Advertisement
ಮಧ್ಯಾಹ್ನ 12.30ರ ವೇಳೆಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಮುಖ್ಯಮಂತ್ರಿಯವರು ಹುಲಿ ಯೋಜನೆಯ ವ್ಯಾಪ್ತಿಯಲ್ಲಿನ ಕಾಡ್ಗಿಚ್ಚಿನಿಂದ ಹೆಚ್ಚು ಹಾನಿಗೊಳಗಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯದ ಕರಡಿಕಲ್ಲು ಬೆಟ್ಟ, ಗುಮ್ಮನಗುಡ್ಡ ಮತ್ತು ಬೋಳಗುಡ್ಡ ಪ್ರದೇಶಗಳಲ್ಲಿ ಅಲ್ಲದೇ ಚಮ್ಮನಹಳ್ಳ, ತಿಪ್ಪನಹಳ್ಳ, ಮದ್ದೂರು ಅರಣ್ಯ ವಲಯ, ಮೂಲೆಹೊಳೆ ಅರಣ್ಯ ಹಾಗೂ ಕರಡಿಬೆಟ್ಟ ಅರಣ್ಯ ವಲಯ, ಕುಂದಕೆರೆ ಅರಣ್ಯ ವಲಯದಲ್ಲಿನ ಪ್ರದೇಶಗಳಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಸಂಚರಿಸಿ ವೈಮಾನಿಕ ಸಮೀಕ್ಷೆ ನಡೆಸಿ ಅರಣ್ಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಹೆಲಿಕಾಪ್ಟರ್ ಸಮೀಕ್ಷೆಯನ್ನು ಮುಗಿಸಿ ಮಂಡ್ಯಕ್ಕೆ ಪ್ರಯಾಣ ಬೆಳೆಸಿದರು.
Related Articles
Advertisement
ಶಾಂತವಾದ ಬಂಡೀಪುರ: ಕಳೆದ ಆರು ದಿನಗಳಿಂದ ತನ್ನ ರುದ್ರನರ್ತನವನ್ನು ತೋರಿಸಿದ ಬೆಂಕಿಯು ಈಗ ಸಂಪೂರ್ಣವಾಗಿ ಶಾಂತವಾಗಿದೆ. ಸಫಾರಿ ವಲಯ, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ವಲಯ, ಕುಂದಕೆರೆ ಸೇರಿದಂತೆ ಬಂಡೀಪುರ ಅರಣ್ಯವಲಯದಲ್ಲಿ ಸಂಪೂರ್ಣವಾಗಿ ಬೆಂಕಿಯನ್ನು ನಂದಿಸಲಾಗಿದೆ.
ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆಯಲು ನಿರ್ಧಾರ
ಚಿಕ್ಕಮಗಳೂರು: ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದಾಗ ಅದನ್ನು ನಂದಿಸಲು ಬೇಸಿಗೆ ಕಾಲದಲ್ಲಿ 3 ತಿಂಗಳ ಕಾಲ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆಯಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸದಾಗಿ ಹೆಲಿಕಾಪ್ಟರ್ ಖರೀದಿಸಲು ಇಲಾಖೆಯಲ್ಲಿ ಹಣದ ಕೊರತೆ ಇರುವುದರಿಂದ ಬಾಡಿಗೆ ಆಧಾರದಲ್ಲಿ ಪಡೆಯಲಾಗುವುದು. ಬೇಸಿಗೆ ಕಾಲದಲ್ಲಿ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚಿನಿಂದಾಗಲಿ ಅಥವಾ ಇನ್ನಾವುದೇ ಕಾರಣದಿಂದ ಬೆಂಕಿ ಬಿದ್ದಲ್ಲಿ ಅದನ್ನು ನಂದಿಸುವ ಉದ್ದೇಶಕ್ಕಾಗಿ ಪ್ರತಿ ವರ್ಷ 50 ಲಕ್ಷ ರೂ.ಗಳನ್ನು ಮೀಸಲಿಡಲಾಗುತ್ತದೆ ಎಂದರು.
ಬಂಡೀಪುರ ಅಭಯಾರಣ್ಯದಲ್ಲಿ ಬೆಂಕಿ ಸ್ವಾಭಾವಿಕವಾಗಿ ಬಿದ್ದಿಲ್ಲ. ಬೆಂಕಿ ಬೀಳಲು ಇಲಾಖೆಯ ವೈಫಲ್ಯ ಕಾರಣವಲ್ಲ. ಯಾರೋ ಬೆಂಕಿಯನ್ನು ಉದ್ದೇಶಪೂರ್ವಕವಾಗಿ ಹಾಕಿದ್ದಾರೆ. ಇಲಾಖೆಯಿಂದ ಈಗಾಗಲೇ ದೂರು ಸಲ್ಲಿಸಲಾಗಿದೆ ಎಂದು ಹೇಳಿದರು. ಇಲಾಖೆ ಸಿಬ್ಬಂದಿಗೆ ಈಗ ನೀಡಲಾಗಿರುವ ಆಯುಧಗಳುಹಳೆಯದಾಗಿದೆ. ಆದ್ದರಿಂದ ಅತ್ಯಾಧುನಿಕ ಆಯುಧಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದರು.