Advertisement

Bengaluru South: ತೇಜಸ್ವಿ ಮತ್ತೆ ಸ್ಪರ್ಧಿಸುವರೇ? ತೇಜಸ್ವಿನಿ ಟಿಕೆಟ್‌ ಗಿಟ್ಟಿಸುವರೇ?

11:57 PM Jan 19, 2024 | Team Udayavani |

ಬೆಂಗಳೂರು: ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಪ್ರತಿ ಚುನಾವಣೆಯಲ್ಲೂ ಬಿಜೆಪಿಗೆ ಪ್ರತಿಷ್ಠೆಯಾಗಿದ್ದರೆ, ವಿಪಕ್ಷ ಕಾಂಗ್ರೆಸ್‌ಗೆ ದೊಡ್ಡ ಸವಾಲು. ಜೆಡಿಎಸ್‌ನದು ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಾತ್ರ.

Advertisement

ಅಂದಾಜು 32 ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಕಳೆದುಕೊಂಡ ತನ್ನ ಹಿಡಿತವನ್ನು ಮರಳಿ ಪಡೆಯಲು ಕಾಂಗ್ರೆಸ್‌ ಪ್ರತಿಸಲವೂ ಭಗೀರಥ ಪ್ರಯತ್ನ ಮಾಡುತ್ತಲೇ ಇದೆ. ಮಾಜಿ ಮುಖ್ಯಮಂತ್ರಿ ದಿ| ಗುಂಡೂರಾವ್‌ ಅವರ ಪತ್ನಿ ವರಲಕ್ಷ್ಮಿ ಗುಂಡೂರಾವ್‌, ಐಟಿ ದಿಗ್ಗಜ ನಂದನ್‌ ನಿಲೇಕಣಿ, ಹಿರಿಯ ಕಾಂಗ್ರೆಸ್ಸಿಗ ಬಿ.ಕೆ.ಹರಿಪ್ರಸಾದ್‌, ಮಾಜಿ ಸಚಿವ ಎಂ.ಕೃಷ್ಣಪ್ಪ, ಸಚಿವ ಕೃಷ್ಣಬೈರೇ ಗೌಡರಂತಹ ಘಟಾನುಘಟಿಗಳನ್ನು ಕಣಕ್ಕಿಳಿಸಿದರೂ ಜನ ಕೈಹಿಡಿಯಲಿಲ್ಲ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ 1989 ರಲ್ಲಿ ಒಮ್ಮೆ ಮಾತ್ರ ಗೆದ್ದಿದೆ. ಮಾಜಿ ಮುಖ್ಯಮಂತ್ರಿ ಆರ್‌.ಗುಂಡೂರಾವ್‌ ಅವರು ವಿ.ಎಸ್‌.ಕೃಷ್ಣಯ್ಯರ್‌ ಅವರನ್ನು ಸೋಲಿಸುವ ಮೂಲಕ ಕಾಂಗ್ರೆಸ್‌ಗೆ ಗೆಲುವು ತಂದುಕೊಟ್ಟಿದ್ದರು. ಅದೇ ಮೊದಲು, ಅದೇ ಕೊನೆ. ಬಳಿಕ ಕಾಂಗ್ರೆಸ್‌ ನಿರಂತರ ಸೋತಿದೆ.

1991ರಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ| ಕೆ. ವೆಂಕಟಗಿರಿ ಗೌಡ ಅವರ ಮೂಲಕ ಗೆಲುವಿನ ಖಾತೆ ತೆರೆದ ಬಿಜೆಪಿ ಅಲ್ಲಿಂದ ಸೋಲು ಕಂಡಿಲ್ಲ. ಈ ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಿಂದ ಕಸಿದುಕೊಳ್ಳಲು ಕಾಂಗ್ರೆಸ್‌, ಜನತಾದಳ ಎಷ್ಟೇ ಪ್ರಯತ್ನಿಸಿದರೂ ಫ‌ಲ ಸಿಕ್ಕಿಲ್ಲ. ಅನಂತರ ನಡೆದ 7 ಚುನಾವಣೆಗಳಲ್ಲಿ ಸತತವಾಗಿ ಬಿಜೆಪಿ ಗೆಲ್ಲುವ ಮೂಲಕ ಕಮಲದ ಭದ್ರಕೋಟೆಯಾಗಿದೆ. ಈ ಕ್ಷೇತ್ರವನ್ನು ಅನಂತಕುಮಾರ್‌ 6 ಸಲ ಪ್ರತಿನಿಧಿಸಿದ್ದರು. ಸದ್ಯ ತೇಜಸ್ವಿ ಸೂರ್ಯ ಈ ಕ್ಷೇತ್ರದ ಸಂಸದರು.

ಈ ಸಲವೂ ಅಚ್ಚರಿಯೇ?
ಕಳೆದ 2019ರ ಲೋಕಸಭಾ ಚುನಾವಣೆಗೆ ಕೆಲವೇ ಕೆಲವು ತಿಂಗಳು ಬಾಕಿ ಇರುವಾಗ ಅನಂತಕುಮಾರ್‌ ಅಕಾಲಿಕ ನಿಧನ (2018-ನವೆಂಬರ್‌) ಬಿಜೆಪಿ ಪಾಲಿಗೆ ಒಂದು ರೀತಿ ಆಘಾತ ನೀಡಿತ್ತು. ಬಳಿಕ ಸಹಜವಾಗಿಯೇ ಅನಂತ ಕುಮಾರ್‌ ಪತ್ನಿ ತೇಜಸ್ವಿನಿಗೆ ಟಿಕೆಟ್‌ ಸಿಗಬಹುದೆಂಬ ಲೆಕ್ಕಾಚಾರ ಬಿಜೆಪಿಯಲ್ಲಿ ಮಾತ್ರವಲ್ಲದೆ, ರಾಜ್ಯ ರಾಜಕೀಯ ವಲಯದಲ್ಲೂ ದಟ್ಟವಾಗಿತ್ತು. ಚುನಾವಣೆ ಘೋಷಣೆ ಬಳಿಕ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸುವ ಮುನ್ನವೇ ಟಿಕೆಟ್‌ ನಿರೀಕ್ಷೆಯಲ್ಲಿದ್ದ ತೇಜಸ್ವಿನಿ ಅನಂತಕುಮಾರ್‌ ಪ್ರಚಾರವನ್ನೂ ಆರಂಭಿಸಿದ್ದರು. ಆದರೆ ದಿಢೀರನೇ ಪ್ರಚಾರಕ್ಕೆ ವರಿಷ್ಠರು ತಡೆ ಹಾಕಿ ಕೆಲವು ದಿನಗಳ ಬಳಿಕ ಅಚ್ಚರಿ ಆಯ್ಕೆ ಎಂಬಂತೆ ಬಸವನಗುಡಿ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರ ಸಹೋದರನ ಪುತ್ರ ತೇಜಸ್ವಿ ಸೂರ್ಯ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿತು. ಇದು ಅನಂತಕುಮಾರ್‌ ಹಿತೈಷಿಗಳು, ಬೆಂಬಲಿಗರಿಗೆ ಮತ್ತೂಂದು ಆಘಾತವಾಯಿತು. ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸುವ ಮೂಲಕ ಬಿಜೆಪಿಯ ಓಟ ಮುಂದುವರಿಸಿದರು.

