Advertisement

ಜಗತ್ತಿನ ಮೇಲೆ ಹೆಚ್ಚುವುದೇ ಚೀನಾ ಪ್ರಭಾವ?

12:22 PM Apr 21, 2020 | Hari Prasad |

ಚೀನಾ ಕೋವಿಡ್ ಸಾಂಕ್ರಾಮಿಕದ ಮೂಲವಾಗಿದ್ದು, ಅದು ಆರಂಭದಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಮುಚ್ಚಿಟ್ಟಿದ್ದರಿಂದಲೇ ಇಂದು ಜಗತ್ತು ಈ ಪರಿ ಪರದಾಡಬೇಕಾಗಿದೆ ಎನ್ನುವುದು ಸತ್ಯ.

Advertisement

ಈ ವಿಷಯವನ್ನೇ ಅಮೆರಿಕ ಆರಂಭದಿಂದಲೇ ಹೇಳುತ್ತಾ ಬರುತ್ತಿದೆ. ಇದೇನೇ ಇದ್ದರೂ, ವೈಶ್ವಿ‌ಕ ಸ್ತರದಲ್ಲಿ ಪಾರಮ್ಯ ಮೆರೆಯುವ ಈ ಎರಡೂ ಜಾಗತಿಕ ಶಕ್ತಿಗಳ ನಡುವಿನ ದಶಕದ ಜಿದ್ದಾಜಿದ್ದಿಯನ್ನು ನಿರ್ಣಾಯಕ ಘಟ್ಟಕ್ಕೆ ತಂದು ನಿಲ್ಲಿಸಿದೆ ಕೋವಿಡ್ 19 ಮಹಾಮಾರಿ.

ವಿಶ್ವದ ಹಿರಿಯಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಕೋವಿಡ್ ನಿಂದಾಗಿ ಅತಿಹೆಚ್ಚು ತೊಂದರೆಗೊಳಗಾಗಿರುವ ರಾಷ್ಟ್ರವಾಗಿ ಬದಲಾಗಿದೆ. ಈವರೆಗೆ ಅಮೆರಿಕದಲ್ಲಿ ಏಳೂವರೆ ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದರೆ, 40 ಸಾವಿರಕ್ಕೂ ಅಧಿಕ ರೋಗಿಗಳು ಮೃತಪಟ್ಟಿದ್ದಾರೆ.

ಒಟ್ಟಲ್ಲಿ ಕೋವಿಡ್ ಮಹಾಮಾರಿ ಅಮೆರಿಕನ್‌ ಸಮಾಜವನ್ನು ತಿರುಗುಮುರುಗಾಗಿಸಿದ್ದು, ಅದರ ಆರ್ಥಿಕತೆಗೂ ಬಹುದೊಡ್ಡ ಪೆಟ್ಟು ನೀಡುತ್ತಿದೆ. ಈ ಹೊಡೆತದಿಂದ ಚೇತರಿಸಿಕೊಳ್ಳಲು ಅಮೆರಿಕಕ್ಕೆ ವರ್ಷಗಳೇ ಹಿಡಿಯಬಹುದು ಎಂದು ಪರಿಣತರು ಹೇಳುತ್ತಿದ್ದಾರೆ.

ಇದೇ ವೇಳೆಯಲ್ಲೇ ಚೀನಾಕ್ಕೂ ಈ ವೈರಸ್ ನಿಂದಾಗಿ ಬಹಳ ಹಾನಿಯಾಗಿದೆಯಾದರೂ ಅದು ತನ್ನ ಆರ್ಥಿಕತೆಗೆ ಚಾಲನೆ ನೀಡುವಲ್ಲಂತೂ ತಕ್ಕಮಟ್ಟಿಗೆ ಯಶಸ್ವಿಯಾಗುತ್ತಿದೆ. ಸ್ಥಿತಿ ಹೀಗೇ ಮುಂದುವರಿದರೆ, ಕೆಲವೇ ವರ್ಷಗಳಲ್ಲಿ ಚೀನಾ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ನಂಬರ್‌ 1 ರಾಷ್ಟ್ರವಾಗಿ ಬದಲಾಗಬಹುದೇ ಎನ್ನುವ ಪ್ರಶ್ನೆ ಏಳುತ್ತಿದೆ.

