Advertisement

ವನ್ಯ ಜೀವಿಗಳಿಗೂ ಬೇಕು ಇದೇ ಮದಗ

11:52 PM Feb 11, 2020 | mahesh |

ಕುಂದಾಪುರ: ಕಾಡಂಚಿನ ಮದಗಗಳಲ್ಲಿ ಹೂಳು ತುಂಬಿ ಕಾಡುಪ್ರಾಣಿಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ಒದಗಿದೆ. ಬೇಸಗೆ ಆರಂಭವಾಗುವ ಮುನ್ನವೇ ನೀರು ಆರುವ ಕಾರಣ ಸನಿಹದ ಮನೆಗಳ ಬಾವಿಗಳಿಗೂ ಅಂತರ್ಜಲದ ನಿರೀಕ್ಷೆ ಸುಳ್ಳಾಗಿದೆ. ಪಂಚಾಯತ್‌ ವತಿಯಿಂದ ಎರಡು ಬಾರಿ ಹೂಳೆತ್ತಿದರೂ ಮತ್ತೆ ಮಣ್ಣು ತುಂಬಿ ಉಪಯೋಗಶೂನ್ಯವಾಗಿದೆ. ಇದನ್ನು ದುರಸ್ತಿಗೊಳಿಸಿದರೆ ಪ್ರಾಣಿಗಳಿಗೆ ಕುಡಿಯಲು ನೀರು ದೊರೆಯುತ್ತದೆ. ರೈತರಿಗೆ ಕೃಷಿಗೆ ಅನುಕೂಲವಾಗುತ್ತದೆ. ಮನೆಗಳ ಕುಡಿಯುವ ನೀರಿಗೆ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ.

Advertisement

ಎಲ್ಲಿದೆ?
ಸಿದ್ದಾಪುರ ಗ್ರಾಮವು ಐತಿಹಾಸಿಕ ಮಹತ್ವವುಳ್ಳ ಸ್ಥಳವಾಗಿದ್ದು ರಾಜರ ಆಳ್ವಿಕೆಯಲ್ಲಿ ಉತ್ತುಂಗ ಸ್ಥಿತಿಯನ್ನು ತಲುಪಿತ್ತು ಎನ್ನುವುದು ಇಲ್ಲಿನ ಇತಿಹಾಸ. ಸಿದ್ದಾಪುರ ಕೆಳಪೇಟೆಯಲ್ಲಿ ಅರಮನೆಯ ಕುರುಹುಗಳಿದ್ದು ಇದೇ ಪರಿಸರದಲ್ಲಿ ತಾಂತ್ರಿಕವಾಗಿ ವೈಶಿಷ್ಟéಪೂರ್ಣವಾದ 7 ಕೆರೆಗಳಿವೆ. ಸಿದ್ದಾಪುರ ಗ್ರಾಮದ ಪಿರಮಿಡ್‌ ಆಕಾರದ 231 ಹೆಕ್ಟೇರ್‌ ವಿಸ್ತೀರ್ಣದ ಭವ್ಯ ಮೀಸಲು ಅರಣ್ಯ ಸೂರಾಲು ಕಾಡು. ಈ ಕಾಡಿನ ನೆತ್ತಿಯ ತಲೆಯಲ್ಲಿ 5 ಎಕರೆ ವಿಸ್ತೀರ್ಣದ ನೈಸರ್ಗಿಕ ಸೂರಾಲು ಕೆರೆಯಿದ್ದು ವನ್ಯಜೀವಿಗಳಿಗೂ ರೈತರಿಗೂ ಜಲಾಶ್ರಯ ತಾಣವಾಗಿದೆ.

ಕೆರೆಗಳ ತಾಣ
ಈ ಸೂರಾಲು ಕಾಡಿನ ಬುಡದಲ್ಲಿ ಸುತ್ತಲೂ 2 ಗ್ರಾಮ ಗಳಾದ ಸಿದ್ದಾಪುರ ಹಾಗೂ ಉಳ್ಳೂರು- 74 ಗ್ರಾಮಗಳನ್ನು ಒಳಗೊಂಡಂತೆ ಕಾಸಿಕಲ್‌ ಕೆರೆ, ಬ್ರಹ್ಮನ ಕೆರೆ, ನಾಗನ ಕೆರೆ, ರಥ ಬೀದಿ ಕೆರೆ, ಐರಬೈಲ್‌ ಕೆರೆ, ಗುಡಿಕೇರಿ ಕೆರೆಗಳೆಂಬ ನೂರಾರು ಕೆರೆಗಳನ್ನು ಸೂರಾಲು ಕಾಡು ಹೊಂದಿದೆ. ಇದರಲ್ಲಿ ಅತಿ ಪ್ರಮುಖವಾದ ಕೆರೆ ಸಿದ್ದಾಪುರ ಗ್ರಾಮದ ಸ. ನಂಬರ್‌ 225ರಲ್ಲಿರುವ ಕಾರಿಮಕ್ಕಿ ಕೆರೆ(ಮದಗ).

