Advertisement

ಕಾಡಾನೆ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಆಗ್ರಹ

04:03 PM Sep 02, 2020 | Suhan S |

ಸಕಲೇಶಪುರ: ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಂತೆ ಆಗ್ರಹಿಸಿ ಶಾಸಕ ಎಚ್‌.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ಮಾಡಲಾಯಿತು.

Advertisement

ಕಾಡಾನೆಗಳ ದಾಳಿಯಿಂದ ತಾಲೂಕಿನ ಕೊಲ್ಲ ಹಳ್ಳಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಅಸ್ತಿಕ ಭಟ್‌ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬೆಳೆಗಾರರು ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಬೆಳೆಗಾರರ ಸಂಘ, ಕರವೇ ನಾರಾಯಣ ಗೌಡರ ಬಣ, ಕರವೇ ಸ್ವಾಭಿಮಾನಿ ಸೇವೆ, ನಮ್ಮ ಕರವೇ ಸಂಘಟನೆಗಳ ನೇತೃತ್ವದಲ್ಲಿ ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ ನಡೆಸಿದರು.

ಶಾಸಕ ಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕಾಡಾನೆಗಳ ಸಂಚಾರವಿದೆ. ಈ ಭಾಗದಲ್ಲಿ 70ಕ್ಕೂ ಹೆಚ್ಚು ಕಾಡಾನೆಗಳಿದ್ದು ಈ ಕುರಿತು ವರದಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಅಲ್ಲಿಂದ ಸರ್ಕಾರ ಹಾಗೂ ಪರಿಸರ ಇಲಾಖೆಗೂ ಕೂಡ ವರದಿ ಸಲ್ಲಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯನ್ನು ತೀವ್ರಗತಿಯಲ್ಲಿ ಮಾಡಿ ಪ್ರತಿಭಟನೆ ಹತ್ತಿಕ್ಕಲು ಅಧಿಕಾರಿಗಳು ಮುಂದಾಗುತ್ತಾರೆ. ಕಾಡಾನೆಗಳಿಂದ ಹಾಳಾಗುವ ಬೆಳೆಗಳಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಸಹ ನೀಡಲಾಗುತ್ತಿಲ್ಲ ಕೂಡಲೆ ಸಮಸ್ಯೆ ಬಗೆಹರಿಸಲುಇನ್ನೊಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಸಕಲೇಶಪುರ ಬಂದ್‌ ಮಾಡಿ ಬೃಹತ್‌ ಪ್ರತಿಭಟನೆ ಮಾಡಲಾಗುತ್ತದೆ ಎಂದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಗಿರೀಶ್‌ ಮಾತನಾಡಿ, ಕಾಡಾನೆ ವಿಚಾರದಲ್ಲಿ ಕೆಲವೊಂದು ಸ್ಥಳೀಯ ಸಮಸ್ಯೆಗಳನ್ನು ಜಿಲ್ಲಾ ಆಡಳಿತದ ಕಡೆಯಿಂದ ಪರಿಹರಿಸ ಬಹುದು. ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದ ಮಟ್ಟದ ಚರ್ಚೆಯಾಗಬೇಕಿದೆ. ಕಳೆದ ತಿಂಗಳು ನಡೆದ ಜಿಲ್ಲಾ ಟಾಸ್ಕ್ ಫೋರ್ಸ್‌ ಸಭೆಯಲ್ಲಿ ಅರಣ್ಯ ಸಚಿವರ ಜೊತೆ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಇನ್ನೊಂದು ಈ ವಾರದಲ್ಲಿ ಕಾಫಿ ಬೆಳೆಗಾರರು, ರೈತರು ಹಾಗೂ ಹೋರಾಟಗಾರರ ಜೊತೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

Advertisement

ಜಿಪಂ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತೀರ್ಥಮಲ್ಲೇಶ್‌, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ತೊ.ಚಾ ಅನಂತಸುಬ್ಬರಾಯ, ತಾಪಂ ಸದಸ್ಯ ಯಡೇಹಳ್ಳಿ ಮಂಜುನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next