ತರೀಕೆರೆ: ದುಗ್ಲಾಪುರ ಗ್ರಾಮದ ಬಳಿಯ ಕಡಲೆಕೆರೆಯಲ್ಲಿ ಕಾಡಾನೆಯೊಂದು ಬೆಳಗ್ಗೆಯಿಂದ ಸಂಜೆ ವರೆಗೂ ಬೀಡು ಬಿಟ್ಟು ನೀರಾಟವಾಡಿದೆ. ಸಂಜೆ 6.20ರ ವೇಳೆಗೆ ಕೆರೆಯಿಂದ ಮೇಲೆದ್ದು ಅಕ್ಕಪಕ್ಕದಲ್ಲಿರುವ ಅಡಕೆ ತೋಟಗಳ ನಡುವೆ ದೂಪದಯ್ಯನ ಮಟ್ಟಿ ಗುಡ್ಡದ ಕಡೆಗೆ ಹೆಜ್ಜೆ ಹಾಕಿದೆ.
ಬೆಳಗ್ಗೆ 6.40ರ ಸುಮಾರಿಗೆ ಕೆರೆ ಪಕ್ಕದ ಜಮೀನಿನ ರೈತರೊಬ್ಬರು ಕಾಡಾನೆಯನ್ನು ಗಮನಿಸಿ, ಕೂಡಲೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಈ ವಿಷಯ ಹರಡುತ್ತಿದ್ದಂತೆ ಸುತ್ತಮುತ್ತಲಿನ ಸಿದ್ದರಹಳ್ಳಿ, ಎಲುಗೆರೆ, ದುಗ್ಲಾಪುರ, ಸೀತಾಪುರ ಕಾವಲಿನ ಗ್ರಾಮಸ್ಥರು ತಂಡೋಪತಂಡವಾಗಿ ಕೆರೆ ಏರಿ ತೋಟದ ಒಳಗೆ ಹೋಗಿ ಕಾಡಾನೆ ನೀರಿನಲ್ಲಿ ಆಟವಾಡುತ್ತಿದ್ದುದನ್ನು ವೀಕ್ಷಿಸಿದ್ದಾರೆ.
ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿ ಕಾರಿ ಚಂದ್ರಶೇಖರ್‌ರೆಡ್ಡಿ ಹಾಗೂ ಸಿಬ್ಬಂದಿ, ಕಾರ್ಯತತ್ಪರರಾಗಿ ಆನೆಯನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಆರಂಬಿಸಿದ್ದಾರೆ. ಪಟಾಕಿ ಸಿಡಿಸಿ ಓಡಿಸಲು ಮುಂದಾದರೂ ಆನೆ ನೀರಿನಿಂದ ಮೇಲೆ ಬರಲಿಲ್ಲ. ಒಮ್ಮೆ ಕೆರೆ ದಂಡೆ ಕಡೆಗೆ ಬಂದು ಮರಳಿ ಕೆರೆಯ ಮಧ್ಯಭಾಗಕ್ಕೆ ಸೇರಿಕೊಂಡಿತು.
ಜನರ ಕೂಗಾಟ, ಚೀರಾಟ, ಪಟಾಕಿ ಸದ್ದಿಗೂ ಆನೆ ಜಗ್ಗಲಿಲ್ಲ. ಜನರ ಗುಂಪು ಹೆಚ್ಚಾಗುತ್ತಿದ್ದಂತೆ ಪುನಃ ಕೆರೆಯಲ್ಲಿಯೇ ಈಜಾಡುತ್ತಿತ್ತು. ಕೊನೆಗೂ ಸಂಜೆ 6.20ರ ಸುಮಾರಿಗೆ ನಿಧಾನವಾಗಿ ಕೆರೆಯಿಂದ ಹೊರಬಂದ ಕಾಡಾನೆ ಪಕ್ಕದಲ್ಲಿರುವ ಅಡಕೆ ತೋಟದ ಒಳ ಹೊಕ್ಕು ದುಗ್ಲಾಪುರ ಮತ್ತು ಸಿದ್ದರಹಳ್ಳಿ ಗ್ರಾಮದ ತೋಟಗಳ ಅಂಚಿನಿಂದ ದೂಪದಯ್ಯನಮಟ್ಟಿ ಗುಡ್ಡದ ಕಡೆ ಸಾಗಿತು.
ಆನೆಯನ್ನು ಹಿಂಬಾಲಿಸಿ ನೂರಾರು ಬೈಕ್‌ಗಳಲ್ಲಿ ಯುವಕರು ಹೊರಟರು. ಗುಡ್ಡದ ಬಳಿ ಬಂದ ಆನೆಯನ್ನು ಕಾಡಿಗೆ ಓಡಿಸಲು ಅಲ್ಲಲ್ಲಿ ಪಟಾಕಿ ಸಿಡಿಸಲಾಯಿತು. ನಂತರ ಭದ್ರಾ ಮೇಲ್ದಂಡೆ ನಾಲೆ ದಾಟಿಸಿ ಕಾಡಿಗೆ ಅಟ್ಟಲಾಯಿತು.
ಕೆರೆಯಲ್ಲಿ ಆನೆ ಕಂಡು ಆತಂಕಕೀಡಾಗಿದ್ದ ಗ್ರಾಮಸ್ಥರು ಸಂಜೆ ವೇಳೆಗೆ ನಿಟ್ಟುಸಿರು ಬಿಟ್ಟರು.
ವಲಯ ಅರಣ್ಯಾ ಧಿಕಾರಿ ಚಂದ್ರಶೇಖರ್ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪೊಲೀಸ್ ಅ ಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.