Advertisement

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

02:51 PM Oct 19, 2024 | Team Udayavani |

ಹುಣಸೂರು; ನಾಗರಹೊಳೆ ಉದ್ಯಾನದಿಂದ ಹೊರಬಂದಿರುವ ಐದು ಕಾಡಾನೆಗಳು ಸಾಕಷ್ಟು ಬೆಳೆ ನಷ್ಟ ಮಾಡಿ, ಕೆರೆ ನೀರಿನಲ್ಲಿ ಆಟವಾಡಿ, ಗ್ರಾಮಸ್ಥರನ್ನು ಹಾಗೂ ಅರಣ್ಯ ಇಲಾಖೆಯವರನ್ನು ಕಾಡಿ ಕೊನೆಗೂ ಉಡ್‌ಲಾಟ್‌ನೊಳಗೆ ಬೀಡು ಬಿಟ್ಟಿರುವ ಘಟನೆ ವೀರನಹೊಸಹಳ್ಳಿಗೆ ಸಮೀಪದ ಭರತವಾಡಿಯಲ್ಲಿ ನಡೆದಿದೆ.

Advertisement

ಕಳೆದ ಮೂರು ದಿನಗಳಿಂದ ನಾಗಪುರ, ಭರತವಾಡಿ ಗ್ರಾಮದ ಭಾಗದ ತೋಟದಲ್ಲಿ ಆಶ್ರಯ ಪಡೆದಿದ್ದ ಕಾಡಾನೆಗಳು ಭರತವಾಡಿಯ ವೆಂಕಟೇಶ್, ಇಂದ್ರೇಶ್ ಹಾಗೂ ಕೇರಳ ಮೂಲದವರ ಜಮೀನಿನ ಮುಸುಕಿನ ಜೋಳದ ಬೆಳೆಯನ್ನು ತಿಂದು ತುಳಿದು ಹಾಳು ಮಾಡಿವೆ. ಶುಂಠಿ ಬೆಳೆಯನ್ನು ನಾಶ ಮಾಡಿದೆಯಲ್ಲದೆ ತೆಂಗಿನ ಮರಗಳನ್ನು ಉರುಳಿಸಿವೆ. ವೆಂಕಟೇಶ್‌ರ ಟ್ರಾಕ್ಟರನ್ನು ಹಾನಿಗೊಳಿಸಿವೆ. ನೀರಾವರಿ ಪೈಪ್‌ನ್ನು ಪುಡಿ ಮಾಡಿವೆ. ಮುದಗನೂರು, ವೀರನಹೊಸಹಳ್ಳಿ, ಭರತವಾಡಿಯಲ್ಲಿ ಭತ್ತದ ಪೈರುಗಳನ್ನೇ ನಾಶ ಮಾಡಿದೆ. ತೋಟಕ್ಕೆ ಹಾಕಿದ್ದ ಬೇಲಿಯನ್ನು ಪುಡಿಗಟ್ಟಿಯಲ್ಲದೆ ತೋಟದ ಎರಡು ಕೆರೆಗಳಲ್ಲಿ ಈಜಾಡಿ ಸಂಭ್ರಮಿಸಿವೆ.

ಸಿಡಿಮದ್ದಿಗೂ ಜಗ್ಗದ ಕಾಡಾನೆಗಳು;
ಗುರುವಾರ ಬೆಳಗ್ಗೆ ಐದು ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದ ಸ್ಥಳಗಳಿಗೆ ದೌಡಾಯಿಸಿದ ಅರಣ್ಯ ಸಿಬ್ಬಂದಿ ಹಾಗೂ ಸುತ್ತಮುತ್ತಲ ಸಾವಿರಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಜಮಾಯಿಸಿದ್ದರು. ಒಂದಷ್ಟು ಸಿಡಿಮದ್ದು ಸಿಡಿಸಿದರು. ಯಾವುದೇ ಸದ್ದಿಗೂ ಜಗ್ಗಲಿಲ್ಲ. ಬದಲಾಗಿ ಘೀಳಿಟ್ಟು ಜನರನ್ನೇ ಬೆದರಿಸಿದವು. ಕೊನೆಗೆ ಜೆಸಿಬಿ, ಹಾಗು ಟ್ಯಾಕ್ಟರ್ ಮೂಲಕ ಓಡಿಸಲು ಮುಂದಾದಾಗ ಸಲಗವೊಂದು ಟ್ಯಾಕ್ಟರ್ ಮುಂಭಾಗಕ್ಕೆ ಗುದ್ದಿ ಹಾನಿಗೊಳಿಸಿತು. ಟ್ರ‍್ಯಾಕ್ಟರ್ ಓಡಿಸುತ್ತಿದ್ದ ವೆಂಕಟೇಶ್ ಗಾಯಗೊಂಡರು. ಜನರ ಶಬ್ದ ಕೇಳಿ ಕಾಡಾನೆ ಹಿಂಡು ಅಟ್ಟಿಸಲು ಹೋದ ಅರಣ್ಯ ಅಧಿಕಾರಿ ಚಂದ್ರೇಶ್ ಮತ್ತು ತಂಡದವರ ಮೇಲೆ ದಾಳಿ ಇಡಲು ಮುಂದಾಯಿತು.

ಕಾರ್ಯಾಚರಣೆಗೆ ಜನರ ಅಡ್ಡಿ;
ಸ್ಥಳದಲ್ಲಿ ಜಮಾಯಿಸಿದ್ದ ನೂರಾರು ಮಂದಿಯನ್ನು ಡಿವೈಎಸ್‌ಪಿ ಗೋಪಾಲಕೃಷ್ಣ, ಇನ್ಸ್ಪೆಕ್ಟರ್ ಮುನಿಯಪ್ಪ, ಸಂತೋಷ್‌ಕಶ್ಯಪ್ ನೇತೃತ್ವದ ಪೊಲೀಸರ ತಂಡ ಜನರನ್ನು ನಿಯಂತ್ರಿಸುವುದೇ ಸವಾಲಾಗಿತ್ತು. ಎಷ್ಟೆ ಹೇಳಿದರೂ ಜನರು ಪಟಾಕಿ ಹೊಡೆಯುವುದು, ಕೂಗಾಟ ನಡೆಸುವುದು, ಅತ್ತಿಂದಿತ್ತ ಓಡಾಡಿಸುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಕೆಲವರು ಸೆಲ್ಪಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಕಾಯಾಚರಣೆಗೆ ಸೈ ಎನಿಸಿರುವ ಬಲ ಭೀಮ ಆನೆ ಬಂದರೂ ಜನರ ಕಾಡದಿಂದಾಗಿ ಕಾರ್ಯಾಚರಣೆಗಿಳಿಸಲಾಗಲಿಲ್ಲಾ. ಇದರಿಂದ ಕೆರಳಿದ ಜನರು ಅರಣ್ಯ ಇಲಾಖೆ ವಿರುದ್ದ ಆಕ್ರೋಶಗೊಂಡರು. ಜನರ ಅಡೆತಡೆಯಿಂದಾಗಿ ಸಂಜೆ ವೇಳೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

Advertisement

ರಾತ್ರಿ ಕಾರ್ಯಾಚರಣೆ:
ಕಾಡಾನೆಗಳೀಗ ಎರಡು ತಂಡಗಳಾಗಿದ್ದು, ಜನರ ಸಹಕಾರ ಅತ್ಯಗತ್ಯ, ಆದರೆ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿಯಾಗಿದ್ದು, ಇದೀಗ ಗಣೇಶ ಆನೆಯನ್ನು ಸಹ ಕರೆಸಲಾಗಿದ್ದು, ಸುತ್ತಮುತ್ತಲಿನ ಜನರಿಗೆ ಎಚ್ಚರಿಕೆ ನೀಡಲಾಗಿದೆ. ರಾತ್ರಿ ವೇಳೆಗೆ ನಾಗರಹೊಳೆ ಉದ್ಯಾನಕ್ಕೆ ಅಟ್ಟಲಾಗುವುದೆಂದು ಎಸಿಎಫ್ ಲಕ್ಷ್ಮಿಕಾಂತ್ ಉದಯವಾಣಿಗೆ ತಿಳಿಸಿದರು.

