ನವದೆಹಲಿ:ಒಂದು ವೇಳೆ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ಕಳವಳ ಮತ್ತು ಅಸಮಾಧಾನ ಹೊರಹಾಕಿದಲ್ಲಿ ಅಂತಹವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ದೇಶಾದ್ಯಂತ ಕೋವಿಡ್ ಪರಿಸ್ಥಿತಿ ಕುರಿತ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಜಸ್ಟೀಸ್ ಡಿ.ವೈ.ಚಂದ್ರಚೂಡ್ ಶುಕ್ರವಾರ(ಏಪ್ರಿಲ್ 30) ತಿಳಿಸಿದ್ದಾರೆ.
ಇದನ್ನೂ ಓದಿ:ಕೋವಿಡ್ ಲಸಿಕೆ ಕೊರತೆ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮದವರ ವಿರುದ್ಧ ಗರಂ ಅದ ಸಿಎಂ!
ನಾನು ಗಂಭೀರವಾದ ವಿಷಯವನ್ನು ಎತ್ತುತ್ತಿದ್ದೇನೆ. ಯಾವುದೇ ರೀತಿಯ ಅಡೆತಡೆ ಇಲ್ಲದೆಯೇ ಮಾಹಿತಿ ಪ್ರಸಾರಕ್ಕೆ ಅವಕಾಶ ನೀಡಬೇಕು.ಒಂದು ವೇಳೆ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದರೆ, ಅದು ಸರಿಯಲ್ಲ ಎಂದು ಹೇಳಲು ಯಾವ ಕಾರಣವೂ ಇಲ್ಲ. ಅಲ್ಲದೇ ಅಂತಹ ಮಾಹಿತಿ ಹಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು ಎಂದು ಜಸ್ಟೀಸ್ ಚಂದ್ರಚೂಡ್ ಈ ಸಂದರ್ಭದಲ್ಲಿ ಕೇಂದ್ರಕ್ಕೆ ಸೂಚನೆ ನೀಡಿದ್ದಾರೆ.
ಒಂದು ವೇಳೆ ಆಕ್ಸಿಜನ್ ಅಥವಾ ಬೆಡ್ ಕೊರತೆ ಇದೆ ಎಂದು ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳಲ್ಲಿ ವಿಷಯ ಹಂಚಿಕೊಂಡವರ ಮೇಲೆ ಕಿರುಕುಳ, ಕ್ರಮ ತೆಗೆದುಕೊಂಡರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಖಡಕ್ ಸಂದೇಶವನ್ನು ರವಾನಿಸಿರುವುದಾಗಿ ತಿಳಿಸಿದ್ದಾರೆ.
ಆಮ್ಲಜನಕ, ಹಾಸಿಗೆ ಕೊರತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಾಗ, ಇವರು ವದಂತಿ ಹಬ್ಬಿಸುತ್ತಿದ್ದಾರೆ ಎಂದು ಭಾವಿಸಬಾರದು ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ.