Advertisement

ಅಣ್ಣಾಮಲೈ ದ.ಕ.ಎಸ್‌ಪಿ ಆಗುವರೇ ?

03:18 PM Jun 20, 2017 | Team Udayavani |

ಮಂಗಳೂರು: “ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿ ಆಗುವಂತೆ ನನಗೆ ಇದುವರೆಗೆ ಯಾರಿಂದಲೂ ಸೂಚನೆ ಬಂದಿಲ್ಲ’ ಎಂದು ಖಡಕ್‌ ಐಪಿಎಸ್‌ ಅಧಿಕಾರಿ ಎಂದೇ ಕರೆಸಿಕೊಂಡಿರುವ ಚಿಕ್ಕಮಗಳೂರು ಜಿಲ್ಲಾ ಎಸ್‌ಪಿ ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.
ಏಕೆಂದರೆ, ದಕ್ಷಿಣ ಕನ್ನಡ ಜಿಲ್ಲೆಯ ಸದ್ಯದ ಕಾನೂನು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರವು ಚಿಕ್ಕಮಗಳೂರು ಎಸ್‌ಪಿ ಅಣ್ಣಾಮಲೈ ಅವರನ್ನು ಶೀಘ್ರದಲ್ಲೇ ಜಿಲ್ಲೆಗೆ ವರ್ಗಾಯಿಸುತ್ತಾರೆ ಎನ್ನುವ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ. ಅಷ್ಟೇಅಲ್ಲ; ಅಣ್ಣಾಮಲೈ ಅವರು ದಕ್ಷಿಣ ಕನ್ನಡ ಜಿಲ್ಲೆ ಎಸ್‌ಪಿ ಆಗಿ ನೇಮಕಗೊಳಿಸುವುದಕ್ಕೆ ಬೆಂಬಲ ವ್ಯಕ್ತಪಡಿಸಿ ಈಗ ಸಾಮಾಜಿಕ ಜಾಲತಾಣಗಳಲ್ಲಿಯೂ ಸಾಕಷ್ಟು ಸಂದೇಶ, ಬರಹಗಳು ಹರಿದಾಡುತ್ತಿವೆ.

Advertisement

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಜಿ. ಬೊರಸೆ
ಅವರೊಂದಿಗೆ ನಡೆಸಿದ ವಿವಾದಾತ್ಮಕ ಮಾತುಕತೆ ವೀಡಿಯೋ ಬಹಿರಂಗಗೊಂಡ ಬಳಿಕ ಅಣ್ಣಾಮಲೈ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ಬಂದಿವೆೆ. ಅಣ್ಣಾಮಲೈ ಅವರಂಥ ದಕ್ಷ ಹಾಗೂ ದಿಟ್ಟತನದ ಪೊಲೀಸ್‌ ಅಧಿಕಾರಿಯೇ ಸೂಕ್ತ ವ್ಯಕ್ತಿ ಎಂಬ ಅಭಿಪ್ರಾಯದ ಮಾತುಗಳು ಕೂಡ ಈಗ ಜಿಲ್ಲೆಯಲ್ಲಿ ವ್ಯಕ್ತವಾಗುತ್ತಿವೆ.

ಈ ನಡುವೆ, ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಮತ್ತು ಇತರ ಭಾಗಗಳಲ್ಲಿ ನಡೆಯುತ್ತಿರುವ ಕೆಲವೊಂದು ಅಹಿತಕರ
ಘಟನೆಗಳ ಹಿನ್ನೆಲೆಯಲ್ಲಿ ಅವುಗಳನ್ನು ನಿಯಂತ್ರಿಸಲು ಹಾಗೂ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ
ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಅಣ್ಣಾಮಲೈ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡುವ ಬಗ್ಗೆಯೂ ಸರಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿದೆ.

ಈ ಕುರಿತಂತೆ “ಉದಯವಾಣಿ’ ಸೋಮವಾರ ದೂರವಾಣಿ ಮೂಲಕ ಅಣ್ಣಾಮಲೈ ಅವರನ್ನು ಸಂಪರ್ಕಿಸಿದಾಗ, “ದ.ಕ. ಜಿಲ್ಲೆ ಎಸ್‌ಪಿ ಆಗುವ ಕುರಿತಂತೆ ಇಲ್ಲಿವರೆಗೆ ಯಾರು ಕೂಡ ಮಾತನಾಡಿಲ್ಲ. ನನಗೇನೂ ತಿಳಿದಿಲ್ಲ’ ಎಂದು ಹೇಳಿದ್ದಾರೆ.
ಅಣ್ಣಾಮಲೈ ಅವರು ಈ ಹಿಂದೆ ಉಡುಪಿಯಲ್ಲಿ ಎಸ್‌ಪಿ ಆಗಿ ಸೇವೆ ಸಲ್ಲಿಸಿದ್ದು, ಬಳಿಕ ಚಿಕ್ಕಮಗಳೂರಿಗೆ ವರ್ಗಾವಣೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next