ಬೆಂಗಳೂರು: ವನ್ಯಜೀವಿ ಛಾಯಾಗ್ರಹಣ ಸವಾಲಿನ ಮತ್ತು ಕಠಿಣ ಕೆಲಸ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.
ಫೋಕಸ್ ಅಕಾಡೆಮಿ ಆಫ್ ಆರ್ಟ್ ಫೋಟೋಗ್ರಫಿ ಸಂಸ್ಥೆ ಶುಕ್ರವಾರ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಟಿ.ಎನ್.ಎ. ಪೆರುಮಾಳ್ ಸ್ಮರಣ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಛಾಯಾಗ್ರಾಹಕರು ತಾಳ್ಮೆ ಮತ್ತು ಸಮಯಪ್ರಜ್ಞೆಯಿಂದ ಕೆಲಸ ನಿರ್ವಹಿಸಿದರೆ ಮಾತ್ರ ಅದ್ಭುತ ಫೋಟೋಗಳನ್ನು ಕ್ಲಿಕ್ಕಿಸಬಹುದು ಎಂದು ತಿಳಿಸಿದರು.
ಕೊಡಗು ಜಿಲ್ಲೆಯ ಎಸ್‌ಪಿ ಆಗಿದ್ದ ಸಂದರ್ಭದಲ್ಲಿ ಅಲ್ಲಿನ ಪ್ರಕೃತಿ ಸೊಬಗನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದೆ. ಕೆಲವರು ಫೋಟೋಗಳನ್ನು ವಿಮರ್ಶೆ ಮಾಡುತ್ತಾರೆ. ಆದರೆ ಕ್ಲಿಕ್ಕಿಸಿದ ವ್ಯಕ್ತಿಯ ಪರಿಶ್ರಮದ ಬಗ್ಗೆ ತಿಳಿಯುವುದಿಲ್ಲ. ಒಂದು ಅತ್ಯುತ್ತಮ ಫೋಟೋ ತೆಗೆಯಲು ಛಾಯಾಗ್ರಾಹಕರು ಚಳಿ, ಮಳೆ ಎನ್ನದೇ ಕಾಡುಗಳಲ್ಲಿ ತಿರುಗುತ್ತಾರೆ ಎಂದರು.
ವನ್ಯಜೀವಿ ಸಂರಕ್ಷಕ ಡಾ.ಸಮದ್ ಕೊಟ್ಟೂರ್ ಮಾತನಾಡಿ, ಛಾಯಾಗ್ರಹಣ ವೃತ್ತಿಯಲ್ಲ, ಹವ್ಯಾಸ. ಒಂದು ಫೋಟೋ ಅಲ್ಲಿನ ಸನ್ನಿವೇಶವನ್ನು ತಿಳಿಸುತ್ತದೆ. ಟಿ.ಎನ್.ಎ. ಪೆರುಮಾಳ್ ಅವರು ಒಂದು ಉತ್ತಮ ಚಿತ್ರ ಕ್ಲಿಕ್ಕಿಸಲು ವಾರಗಟ್ಟಲೇ ತಾಳ್ಮೆಯಿಂದ ಕಾಯುತ್ತಿದ್ದರು. ಅವರು ಎಲ್ಲ ಛಾಯಾಗ್ರಾಹಕರಿಗೆ ಮಾದರಿ ಮತ್ತು ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ವನ್ಯಜೀವಿ ಸಂರಕ್ಷಕ ಡಾ.ಸಮದ್ ಕೊಟ್ಟೂರ್ ಅವರಿಗೆ ಟಿಎನ್‌ಎ ಪೆರುಮಾಳ್ ಸ್ಮರಣ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 10 ಸಾವಿರ ರೂ. ನಗದು, ಫಲಕ ಹೊಂದಿದೆ. ಕಾರ್ಯಕ್ರಮದಲ್ಲಿ ಫೋಕಸ್ ಅಕಾಡೆಮಿ ಆಫ್ಆ ರ್ಟ್ ಫೋಟೋಗ್ರಫಿ ಸಂಸ್ಥೆಯ ಅಧ್ಯಕ್ಷ ಕೆ.ಎ. ಶ್ರೀನಿವಾಸ್, ಛಾಯಾಗ್ರಾಹಕ ದಿನೇಶ್ ಕುಂಬ್ಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.