Advertisement

ಆಗಿನ ಚೀನಾ-ಅಮೆರಿಕ ಸಹಭಾಗಿತ್ವ ಈಗಿಲ್ಲ
ಚೀನಾ ಮತ್ತು ಅಮೆರಿಕದ ನಡುವೆ ಎಷ್ಟೇ ವೈಮನಸ್ಯವಿದ್ದರೂ ಜಾಗತಿಕ ವಿಪತ್ತು ಎದುರಾದಾಗಲೆಲ್ಲ ಈ ಎರಡೂ ರಾಷ್ಟ್ರಗಳು ಈ ಹಿಂದೆ ಜತೆಯಾಗಿ ಕಾರ್ಯನಿರ್ವಹಿಸಿದ್ದವು. 2014ರಲ್ಲಿ ಪಶ್ಚಿಮ ಆಫ್ರಿಕಾ ಎಬೊಲಾ ವೈರಸ್‌ನಿಂದ ಪೀಡಿತವಾಗಿ, 10,000ಕ್ಕೂ ಅಧಿಕ ಜನ ಮೃತಪಟ್ಟಾಗ, ಆ ಭಾಗದ ಜನರ – ಸರಕಾರಗಳ ಸಹಾಯಕ್ಕೆ ಚೀನಾ ಮತ್ತು ಅಮೆರಿಕ ಜಂಟಿಯಾಗಿ ಸಹಕರಿಸಿದವು.

ಸಿಯರಾ ಲಿಯೋನ್‌ನ ಪ್ರಯೋಗಾಲಯಗಳಲ್ಲಿ ಚೀನಿ ಮತ್ತು ಅಮೆರಿಕನ್‌ ವಿಜ್ಞಾನಿಗಳು ಜತೆಯಾಗಿ ಕೆಲಸ ಮಾಡಿದ್ದರು! ವಿಮಾನ ನಿಲ್ದಾಣಗಳಲ್ಲಿ ಬಂದಿಳಿದ ಆವಶ್ಯಕ ವಸ್ತುಗಳನ್ನು ಕೆಳಕ್ಕಿಳಿಸುವಲ್ಲಿ, ವಿಂಗಡಿಸುವಲ್ಲಿ ಚೀನಾ-ಅಮೆರಿಕ ಜತೆಯಾಗಿ ಕೆಲಸ ಮಾಡಿದ್ದವು.

2004ರಲ್ಲಿ ಆಗ್ನೇಯ ಏಷ್ಯನ್‌ ರಾಷ್ಟ್ರಗಳು ಭೀಕರ ಸುನಾಮಿಗೆ ತುತ್ತಾದಾಗಲೂ ಬೀಜಿಂಗ್‌ ಮತ್ತು ವಾಷಿಂಗ್ಟನ್‌ ಪರಿಹಾರ ಕಾರ್ಯದಲ್ಲಿ ಜತೆಯಾಗಿ ಆರ್ಥಿಕ-ವೈದ್ಯಕೀಯ ಸಹಾಯ ಮಾಡಿದವು. 2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾದಾಗ, ಚೀನಾ ಜಗತ್ತಿನ ಸಹಾಯಕ್ಕೆ ಬಂದಿತ್ತು.

2009ರಲ್ಲಿ ಅದು ಘೋಷಿಸಿದ 586 ಶತಕೋಟಿ ಅಮೆರಿಕನ್‌ ಡಾಲರ್‌ಗಳ ಸಹಾಯ ಪ್ಯಾಕೇಜ್‌, ಜಗತ್ತನ್ನು ಮಹಾಕುಸಿತದಿಂದ ರಕ್ಷಿಸುವಲ್ಲಿ ಬಹಳ ಸಹಾಯ ಮಾಡಿತು ಎಂದು ಅಮೆರಿಕನ್‌ ಮಾಧ್ಯಮಗಳು ಅಂದು ಕೊಂಡಾಡಿದ್ದವು. ಆದರೆ ಈಗ, ಅದರಲ್ಲೂ ಟ್ರಂಪ್‌ ಆಡಳಿತಕ್ಕೆ ಬಂದಾಗಿನಿಂದ ಚೀನಾ – ಅಮೆರಿಕ ನಡುವೆ ಮಹಾಕಂದರ ನಿರ್ಮಾಣವಾಗಿದೆ.