ಒತ್ತುವರಿ
ಕಾರಿಮಕ್ಕಿ ಮದಗ ಅರ್ಧ ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ಆದರೆ ಈ ಕಾರಿಮಕ್ಕಿ ಮದಗ ಇತ್ತೀಚೆಗೆ ಸಾಕಷ್ಟು ಹೂಳು ತುಂಬಿ ಎಪ್ರಿಲ್‌ – ಮೇ ತಿಂಗಳವರೆಗೆ ಬರುವ ನೀರು ಒಣಗಿ ಈ ಕಾರಿಮಕ್ಕಿ ಕೆರೆ ಬಣಗುಡುತ್ತಿದೆ. ವಿಶಾಲವಾಗಿದ್ದ ಕೆರೆ ಒತ್ತುವರಿಯಿಂದಾಗಿ ಈಗ ವಿಸ್ತಾರ ಕಳೆದುಕೊಂಡು ಸಣ್ಣದಾಗುತ್ತಿದೆ. ಆದ್ದರಿಂದ ಇದನ್ನು ಅಳತೆ ಮಾಡಿ ಗಡಿ ಗುರುತು ಹಾಕುವ ಕೆಲಸ ಮೊದಲು ನಡೆಯಬೇಕೆಂದು ಸ್ಥಳೀಯರು ಒತ್ತಾಯಿಸುತ್ತಾರೆ.

ಅಂತರ್ಜಲ
ಕಾರಿಮಕ್ಕಿ ಮದಗದ ಸಮೀಪವಿರುವ 7 -8 ಮನೆಗಳ ಹಾಗೂ ಮದಗದ ಕೆಳ ಭಾಗದಲ್ಲಿ ಇರುವ ಮೇಲ್‌ ಬಾಲೆಬೇರು ಎಂಬಲ್ಲಿನ 8-10 ಮನೆಗಳ ಬಾವಿಗೆ ದೊರೆಯುವ ಅಂತರ್ಜಲ ಮಟ್ಟ ಕುಸಿದಿದೆ. ಮದಗದ ಹೂಳು ತೆಗೆದರೆ ಈ ಭಾಗದ ಅನೇಕ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗುವುದರಲ್ಲಿ ಸಂಶಯ ಇಲ್ಲ.

Advertisement

ಹೂಳು ತೆಗೆದು ಹಾಳು
ಹೂಳು ತೆಗೆಯದೇ ನೀರು ಒಣಗಿ ಕೆರೆಯೇ ಹಾಳಾಗುವುದು ಒಂದೆಡೆ ಯಾದರೆ ಹೂಳು ತೆಗೆದೂ ಹಾಳಾದದ್ದೂ ಇದೆ. ಹೂಳು ತೆಗೆದಾಗ ಕೆರೆಯ ವಿನ್ಯಾಸ ಬದಲಾಗಿದೆ. ಆದ್ದರಿಂದ ಪ್ರಾಣಿಗಳಿಗೆ ನೀರು ಕುಡಿಯಲು ಇದರ ಬಳಿ ಬರಲೂ ಸಾಧ್ಯವಾಗುತ್ತಿಲ್ಲ. ಸೂರಾಲಿನಲ್ಲಿ ಕಾಡುಕೋಣ, ಜಿಂಕೆ ಸೇರಿದಂತೆ ಅನೇಕ ವನ್ಯಜೀವಿಗಳಿಗೆ ಈ ಕೆರೆಯ ನೀರು ಬಸವಳಿದು ಬಾಯಾರಿದಾಗ ಜಲಸೆಲೆಯಾಗಿ ಆಶ್ರಯವಾಗಿತ್ತು. ಆದರೆ ಯಾವಾಗ ಹೂಳು ತೆಗೆದು ಕೆರೆಯ ರಾಚನಿಕ ವಿನ್ಯಾಸ ಬದಲಾಯಿತೋ ಪ್ರಾಣಿಗಳು ಕೆರೆಗೇ ಇಳಿಯದಂತಾಯಿತು. ಪ್ರಾಣಿಗಳ ಉಪಯೋಗಕ್ಕೆ ಇರುವ ಕಾಡಿನ ಬದಿಯ ಕೆರೆ ನೀರು ಉಪಯೋಗಿಸಲು ಪ್ರಾಣಿಗಳಿಗೇ ದಿಗ್ಬಂಧನ ಮಾಡಿದಂತಾಯಿತು. ಹಾಗಾಗಿ ಮುಂದಿನ ಬಾರಿ ಹೂಳೆತ್ತುವಾಗ ಪ್ರಾಣಿಗಳು ಕೆರೆಗೆ ಇಳಿಯುವ ವಿನ್ಯಾಸ ರ್‍ಯಾಂಪ್‌ ಮಾದರಿಯಲ್ಲಿ ರಚಿಸಬೇಕಿದೆ. ಈ ಭಾಗದ ಹಕ್ಕಿಗಳು ಕುಡಿಯಲು ನೀರು ಸಿಗದೇ ಆ ಭಾಗದ ಮನೆಯ ಬಾವಿಗಳ ಬಳಿ ಹೋಗಿ ಕೂಗು ಹಾಕುವ ಕರುಣಾಜನಕ ದೃಶ್ಯ ಇರುತ್ತದೆ ಎನ್ನುತ್ತಾರೆ ಇಲ್ಲಿನ ಜನ.

