Advertisement

ಕಿಮ್ಸ್‌ ಆವರಣದಲ್ಲಿ ತಲೆ ಎತ್ತಲಿದೆ ನೂತನ ಹಾಸ್ಟೆಲ್‌

05:32 PM Oct 04, 2018 | Team Udayavani |

ಹುಬ್ಬಳ್ಳಿ: ಕಿಮ್ಸ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ಹೊಸ ಹಾಸ್ಟೆಲ್‌ ನಿರ್ಮಾಣಕ್ಕೆ ಆಡಳಿತ ಮಂಡಳಿ ನಿರ್ಧರಿಸಿದೆ. ಕಿಮ್ಸ್‌ ಆವರಣದಲ್ಲೇ ಅಂದಾಜು 21 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್‌ ನಿರ್ಮಿಸಲು ಯೋಜನೆ ರೂಪಿಸಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

ಕಿಮ್ಸ್‌ನಲ್ಲಿ ವೈದ್ಯಕೀಯ ಕೋರ್ಸ್‌ ಪ್ರವೇಶಾತಿ ಸೀಟ್‌ಗಳನ್ನು 150 ರಿಂದ 200ಕ್ಕೆ ಏರಿಸಲಾಗಿದೆ. ಇದರಿಂದ ಸಹಜವಾಗಿಯೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿದ್ದು, ಹೊಸದಾಗಿ ಪ್ರವೇಶ ಪಡೆಯುವ ಸ್ನಾತಕೋತ್ತರ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಹಾಸ್ಟೆಲ್‌ ಅನಿವಾರ್ಯವಾಗಿದೆ. ಹೀಗಾಗಿ ಅಂದಾಜು 11.96 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳ ನಿಲಯ ಹಾಗೂ 9.13 ಕೋಟಿ ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣಕ್ಕೆ ಆಡಳಿತ ಮಂಡಳಿ ನಿರ್ಧರಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ವಿಭಾಗ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜನಿಯರಿಂಗ್‌ ವಿಭಾಗ ನೂತನ ಕಟ್ಟಡಗಳ ಅಂದಾಜು ಪತ್ರಿಕೆ ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 

ಹೇಗಿರಲಿದೆ ಕಟ್ಟಡ: 300 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸಲು ಭಾರತೀಯ ವೈದ್ಯಕೀಯ ಸಂಘ (ಎಂಸಿಐ) ಹಾಗೂ ಕಿಮ್ಸ್‌ ನಿರ್ದೇಶಕರ ಸೂಚನೆಯಂತೆ ಜಿ+2 ಮಾದರಿಯಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರತಿ ಮಹಡಿಯು ಅಂದಾಜು 1700 ಚದರ ಮೀಟರ್‌ ವಿಸ್ತೀರ್ಣ ಹೊಂದಿರಲಿದೆ. ಈ ಕಟ್ಟಡದಲ್ಲಿ ಅಂದಾಜು 100 ಕೊಠಡಿಗಳು ಇರಲಿವೆ.

ವಿದ್ಯಾರ್ಥಿಗಳ ನೂತನ ಹಾಸ್ಟೆಲ್‌ ಕಟ್ಟಡದ ನೆಲಮಹಡಿಯಲ್ಲಿ ಅಡುಗೆ ಕೋಣೆ, ವಿಶಾಲವಾದ ಡೈನಿಂಗ್‌ ಹಾಲ್‌, ಟಿವಿ ವೀಕ್ಷಣಾ ರೂಮ್‌, ವಾರ್ಡನ್‌ ರೂಮ್‌ ಇರಲಿದೆ. ಅಲ್ಲದೆ ವಿದ್ಯಾರ್ಥಿಗಳಿಗಾಗಿ 30 ಕೊಠಡಿಗಳು, ಪ್ರತ್ಯೇಕ ಎರಡು ಸಾಮೂಹಿಕ ಬಾತ್‌ ರೂಮ್‌, ಶೌಚಾಲಯ, ಲಿಫ್ಟ್‌, ಕಾರಿಡಾರ್‌, ಲಾನ್‌ ಬೆಳೆಸಲು ಸ್ಥಳ ಇರಲಿದೆ. ಮೊದಲ ಮಹಡಿಯಲ್ಲಿ ಪ್ರತ್ಯೇಕ ಎರಡು ಸಾಮೂಹಿಕ ಬಾತ್‌ರೂಂ, ಶೌಚಾಲಯ, ಗ್ರಂಥಾಲಯ, ಜಿಮ್‌ ಹಾಗೂ 33 ಕೊಠಡಿಗಳಿರಲಿವೆ. ಎರಡನೇ ಮಹಡಿಯಲ್ಲಿ ಪ್ರತ್ಯೇಕ ಎರಡು ಸಾಮೂಹಿಕ ಬಾತ್‌ರೂಂ, ಶೌಚಾಲಯ ಹಾಗೂ 37 ಕೊಠಡಿಗಳು ಇರಲಿವೆ. ಇದಲ್ಲದೆ ಹಾಸ್ಟೆಲ್‌ ಕಟ್ಟಡದಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ಸ್ಥಳ ಇರಲಿದೆ. ಕಟ್ಟಡಕ್ಕೆ ಸೋಲಾರ್‌ ಅಳವಡಿಸಲಾಗುತ್ತಿದ್ದು ಪ್ರತಿದಿನ ವಿದ್ಯಾರ್ಥಿಗಳಿಗೆ ಬಿಸಿ ನೀರು ದೊರಕಲಿದೆ.

