ ತಯಾರಿ… ಇಡೀ ಜಗತ್ತು ಮಗದೊಂದು ಯುದ್ಧಕ್ಕೆ ಸನ್ನದ್ಧವಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ವೇಳೆ ತೈವಾನ್ ಮೇಲೆ ಚೀನ ಆಕ್ರಮಣ ಮಾಡಿದರೆ ನಾವು ಸಹಾಯಕ್ಕೆ ಬರುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಣೆ ಮಾಡಿರುವುದು ಕುತೂಹಲಕ್ಕೂ ಕಾರಣವಾಗಿದೆ. ಹಾಗಾದರೆ ಈ ಯುದ್ಧ ಶತಸಿದ್ಧವೇ? ಯುದ್ಧವಾದರೆ ಏನಾಗುತ್ತೆ? ಯುದ್ಧಕ್ಕೆ ಕಾರಣಗಳೇನು? ಈ ಕುರಿತ ಒಂದು ಸಮಗ್ರ ನೋಟ ಇಲ್ಲಿದೆ…
ವಿವಾದ ಶುರುವಾಗಿದ್ದು ಯಾವಾಗ?
ಕಳೆದ ವರ್ಷದ ಅಕ್ಟೋಬರ್ 1ರಂದು ಚೀನ ತನ್ನ 72ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತೈವಾನ್ ವೈಮಾನಿಕ ಪ್ರದೇಶದ ಮೇಲೆ 100 ಜೆಟ್ ವಿಮಾನಗಳನ್ನು ಹಾರಿಸಿತು. ಈ ಮೂಲಕ ತೈವಾನ್ ಮೇಲೆ ಯಾರೇ ಕಣ್ಣು ಹಾಕಿದರೂ ಬಿಡುವುದಿಲ್ಲ. ಇದು ಸಂಪೂರ್ಣವಾಗಿ ನಮ್ಮ ಭಾಗವೇ ಆಗಿದ್ದು ಇದನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡಿತು. ಇದಕ್ಕೆ ಪೂರಕವಾಗಿ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದಾಗ ಪುತಿನ್‌ಗೆ ಚೀನ ಸಂಪೂರ್ಣವಾಗಿ ಸಹಕಾರವನ್ನೂ ನೀಡಿತು. ಈ ಮೂಲಕ ಮುಂದೊಂದು ದಿನ ತಾವೂ ತೈವಾನ್ ಮೇಲೆ ದಾಳಿ ಮಾಡಬಹುದು ಎಂಬ ಮುನ್ನೆಚ್ಚರಿಕೆ ನೀಡಿತು.
ತೈವಾನ್ ಸ್ವತಂತ್ರ ದೇಶವೇ?
ಇಲ್ಲ. ಕೇವಲ ವ್ಯಾಟಿಕನ್ ಸಿಟಿ ಸೇರಿದಂತೆ ಜಗತ್ತಿನ 15 ದೇಶಗಳು ಮಾತ್ರ ತೈವಾನ್ ಅನ್ನು ಸ್ವತಂತ್ರ ದೇಶ ಎಂದು ಗುರುತಿಸಿವೆ. ಆದರೆ ದೊಡ್ಡ ದೊಡ್ಡ ದೇಶಗಳು ಇಂದಿಗೂ ತೈವಾನ್ ಅನ್ನು ಸ್ವತಂತ್ರ ಎಂದು ಪರಿಗಣಿಸಿಲ್ಲ. ಇದಕ್ಕೆ ಕಾರಣಗಳೂ ಉಂಟು. ಒಂದು ವೇಳೆ ತೈವಾನ್ ಸ್ವತಂತ್ರ ಎಂದು ಗುರುತಿಸಿದರೆ, ಚೀನ ಆರ್ಥಿಕವಾಗಿ ತಮ್ಮ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಇತ್ತು. ಹೀಗಾಗಿ ತೈವಾನ್ ಅನ್ನು ಇಂದಿಗೂ ರಿಪಬ್ಲಿಕ್ ಆಫ್ ಚೀನ (ಆರ್‌ಒಸಿ) ಎಂದೇ ಕರೆಯಲಾಗುತ್ತದೆ. ಆದರೆ ಚೀನಕ್ಕೆ ಇರುವ ಹೆಸರು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನ (ಪಿಆರ್‌ಸಿ).
ತೈವಾನ್ ಮೇಲೇಕೆ ಚೀನ ಕಣ್ಣು?
ಇದಕ್ಕೊಂದು ಇತಿಹಾಸವಿದೆ. ತೈವಾನ್‌ಗೆ ಮೊದಲಿದ್ದ ಹೆಸರು ಫಾರ್ಮೋಸಾ. ಚೀನದ ಪೂರ್ವ ಭಾಗದಲ್ಲಿರುವ ಪುಟ್ಟ ದ್ವೀಪವಿದು. 1949ರಲ್ಲಿ ಚೀನದ ಕಮ್ಯೂನಿಸ್ಟರು ಮತ್ತು ಅಧಿಕಾರ ನಡೆಸುತ್ತಿದ್ದ ಕ್ಯುಮಿಂಟಾಂಗ್ ಪಕ್ಷದ ನಡುವೆ ದೊಡ್ಡ ಸಿವಿಲ್ ವಾರ್ ನಡೆದು ಕ್ಯುಮಿಂಟಾಂಗ್ ನಾಯಕರು ತೈವಾನ್‌ಗೆ ಹೋಗುತ್ತಾರೆ. ಆಗ ಚೀನದಲ್ಲಿ ಕಮ್ಯೂನಿಸ್ಟರ ಆಳ್ವಿಕೆ ಬರುತ್ತದೆ. ಆಗಿನಿಂದಲೂ ತೈವಾನ್ ಅನ್ನು ತನ್ನೊಳಗೆ ಸೇರಿಸಿಕೊಳ್ಳಲು ಚೀನ ಯತ್ನಿಸುತ್ತಲೇ ಇತ್ತು. ಅಂದ ಹಾಗೆ ತೈವಾನ್ ಪೂರ್ವ ಚೀನ ಸಮುದ್ರದಲ್ಲಿದ್ದು, ಇದರ ಸುತ್ತ ಚೀನ, ಹಾಂಕ್‌ಕಾಂಗ್, ಫಿಲಿಪ್ಪಿನ್ಸ್, ದಕ್ಷಿಣ ಕೊರಿಯಾ, ಜಪಾನ್ ದೇಶಗಳಿವೆ. 1949ರಿಂದಲೂ ತೈವಾನ್ ಅನ್ನು ತನ್ನೊಳಗೆ ಸೇರಿಸಿಕೊಳ್ಳಲು ಚೀನ ಪ್ರಯತ್ನಿಸುತ್ತಲೇ ಇದೆ. ಆದರೆ, ತೈವಾನ್ ಮಾತ್ರ ತನ್ನನ್ನು ಸ್ವತಂತ್ರ ದೇಶವೆಂದು ಕರೆದುಕೊಳ್ಳಲು ಇಚ್ಚಿಸುತ್ತಿದೆ. ಜತೆಗೆ ಕೋಲ್ಡ್ ವಾರ್ ಸಮಯದಲ್ಲೂ ತೈವಾನ್ ಚೀನ ಜತೆಗೆ ನಿಂತಿರಲಿಲ್ಲ. 1971ರ ಅನಂತರ ತೈವಾನ್ ಜತೆ ಅಮೆರಿಕ ಸಂಬಂಧ ಬೆಳೆಸಿಕೊಂಡಿದೆ. ಅದೂ ರಿಚರ್ಡ್ ನಿಕ್ಸನ್ ಅವರು ಅಧ್ಯಕ್ಷರಾಗಿದ್ದಾಗ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸ್ಸಿಂಜರ್ ಮೂಲಕ ಗೌಪ್ಯವಾಗಿ ತೈವಾನ್ ಜತೆಗೆ ಗೆಳೆತನ ಬೆಳೆಸಿಕೊಳ್ಳಲಾಯಿತು. ಇದಾದ ಮೇಲೆ ಚೀನ-ತೈವಾನ್ ಸಂಬಂಧ ಗಟ್ಟಿಯಾಗಿದ್ದು ಭದ್ರತಾ ದೃಷ್ಟಿಯಿಂದಲೂ ಇದು ಅತ್ಯಂತ ಮಹತ್ವದ್ದಾಗಿದೆ. ಅಲ್ಲದೆ ಇದು ಶಸ್ತ್ರಾಸ್ತ್ರಗಳಿಗಾಗಿಯೂ ಅಮೆರಿಕವನ್ನೇ ನೆಚ್ಚಿಕೊಂಡಿದೆ.