ಗಡಿಗುರುತು ಹಾಕಲಿ
ಕೆರೆಯ ವಿಸ್ತೀರ್ಣ ದೊಡ್ಡದಿತ್ತು. ಆದ್ದರಿಂದ ಅಳತೆ ಮಾಡಿ ಗಡಿಗುರುತು ಹಾಕಲಿ. ಹೂಳೆತ್ತುವ ಮೂಲಕ ಕಾಡುಪ್ರಾಣಿಗಳಿಗೂ ನೀರು ದೊರೆಯುವಂತಾಗಲಿ.
– ನಾಗಪ್ಪ ಶೆಟ್ಟಿ , ನಿವೃತ್ತ ಅರಣ್ಯಾಧಿಕಾರಿ

ರೈತರಿಗೂ ನೆರವಾಗಲಿ
ಅಳಿವಿನಂಚಿನಲ್ಲಿರುವ ನೈಸರ್ಗಿಕ ಸೂರಾಲು ಕೆರೆಗೆ ಪೂರಕವಾಗಿ ರಕ್ಷಿತಾರಣ್ಯದ ಸುತ್ತಲೂ ನೂರಾರು ಮದಗಗಳಿವೆ. ಸೂರಾಲು ಅರಣ್ಯದಲ್ಲಿ ವಾಸಿಸುವ ವನ್ಯಜೀವಿಗಳಿಗೆ ಕಾಡಿನಿಂದ ಹೊರ ಬಂದಾಗ ನೀರು ಕುಡಿಯಲು ಈ ಮದಗಗಳೇ ಆಶ್ರಯ. ಅದರಲ್ಲಿ ಪ್ರಮುಖವಾದ ಕಾರಿಮಕ್ಕಿ ಕೆರೆಯ ಹೂಳು ತೆಗೆದು ಸರಕಾರ ವನ್ಯಜೀವಿಗಳಿಗೆ ಹಾಗೂ ರೈತರಿಗೂ ಅನುಕೂಲ ಮಾಡಿಕೊಡಬೇಕು.
-ಚಿಟ್ಟೆ ರಾಜಗೋಪಾಲ ಹೆಗ್ಡೆ, ಗ್ರಾಮ ಅರಣ್ಯ ಸಮಿತಿ  ಉಳ್ಳೂರು – 74.

ಹೂಳೆತ್ತಲು ಕ್ರಮ
ಈ ಬಾರಿಯ ಕ್ರಿಯಾಯೋಜನೆ ಮಾಡಿಯಾಗಿದ್ದು ಮುಂದಿನ ಬಾರಿ ನರೇಗಾ ಯೋಜನೆಯಲ್ಲಿ ಹೂಳೆತ್ತುವ ಕ್ರಿಯಾಯೋಜನೆ ತಯಾರಿಸಿ ಹೂಳೆತ್ತಲಾಗುವುದು.
-ರವೀಂದ್ರ ರಾವ್‌, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಸಿದ್ದಾಪುರ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next