ಎಡವುತ್ತಿದೆಯೇ ಅಮೆರಿಕ?
ವಿಶ್ವ ಆರೋಗ್ಯ ಸಂಸ್ಥೆಯ ಮೇಲಿನ ಅಮೆರಿಕದ ಮುನಿಸೇನೋ ಸರಿಯಿದೆ. ಆದರೆ ಜಾಗತಿಕ ಸಂಕಷ್ಟದ ಸಮಯದಲ್ಲಿ ಅಮೆರಿಕ ಏಕಾಏಕಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ನಿಲ್ಲಿಸಿರುವುದು, ನಿಸ್ಸಂಶಯವಾಗಿಯೂ ಅದರ ನಾಯಕತ್ವಕ್ಕೆ ಕಪ್ಪುಚುಕ್ಕೆಯಾಗಿ ಬದಲಾಗಲಿದೆ ಎಂದು ಹಾರ್ವರ್ಡ್‌ ವಿವಿಯ ಅರ್ಥಶಾಸ್ತ್ರಜ್ಞ ಪ್ರೊ| ಜಾನಥನ್‌ ಡ್ಯೂ ಹೇಳುತ್ತಾರೆ.

“ಇದು ಭಾವನಾತ್ಮಕವಾಗಿ ಯೋಚಿಸುವ ವಿಷಯವಲ್ಲ. ವಿಶ್ವ ಆರೋಗ್ಯ ಸಂಸ್ಥೆಗೆ ಫ‌ಂಡಿಂಗ್‌ ತಡೆಹಿಡಿಯುವುದರಿಂದ ಟ್ರಂಪ್‌ಗೆ ಸಮಾಧಾನವಾಗಿರಬಹುದು, ಆದರೆ ಅಮೆರಿಕದ ಜಾಗತಿಕ ವರ್ಚಸ್ಸಿಗಂತೂ ಪೆಟ್ಟು ಬೀಳಲಿದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀನಾ ತನ್ನ ಪ್ರಭಾವವನ್ನು ಮತ್ತಷ್ಟು ಬೆಳೆಸಿಕೊಳ್ಳಲು ಪ್ರಯತ್ನಿಸುವ ಅಪಾಯವಿದೆ”ಎಂದು ಎಚ್ಚರಿಸುತ್ತಾರೆ.

ಇದಷ್ಟೇ ಅಲ್ಲದೆ, ಅಮೆರಿಕಕ್ಕೆ ಮೊದಲ ಆದ್ಯತೆ ಎಂಬ ಟ್ರಂಪ್‌ರ ನೀತಿಯು ಜಾಗತಿಕವಾಗಿ ಅಮೆರಿಕದ ವರ್ಚಸ್ಸು ಕಡಿಮೆಯಾಗಲು ಕಾರಣವಾಗಬಲ್ಲದು. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಅನ್ಯ ದೇಶಗಳನ್ನು ಧಮಕಿ ಹಾಕುವಂತೆ ಮಾತನಾಡುವ ಅವರ ಶೈಲಿ, ಜವಾಬ್ದಾರಿಯಿಂದ ನುಣುಚಿಕೊಂಡು, ಎಲ್ಲಕ್ಕೂ ಚೀನಾವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಗುಣ, ಅಮೆರಿಕನ್‌ ನಾಯಕತ್ವವನ್ನು ನಗೆಪಾಟಲಿಗೆ ಈಡಾಗಿಸಿದೆ ಎನ್ನುತ್ತಾರೆ ನ್ಯೂಯಾರ್ಕ್‌ನ ಗ್ಲೋಬಲ್‌ ನ್ಯೂಟೈಮ್ಸ್‌ ಪತ್ರಿಕೆಯ ಸಂಪಾದಕ ರಿಚರ್ಡ್‌ ಹ್ಯಾಲೆ.

ಐರೋಪ್ಯ ರಾಷ್ಟ್ರಗಳತ್ತ ಚಿತ್ತ
ಈ ಮಹಾಬಿಕ್ಕಟ್ಟಿನ ಸಮಯದಲ್ಲೂ ಅಮೆರಿಕ ವಿವಿಧ ರಾಷ್ಟ್ರಗಳಿಗೆ ಸಹಾಯ ಮಾಡಿತಾದರೂ ಈ ಬಾರಿ ಅದು ಐರೋಪ್ಯ ರಾಷ್ಟ್ರಗಳತ್ತ ಹೆಚ್ಚು ಗಮನಹರಿಸುತ್ತಿಲ್ಲ ಎನ್ನುವುದು ಸತ್ಯ. ಇದರ ಲಾಭಪಡೆದಿರುವ ಚೀನಾ ಐರೋಪ್ಯ ರಾಷ್ಟ್ರಗಳಿಗೆ ಔಷಧ, ಮಾಸ್ಕ್ ಹಾಗೂ ವೆಂಟಿಲೇಟರ್‌ಗಳನ್ನು ಕಳುಹಿಸಿಕೊಡುತ್ತಿದೆ.