ಇದು ಮಾಮೂಲಿ:
ಜೋಳ ತೆನೆ ಒಡೆಯುತ್ತಿದ್ದಾಗ, ಭತ್ತದ ಬೆಳೆಯ ಘಮಕ್ಕೆ ಈ ಬಾಗದಲ್ಲಿ ಕಾಡಾನೆಗಳು ನಿತ್ಯ ಹೊರಬಂದು ಫಸಲು ನಾಶ ಮಾಡಿ ಕಾಡು ಸೇರುವುದು ನಡೆದುಕೊಂಡು ಬಂದಿದ್ದು, ಜನರು ಕೂಗಾಟ ನಡೆಸಿದ ವೇಳೆ ಅತ್ತಿಂದಿತ್ತ ಚದುರಿ ಮತ್ತಷ್ಟು ಹಾನಿಯಾಗುತ್ತಿದೆ. ಜನರು ಸಂಯಮದಿಂದ ವರ್ತಿಸಿದಲ್ಲಿ ಕಾರ್ಯಾಚರಣೆ ಸುಗಮವಾಗಲಿದೆ. ಆದರೆ ಹೆಚ್ಚಾಗಿ ಜನರು ತಮ್ಮ ಜಮೀನಿನಲ್ಲಿ ಫಸಲು ನಾಶವಾಗುವುದೆಂಬ ಭೀತಿಯಲ್ಲಿ ಕೂಗಾಟ ನಡೆಸಿ ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸುವುದರಿಂದ ಕಾರ್ಯಾಚರಣೆಗೂ ಅಡ್ಡಿಯಾಗಲಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು.

ಆಧುನಿಕ ಶಸ್ತ್ರಾಸ್ತ್ರಗಳಿಲ್ಲದ ಆನೆ ಪಡೆ:
ಕಾಡಾನೆ ಹಿಮ್ಮೆಟ್ಟಿಸಲು ಆನೆ ಕಾರ್ಯ ಪಡೆಬಳಿ ಆಧುನಿಕ ಶಸ್ತ್ರಾಸ್ತ್ರಗಳಿಲ್ಲದೆ ಪರದಾಡುತ್ತಿದ್ದುದ್ದು ಕಂಡುಬಂತು. ಹಳೆಯ ಬಂದೂಕುಗಳು ಇದ್ದರೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಬೆದರಿಕೆ ಗುಂಡು ಹಾರಿಸಲು ಅವರ ಬಳಿ ಸಾಕಷ್ಟು ತೊಪುಗಳು ಇರಲಿಲ್ಲವೆಂಬುದು ರೈತರ ಆರೋಪ, ಇಂತ ಆನೆಪಡೆಯಿಂದ ಪ್ರಯೋಜನವಿಲ್ಲ, ಇನ್ನಾದರೂ ಆಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವಂತೆ ರೈತರು ಸರಕಾರವನ್ನು ಒತ್ತಾಯಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಆನೆ ಕಾರ್ಯಪಡೆ ಡಿಸಿಎಫ್ ನವೀನ್‌ಕುಮಾರ್, ಆರ್.ಎಫ್.ಓ.ನಂದಕುಮಾರ್, ವನ್ಯಜೀವಿ ವಿಭಾಗದ ಎಸಿಎಫ್ ಲಕ್ಷ್ಮಿಕಾಂತ್, ಆರ್.ಎಫ್.ಓ.ಗಳಾದ ಅಭಿಷೇಕ್, ಸುಬ್ರಮಣ್ಯ, ಸೇರಿದಂತೆ ಐವತಕ್ಕೂ ಹೆಚ್ಚು ಮಂದಿ ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next