Advertisement

ಹುಣಸೂರು: ಎರಡು ವರ್ಷಗಳಿಂದ ಒಂದೇ ಮನೆ ಮೇಲೆ ಪದೇ ಪದೇ ದಾಳಿ ಇಡುತ್ತಿದೆ ಈ ಪುಂಡ ಸಲಗ

03:18 PM Jul 09, 2022 | Team Udayavani |

ಹುಣಸೂರು: ತಾಲೂಕಿನ ಹನಗೋಡು ಹೋಬಳಿಯಲ್ಲಿ ಕಾಡಾನೆಗಳ ಹಾವಳಿ ನಿತ್ಯದ ಗೋಳಾಗಿದೆ.

Advertisement

ಶನಿವಾರ ಮುಂಜಾನೆ 6 ರ ವೇಳೆ ನೇರಳಕುಪ್ಪೆ ಗ್ರಾಮದ ಮುಖ್ಯರಸ್ತೆಯ ಬದಿಯಲ್ಲೇ ಇರುವ ತಿಮ್ಮಶೆಟ್ಟರ ಮನೆ ಮುಂದೆಯೇ ಕಾಣಿಸಿಕೊಂಡ ಸಲಗವು ಮನೆ ಮುಂಭಾಗದ ಗೋಡೆ ಹಾಗೂ ಮೇಲ್ಚಾವಣಿಗೆ ಹಾಕಿದ್ದ ಸಿಮೆಂಟ್ ಶೀಟ್ ಕೆಡವಿ ಹಾಕಿದ್ದಲ್ಲದೆ. ಮನೆಯವರು ಕೂಗಿಕೊಂಡ ವೇಳೆ  ಕೊಟ್ಟೆಗೆಗೆ ನುಗ್ಗಿ ಆಡುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

ಮನೆಯವರ ಕೂಗಾಟ ಕೇಳಿ  ಜಮೀನು ಕೆಲಸಕ್ಕೆ ತೆರಳುತ್ತಿದ್ದವರು ಬಂದು ಕೂಗಾಟ ನಡೆಸಿ ಸಲಗವನ್ನು ಓಡಿಸಿದ್ದಾರೆ. ಇಷ್ಟೇ ಅಲ್ಲದೆ ಮಂಜುನಾಥ ಎಂಬುವವರ ಜಮೀನಿಗೆ ಅಳವಡಿಸಿದ್ದ ಸ್ಪಿಂಕ್ಲರ್ ಸೆಟ್ ತುಳಿದು ಹಾಳುಗೆಡವಿದೆ.

ಪದೇ ಪದೇ ದಾಳಿ: ಈ ಸಲಗಕ್ಕೆ ತಿಮ್ಮಶೆಟ್ಟರನ್ನು ಕಂಡರೆ ಅದೇನು ದ್ವೇಷವೋ ಗೊತ್ತಿಲ್ಲ. ಎರಡು ವರ್ಷಗಳಿಂದ ಇವರ ಮನೆ ಮೇಲೆ ಇದೇ ಸಲಗ ಮೂರನೇ ಬಾರಿಗೆ ದಾಳಿ ನಡೆಸಿರುವುದು ಕುಟುಂಬದವರಲ್ಲಿ ಆತಂಕ ಮೂಡಿಸಿದೆ.

ಆಗಾಗ್ಗೆ ದಾಳಿ: ಎರಡು ವರ್ಷಗಳ ಹಿಂದೆ ನೇರಳಕುಪ್ಪೆ ಯುವಕನ ಮೇಲೆ ದಾಳಿ ನಡೆಸಿದ ಸಲಗವು ಆತನ ಕರುಳನ್ನೇ ಹೊರಗೆಳೆದು ಹಾಕಿತ್ತು.

Advertisement

ಅರಣ್ಯ ಇಲಾಖೆ ಆತನನ್ನು ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಜಮೀನಿನಲ್ಲಿ ಹಸು ಮೇಯುತ್ತಿದ್ದ ವೇಳೆ ತಿವಿದು ಸಾಯಿಸಿತ್ತಲ್ಲದೆ. ಮತ್ತೊಂದು ಹಸುವನ್ನು ತಿವಿದು ಗಾಯಗೊಳಿಸಿತ್ತು. ಈ ಸಲಗ ಕಾಡಿನಿಂದ ಹೊರಬಂದು ಯಾರಿಗೂ ಹೆದರದೆ ರಾಜಾರೋಷವಾಗಿ ಹಗಲು-ರಾತ್ರಿ ಎನ್ನದೆ ರಾಜಮಾರ್ಗದಲ್ಲೇ ನಡೆದು ಬಂದು ತನಗೆ ಬೇಕಾದ್ದನ್ನು ಕಂಠ ಮಟ್ಟ ತಿನ್ನುವ ವರೆಗೆ ಯಾರಿಗೂ ಜಗ್ಗದೆ ತನ್ನ ಕಾಯಕ ಮುಂದುವರೆಸಿದೆ. ಈ ಸಲಗನ ಉಪಟಳ ವಿಪರೀತವಾಗಿದ್ದು ಜನರು ಆತಂಕಕ್ಕೊಳಗಾಗಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಗ್ರಾಮಸ್ಥರ ನೆರವಿನೊಂದಿಗೆ ಸಲಗವನ್ನು ಕಾಡಿಗೆ ಸೇರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next