ಈಗ ಚುನಾವಣೆ ಘೋಷಣೆಗೆ ಕೆಲವು ತಿಂಗಳಷ್ಟೇ ಬಾಕಿ ಇರುವಾಗ ಬಿಜೆಪಿ ವಲಯದಲ್ಲಿ ಹಲವು ಹೆಸರು ಗಳು ಮುಂಚೂಣಿಗೆ ಬಂದಿವೆ. ಈ ಸಲವಾದರೂ ತೇಜಸ್ವಿನಿಗೆ ಟಿಕೆಟ್‌ ಕೊಡ
ಬೇಕೆಂಬ ಕೂಗು ಮತ್ತೆ ಎದ್ದಿದೆ. ಅಲ್ಲದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ವಿದೇಶಾಂಗ ಸಚಿವ ಜೈಶಂಕರ್‌ ಇಲ್ಲಿಂದ ಸ್ಪರ್ಧಿಸಬಹುದೆಂಬ ಮಾತುಗಳೂ ಹರಿದಾಡುತ್ತಿವೆ. ಹೀಗಾಗಿ ಹಾಲಿ ಸಂಸದರಾಗಿದ್ದರೂ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್‌ ಇನ್ನೂ ಖಾತರಿ ಇಲ್ಲದಂತಾಗಿದೆ. ಆದರೆ ಅವರು ಈಗಾಗಲೇ ಕ್ಷೇತ್ರಗಳಲ್ಲಿ ಪ್ರಚಾರದ ತಾಲೀಮು ಆರಂಭಿಸಿದ್ದಾರೆ. ತಮ್ಮ ಸೀಟನ್ನು ಉಳಿಸಿಕೊಳ್ಳುತ್ತಾರೋ ಅಥವಾ ಬೇರೆಯವರಿಗೆ ತ್ಯಾಗ ಮಾಡುತ್ತಾರೋ ಎಂಬುದಕ್ಕೆ ಬಿಜೆಪಿ ವರಿಷ್ಠರಲ್ಲಿ ಉತ್ತರವಿದೆ. ಬಿಜೆಪಿ-ಜೆಡಿಎಸ್‌ ಚುನಾವಣೆ ಮೈತ್ರಿ ಏರ್ಪಡುವ ಸಾಧ್ಯತೆಗಳಿಂದಾಗಿ ಇಲ್ಲಿ ಈ ಸಲ ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿ ಇರುವುದಿಲ್ಲವೆಂಬುದು ಈ ಸಲದ ವಿಶೇಷ.

Advertisement

ಪ್ರತಿ ಸಲವೂ ಕಾಂಗ್ರೆಸ್‌ನಿಂದ ಹೊಸ ಅಭ್ಯರ್ಥಿ ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಹೊಸ ಅಭ್ಯರ್ಥಿಗಳ ಮೂಲಕ ಏನೇನೋ ಪ್ರಯೋಗ ನಡೆಸುತ್ತಿದೆ. ಬಿ.ಕೆ.ಹರಿಪ್ರಸಾದ್‌ ಮಾತ್ರ ಎರಡು ಸಲ (1999 ಹಾಗೂ 2019) ಸ್ಪರ್ಧಿಸಿದ್ದರೆ ಉಳಿದಂತೆ ಹೊಸ ಅಭ್ಯರ್ಥಿಗಳೇ. ಈ ಸಲವೂ ಕಾಂಗ್ರೆಸ್‌ ತನ್ನ ಅಭ್ಯರ್ಥಿಗೆ ಶೋಧ ನಡೆಸುತ್ತಿದೆ. ಜಯನಗರದ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ (ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ) ಅವರ ಹೆಸರು ಚಲಾವಣೆಯಲ್ಲಿದ್ದರೂ ಸ್ವತಃ ಅವರಿಗೆ ಸ್ಪರ್ಧಿಸುವ ಆಸಕ್ತಿ ಇಲ್ಲವೆಂದು ಹೇಳಲಾಗುತ್ತಿದೆ. ಹೀಗಾಗಿ ಇಲ್ಲಿ ಯಾರೆಂಬ ಪ್ರಶ್ನೆ ಉದ್ಭವವಾಗಿದೆ. ಶ್ರೀನಿವಾಸಪುರದ ಮಾಜಿ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಹೆಸರನ್ನು ಬ್ರಾಹ್ಮಣರೆಂಬ ಜಾತಿ ಕಾರಣಕ್ಕೆ ಕೆಲವರು ತೇಲಿ ಬಿಟ್ಟಿದ್ದಾರೆ. ಅವರು ಕೂಡ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ದಕ್ಷಿಣದಲ್ಲಿ ಅಕ್ಷರಶಃ ಕಾಂಗ್ರೆಸ್‌ಗೆ ಅಭ್ಯರ್ಥಿಗಳದ್ದೇ ಕೊರತೆ. ಅಂತಿಮವಾಗಿ ಸೌಮ್ಯಾ ರೆಡ್ಡಿ ಪಕ್ಷದ ಸೂಚನೆಗೆ ತಲೆಬಾಗಿ ಕಣಕ್ಕಿಳಿ ಯುವರೇ – ಕಾದು ನೋಡಬೇಕಿದೆ.

 ಎಂ.ಎನ್‌.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next