ಆದರೂ ಇದರಲ್ಲೂ ಚೀನಾ ಕೆಲವು ಸಂದರ್ಭದಲ್ಲಿ ತನ್ನ ದುರ್ಬುದ್ಧಿ ತೋರಿದೆ. ತನಗೆ ಐರೋಪ್ಯ ರಾಷ್ಟ್ರಗಳು ಸಹಾಯಕ್ಕೆಂದು ಕೊಟ್ಟ ವೈದ್ಯಕೀಯ ಪರಿಕರಗಳನ್ನೇ, ವಾಪಸ್‌ ಹಣಕ್ಕೆ ಮಾರಾಟ ಮಾಡಿ ಹಾಗೂ ಕಳಪೆ ಪರಿಕರಗಳನ್ನು ಪೂರೈಸಿ ಟೀಕೆಗೆ ಒಳಗಾಗಿದೆ. ಇದೇನೇ ಇದ್ದರೂ ಸರ್ಬಿಯಾದಂಥ ರಾಷ್ಟ್ರಗಳಿಗೆ ಚೀನಾ ಬಹಳ ಸಹಕರಿಸುತ್ತಿದೆ.

ಈ ಕಾರಣಕ್ಕಾಗಿಯೇ, ಇತ್ತೀಚೆಗೆ ಸರ್ಬಿಯಾದ ಮುಖ್ಯಸ್ಥರು, ಸರ್ಬಿಯನ್ನರು ಚೀನಾಕ್ಕೆ ಋಣಿಯಾಗಿದ್ದಾರೆ ಎಂದು ಹೇಳಿ, ಐರೋಪ್ಯ ರಾಷ್ಟ್ರಗಳನ್ನು ಹಾಗೂ ಅಮೆರಿಕವನ್ನು ಪರೋಕ್ಷವಾಗಿ ಕಟಕಟೆಯಲ್ಲಿ ನಿಲ್ಲಿಸಿದರು. ಇನ್ನು ಚೀನಾ ಐರೋಪ್ಯ ರಾಷ್ಟ್ರಗಳಷ್ಟೇ ಅಲ್ಲದೆ, ಆಫ್ರಿಕನ್‌ ರಾಷ್ಟ್ರಗಳತ್ತಲೂ ನೆರವಿನ ಹಸ್ತ ಚಾಚುತ್ತಿದ್ದು, ಇದುವರೆಗೂ ಆಫ್ರಿಕಾದ 54 ರಾಷ್ಟ್ರಗಳಿಗೆ ಚೀನಾದಿಂದ ವೈದ್ಯಕೀಯ ಪರಿಕರಗಳು ರವಾನೆಯಾಗಿವೆ. ಇದೇ ವೇಳೆಯಲ್ಲೇ , ಚೀನಾದ ಅಲಿಬಾಬಾ ಸೇರಿದಂತೆ ಅನೇಕ ಕಂಪೆನಿಗಳು ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಅಗತ್ಯ ಟೆಸ್ಟ್‌ ಕಿಟ್‌ಗಳು, ಔಷಧಗಳು ಮತ್ತು ಮಾಸ್ಕ್ ಗಳನ್ನು ಕಳುಹಿಸಿ ಕೊಡುತ್ತಿದೆ.