1975ರ ಅನಂತರದ ಬೆಳವಣಿಗೆಗಳು
ತೈವಾನ್ ನಾಯಕನಾಗಿದ್ದ ಕ್ಯುಮಿಂಟಾಂಗ್ ನಾಯಕ ಚಾಯಿಂಗ್ ಕೈ-ಶೇಕ್ 1975ರಲ್ಲಿ ಸಾವನ್ನಪ್ಪುತ್ತಾರೆ. ಆಗ ದೇಶದಲ್ಲಿ ಜಾರಿಯಲ್ಲಿದ್ದ ಮಾರ್ಷಿಯಲ್ ಕಾನೂನನ್ನು ತೆಗೆದುಹಾಕಲಾಗುತ್ತದೆ. ಜತೆಗೆ ಆಡಳಿತದಲ್ಲೂ ಸುಧಾರಣೆಯಾಗಿ ಪ್ರಜಾಪ್ರಭುತ್ವ ಜಾರಿಗೆ ಬರುತ್ತದೆ. 1990ರ ಅನಂತರ ಚೀನ ಮತ್ತು ತೈವಾನ್ ಮಧ್ಯೆ ಸಂಬಂಧಗಳೂ ಸುಧಾರಣೆಯಾಗುತ್ತವೆ. ಅಲ್ಲದೆ 1999ರಲ್ಲಿ ಬ್ರಿಟಿಷರು ಹಾಂಕ್‌ಕಾಂಗ್ ಅನ್ನು ಚೀನದ ವಶಕ್ಕೆ ಒಪ್ಪಿಸಿ ಹೋಗುತ್ತಾರೆ. ಆಗ ಅಲ್ಲಿ ಒನ್ ನೇಶನ್ ಟೂ ಸಿಸ್ಟಂ ನೀತಿ ಜಾರಿಗೆ ಬರುತ್ತದೆ. ಇದೇ ನೀತಿಯನ್ನು ಒಪ್ಪಿಕೊಳ್ಳಿ ಎಂದು ತೈವಾನ್‌ಗೂ ಚೀನ ಹೇಳುತ್ತದೆ. ಆದರೆ ತೈವಾನಿಗಳು ಒಪ್ಪುವುದಿಲ್ಲ. 2000ರಲ್ಲಿ ತೈವಾನ್‌ನಲ್ಲಿ ಕ್ಯುಮಿಂಟಾಂಗ್ ಪಕ್ಷ ಸೋತು, ಡೆಮಾಕ್ರೆಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ ಅಧಿಕಾರಕ್ಕೆ ಬರುತ್ತದೆ. 2004ರಲ್ಲಿ ಚೀನ ಆ್ಯಂಟಿ ಸಕ್ಸೆಷನ್ ಕಾನೂನಿನ ಕರಡು ರೂಪಿಸುತ್ತದೆ. ಇದನ್ನು ತೈವಾನ್ ಅನ್ನು ಗುರಿಯಾಗಿರಿಸಿಕೊಂಡೇ ಮಾಡಲಾಗುತ್ತದೆ. ಈಗ ತೈವಾನ್‌ನಲ್ಲಿ ಪ್ರಜಾ ಪ್ರಭುತ್ವಕ್ಕೆ ಧಕ್ಕೆಯಾಗಬಾರದು, ಅಮೆರಿಕದ ಜತೆ ಇರುವ ಸಂಬಂಧವೂ ಹಾಗೆಯೇ ಉಳಿಯಬೇಕು ಎಂಬ ಕುರಿತಂತೆ ದೊಡ್ಡ ಹೋರಾಟಗಳೇ ನಡೆಯುತ್ತಿವೆ. ಆರ್ಥಿಕವಾಗಿಯೂ ಸ್ವಾತಂತ್ರ್ಯ ಬೇಕು ಎಂದು ತೈವಾನ್ ಜನ ಹೇಳುತ್ತಿದ್ದಾರೆ.