ಹೀಗಿರಲಿದೆ ವಿದ್ಯಾರ್ಥಿನಿಯರ ನಿಲಯ: 150 ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ವಸತಿ ಕಲ್ಪಿಸಲು ಜಿ+2 ಮಾದರಿಯಲ್ಲಿ ಕಟ್ಟಡ ನಿರ್ಮಿಸಲು ಯೋಜನೆ ಸಿದ್ಧವಾಗಿದೆ. ನೆಲ ಹಾಗೂ ಮೊದಲ ಮಹಡಿ ಅಂದಾಜು 1530 ಚದರ ಮೀಟರ್‌ ವಿಸ್ತೀರ್ಣದಲ್ಲಿದ್ದರೆ ಎರಡನೇ ಮಹಡಿ ಅಂದಾಜು 707 ಚದರ ಮೀಟರ್‌ ವಿಸ್ತೀರ್ಣದಲ್ಲಿರಲಿದೆ. ಈ ಕಟ್ಟಡದಲ್ಲಿ ಅಂದಾಜು 75 ಕೊಠಡಿಗಳು ಇರಲಿವೆ.

Advertisement

ವಿದ್ಯಾರ್ಥಿನಿಯರ ನೂತನ ಹಾಸ್ಟೆಲ್‌ನ ಕಟ್ಟಡದ ನೆಲಮಹಡಿಯಲ್ಲಿ ಅಡುಗೆ ಕೋಣೆ, ವಾಶ್‌ ರೂಂ, ವಿಶಾಲವಾದ ಡೈನಿಂಗ್‌ ಹಾಲ್‌, ಟಿವಿ ರೂಂ, ವಾರ್ಡನ್‌ ರೂಂ ಜೊತೆಗೆ ಒಟ್ಟು 32 ಕೊಠಡಿಗಳಿರಲಿವೆ. ಅಲ್ಲದೆ ಪ್ರತ್ಯೇಕ ಎರಡು ಸಾಮೂಹಿಕ ಬಾತ್‌ರೂಮ್‌, ಶೌಚಾಲಯ, ಲಿಫ್ಟ್‌, ಕಾರಿಡಾರ್‌, ಲಾನ್‌ ಬೆಳೆಸಲು ಸ್ಥಳಾವಕಾಶ ಇರಲಿದೆ.

ಮೊದಲ ಮಹಡಿಯಲ್ಲಿ ಪ್ರತ್ಯೇಕ ಎರಡು ಸಾಮೂಹಿಕ ಬಾತ್‌ರೂಮ್‌, ಶೌಚಾಲಯ, ಗ್ರಂಥಾಲಯ, ಜಿಮ್‌, 27 ಕೊಠಡಿಗಳಿರಲಿವೆ. ಎರಡನೇ ಮಹಡಿಯಲ್ಲಿ ಪ್ರತ್ಯೇಕವಾದ ಎರಡು ಸಾಮೂಹಿಕ ಬಾತ್‌ರೂಮ್‌, ಶೌಚಾಲಯ ಹಾಗೂ 16 ಕೊಠಡಿಗಳಿರಲಿವೆ. ಇದರೊಂದಿಗೆ ಸ್ಟೋರ್‌ ರೂಂ ಹಾಗೂ ಕಟ್ಟಡದ ಬಲ ಹಾಗೂ ಎಡಕ್ಕೆ ವಿಶಾಲವಾದ ಓಪನ್‌ ಟೆರಸ್‌ ಇರಲಿದೆ.

ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್‌ ವಿಭಾಗ ಹಾಸ್ಟೆಲ್‌ ಕಟ್ಟಡ ನಿರ್ಮಿಸಲಿದೆ. ಇನ್ನು ಕೆಲ ತಿಂಗಳಲ್ಲಿ ಈ ಕಟ್ಟಡಗಳ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಕಿಮ್ಸ್‌ನಲ್ಲಿ ಹೊಸದಾಗಿ ಸ್ನಾತಕೋತ್ತರ ವಿದ್ಯಾರ್ಥಿ-ವಿದ್ಯಾರ್ಥಿನಿಯರ ನಿಲಯದ ಪ್ರತ್ಯೇಕ ಕಟ್ಟಡಗಳನ್ನು ಅಂದಾಜು 21 ಕೋಟಿ ರೂ. ವೆಚ್ಚದಲ್ಲಿ ಜಿ+2 ಮಾದರಿಯಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗುವುದು. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಕೆಲ ತಿಂಗಳಲ್ಲಿ ಇದರ ಕಾಮಗಾರಿಯು ಆರಂಭವಾಗಲಿದೆ.
ಡಾ| ದತ್ತಾತ್ರೆಯ ಡಿ. ಬಂಟ್‌,
ನಿರ್ದೇಶಕರು, ಕಿಮ್ಸ್‌.

„ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next