ವಿಶ್ವಸಂಸ್ಥೆಯಲ್ಲೂ ಪ್ರಾಬಲ್ಯ?
ಚೀನಾದ ಆರಂಭಿಕ ತಪ್ಪುಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಕಡೆಗಣಿಸಿತು ಎಂಬ ಟ್ರಂಪ್‌ ಆರೋಪದಲ್ಲಿ ಸುಳ್ಳೇನೂ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀನಾ ಪ್ರಭಾವಳಿ ಕಳೆದ ಐದು ವರ್ಷದಿಂದ ಅಧಿಕವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಷ್ಟೇ ಅಲ್ಲದೇ ವಿಶ್ವಸಂಸ್ಥೆಯ ವಿವಿಧ ಅಂಗಗಳಲ್ಲೂ ಚೀನಾ ತನ್ನ ಬಲ ಹೆಚ್ಚಿಸಿಕೊಂಡು, ತನಗೆ ಅನುಕೂಲವಾಗುವ ನೀತಿ ನಿಯಮಾವಳಿಗಳನ್ನು ರೂಪಿಸಿಕೊಳ್ಳುತ್ತಲೇ ಬಂದಿದೆ.

ವಿಶ್ವಸಂಸ್ಥೆಯ 15ಕ್ಕೂ ಅಧಿಕ ಏಜೆನ್ಸಿಗಳಲ್ಲಿ ಚೀನಾದ ನಾಯಕತ್ವವಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ), ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ), ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು) ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯಲ್ಲಿ (ಯುನಿಡೋ) ಚೀನಾದ ಪ್ರಾಬಲ್ಯವೇ ಇದೆ. ಈ 15 ಏಜೆನ್ಸಿಗಳಲ್ಲಿ ವಿಶ್ವಬ್ಯಾಂಕ್‌ ನೇತೃತ್ವ ಮಾತ್ರ ಅಮೆರಿಕನ್‌ ನಾಗರಿಕರ ಕೈಯಲ್ಲಿದೆ. ಅಂದರೆ, ಚೀನಾ ಜಾಗತಿಕ ಪಾರಮ್ಯ ಮೆರೆಯುವುದಕ್ಕೆ ಸೂಕ್ತ ವೇದಿಕೆ ಸಿದ್ಧಪಡಿಸಿಕೊಳ್ಳಲು, ವರ್ಷಗಳಿಂದ ತಯಾರಿ ನಡೆಸಿದೆ ಎಂದಾಯಿತು.

ಚೀನಾಕ್ಕೆ ಅದರ ಸರ್ವಾಧಿಕಾರವೇ ಅಡ್ಡಿ
ಚೀನಾ ಜಾಗತಿಕವಾಗಿ ತನ್ನ ವರ್ಚಸ್ಸು ಎಷ್ಟೇ ಬೆಳೆಸಿಕೊಳ್ಳಲು ಪ್ರಯತ್ನಿಸಿದರೂ ಅದರ ಮಾರುಕಟ್ಟೆಯು ಎಷ್ಟೇ ಬಲಶಾಲಿಯಾಗಿದ್ದರೂ ಅದರ ಸರ್ವಾಧಿಕಾರಿ ನೀತಿಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಾಗೂ ಮಾನವ ಹಕ್ಕುಗಳ ಮೇಲೆ ಅದು ಮಾಡುವ ದಾಳಿಗಳು ಅದಕ್ಕೆ ಬಹುದೊಡ್ಡ ಅಡ್ಡಿಯಾಗಲಿವೆ.

ಈಗಲೂ ಚೀನಾ ಎಂದರೆ, ಜಗತ್ತಿಗೆ ಅನುಮಾನ-ಆತಂಕ-ಭಯವಿದೆ. ಹೀಗಾಗಿ, ಅಮೆರಿಕದಷ್ಟು ಪ್ರಭಾವಳಿ ಬೆಳೆಸಿಕೊಳ್ಳುವುದಕ್ಕೆ ಕಷ್ಟಸಾಧ್ಯ ಎನ್ನುತ್ತಾರೆ ಜಾನ್‌ಹಾಪ್‌ಕಿನ್ಸ್‌ ವಿವಿಯ ರಾಜಕೀಯ ತಜ್ಞ ವಿವಿಯನ್‌ ಕ್ಲಾರ್ಕ್‌. ಅಲ್ಲದೇ, ಕೋವಿಡ್ 19 ವೈರಸ್ ವಿಷಯದಲ್ಲಿ ಅದು ಆರಂಭಿಕ ತಿಂಗಳಲ್ಲಿ ಇಟ್ಟ ತಪ್ಪು ಹೆಜ್ಜೆಗಳಿಂದಾಗಿ, ಈಗ ಚೀನಾ ಜಗತ್ತಿನ ಅನೇಕ ದೇಶಗಳಿಗೆ ಅದು ವಿಲನ್‌ ಆಗಿ ಬದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next