ತೈವಾನ್ ಮತ್ತು ಜಗತ್ತು
ತೈವಾನ್ ಚೀನದ ವ್ಯಾಪ್ತಿಯಿಂದ ದೂರ ಇರುವುದು ಇಡೀ ಜಗತ್ತಿಗೇ ಅನುಕೂಲ. ಹೌದು, ಜಗತ್ತಿನ ಶೇ.65ರಷ್ಟು ಸೆಮಿಕಂಡಕ್ಟರ್ ಚಿಪ್‌ಗಳನ್ನು ಸರಬರಾಜು ಮಾಡುವುದೇ ತೈವಾನ್. ಇದು ಫೋನ್‌ಗಳಿಂದ ಹಿಡಿದು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಗೇಮ್‌ಗಳ ಕನ್ಸೋಲ್‌ಗಳಿಗೆ ಬಳಕೆ ಮಾಡಲಾಗುತ್ತದೆ. ಸದ್ಯ ಜಗತ್ತಿನ ಶೇ.65ರಷ್ಟು ಪೂರೈಕೆಯನ್ನು ತೈವಾನ್ ಮಾಡುತ್ತಿದ್ದರೆ, ಶೇ.18 ಅನ್ನು ದಕ್ಷಿಣ ಕೊರಿಯಾ, ಶೇ.5ರಷ್ಟು ಚೀನ ಮತ್ತು ಇತರರು ಶೇ.12ರಷ್ಟು ಸರಬರಾಜು ಮಾಡುತ್ತಿದ್ದಾರೆ. ಒಮ್ಮೆ ತೈವಾನ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೆ ಇಡೀ ಸೆಮಿಕಂಡಕ್ಟರ್ ಚಿಪ್ ವ್ಯವಸ್ಥೆಯನ್ನೇ ತನ್ನ ಮುಷ್ಠಿಯಲ್ಲಿ ಇರಿಸಿಕೊಳ್ಳಬಹುದು ಎಂಬುದು ಚೀನ ಲೆಕ್ಕಾಚಾರ.
ಈಗ ಯುದ್ಧವಾಗುತ್ತದೆಯೇ?
ಸದ್ಯದ ಪರಿಸ್ಥಿತಿಯಲ್ಲಿ ಯುದ್ಧವಾಗುವ ಸಾಧ್ಯತೆಗಳು ಹೆಚ್ಚು. ಅತ್ತ ರಷ್ಯಾ, ಉಕ್ರೇನ್ ಮೇಲೆ ದಾಳಿ ನಡೆಸಿಯೂ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಪ್ರಭಾವ ಉಳಿಸಿಕೊಂಡಿದೆ. ಇತ್ತ ಚೀನವೂ ತೈವಾನ್ ಮೇಲೆ ದಾಳಿ ಮಾಡಿ ಆ ದೇಶವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಯೋಜನೆ ರೂಪಿಸುತ್ತಿದೆ. ಒಂದು ವೇಳೆ ದೊಡ್ಡ ದೊಡ್ಡ ದೇಶಗಳು ದಿಗ್ಬಂಧನ ಹಾಕಿದರೂ, ರಷ್ಯಾ ರೀತಿಯಲ್ಲೇ ತನ್ನ ಪರಮಾಪ್ತ ದೇಶಗಳ ಜತೆ ಉತ್ತಮ ಸಂಬಂಧ ಇರಿಸಿಕೊಳ್ಳಬಹುದು. ಆಗ ತನ್ನ ಆರ್ಥಿಕತೆ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ನಂಬಿಕೆ ಅದರದ್ದು. ವಿಚಿತ್ರವೆಂದರೆ ಇಂದಿಗೂ ತೈವಾನ್‌ನ ಜನ ಈ ಯುದ್ಧ ಆಗುವುದಿಲ್ಲವೆಂದೇ ಅಂದುಕೊಂಡಿದ್ದಾರೆ.
ಅಮೆರಿಕಕ್ಕೇಕೆ ಚಿಂತೆ?
ರಕ್ಷಣಾತ್ಮಕವಾಗಿಯೂ ಅಮೆರಿಕಕ್ಕೆ ತೈವಾನ್ ಭೂಪ್ರದೇಶ ಅತ್ಯಂತ ಮಹತ್ವದ್ದಾಗಿದೆ. ಇದರ ಹತ್ತಿರವೇ ಅಮೆರಿಕದ ಸೇನಾ ನೆಲೆ ಗಮ್ ದ್ವೀಪವಿದೆ. ಒಂದು ವೇಳೆ ತೈವಾನ್ ಚೀನ ವಶಕ್ಕೆ ಹೋದರೆ ಸುತ್ತಲಿನ ದೇಶಗಳಿಗೂ ರಕ್ಷಣಾತ್ಮಕವಾಗಿ ಪೆಟ್ಟು ಬೀಳಬಹುದು ಎಂಬ ಆತಂಕವಿದೆ. ಹೀಗಾಗಿಯೇ ಅಮೆರಿಕ, ಭಾರತ, ಆಸ್ಟ್ರೇಲಿಯ ಮತ್ತು ಜಪಾನ್ ದೇಶಗಳು ಸೇರಿ ಕ್ವಾಡ್ ಮತ್ತು ಅಮೆರಿಕ, ಯುಕೆ, ಆಸ್ಟ್ರೇಲಿಯ ಸೇರಿ ಆಕುಸ್ ಎಂಬ ಒಕ್ಕೂಟ ರಚಿಸಿಕೊಂಡಿವೆ. ಇವೆಲ್ಲವೂ ಇಂಡೋ ಪೆಸಿಫಿಕ್ ಭಾಗದಲ್ಲಿ ಶಾಂತಿ ಏರ್ಪಡಿಸಲು ಮಾಡಿಕೊಂಡ ಕ್ರಮಗಳು ಎಂದು ಹೇಳಿರುವುದಾದರೂ, ಚೀನವನ್ನೇ ದೃಷ್ಟಿಯಾಗಿರಿಸಿಕೊಂಡು ಈ ಒಕ್ಕೂಟ ಮಾಡಿಕೊಳ್ಳಲಾಗಿದೆ ಎಂಬ ಮಾತುಗಳಿವೆ.
ಚೀನ-ತೈವಾನ್ ಸಂಬಂಧ ಹಳಸಿದ್ದು ಯಾವಾಗ?
2020ರ ಅನಂತರ ಚೀನ ಮತ್ತು ತೈವಾನ್ ಮಧ್ಯದ ಸಂಬಂಧ ಹಳಸಿದೆ. ಇದಕ್ಕೆ ಕಾರಣವೂ ಇದೆ. ಕೊರೊನಾ ಹುಟ್ಟಿದ್ದೇ ಚೀನದಲ್ಲಿ ಎಂಬ ಕಾರಣದಿಂದಾಗಿ ಅಮೆರಿಕ ಮತ್ತು ಚೀನ ದೇಶಗಳ ನಡುವಿನ ಸಂಬಂಧ ಹಳಸಿತು. ಹಾಗೆಯೇ ಅತ್ತ ಅಮೆರಿಕ ತೈವಾನ್ ಜತೆಗೆ ತನ್ನ ಸಂಬಂಧವನ್ನು ಇನ್ನಷ್ಟು ಗಾಢ ಮಾಡಿಕೊಂಡಿತು. ಅಲ್ಲದೆ ತನ್ನದೊಂದು ಉನ್ನತ ಮಟ್ಟದ ನಿಯೋಗವನ್ನೂ ಅಮೆರಿಕ, ತೈವಾನ್‌ಗೆ ಕಳುಹಿಸಿತ್ತು. ಈ ಸಂದರ್ಭದಲ್ಲೇ ಚೀನ ತೈವಾನ್‌ನ ರಸ್ತೆಗಳಲ್ಲಿ ತನ್ನ ಮಿಲಿಟರಿ ಪರೇಡ್ ನಡೆಸಿತ್ತು. ಇದಾದ ಮೇಲೆ ಅದೇ ವರ್ಷದ ಅಕ್ಟೋಬರ್‌ನಲ್ಲಿ ಚೀನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಯುದ್ಧಕ್ಕೆ ಸಿದ್ಧರಾಗಿರುವಂತೆ ತನ್ನ ಸೇನೆಗೆ ಆದೇಶಿಸಿದ್ದರು. 2021ರ ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಬೈಡೆನ್, ತೈವಾನ್ ಜತೆಗಿನ ಅಮೆರಿಕ ಸಂಬಂಧ ಕಲ್ಲಿನಷ್ಟು ಗಟ್ಟಿಯಾಗಿದೆ ಎಂದಿದ್ದರು.