Advertisement

ಮುಂದುವರಿದ ಕಾಡಾನೆ ಸೆರೆ ಕಾರ್ಯಾಚರಣೆ: ಕಾಣಿಸಿದರೂ ತಪ್ಪಿಸಿಕೊಂಡ ಕಾಡಾನೆ!

11:15 PM Feb 22, 2023 | Team Udayavani |

ಸುಬ್ರಹ್ಮಣ್ಯ: ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಉಪಳಟ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಾಕಾನೆಗಳ ನೆರವಿನೊಂದಿಗೆ ನಡೆಸುತ್ತಿರುವ ಕಾರ್ಯಾಚರಣೆ ಎರಡನೇ ದಿನವಾದ ಬುಧವಾರವೂ ಮುಂದುವರಿದಿದೆ.

Advertisement

ಕಾಡಾನೆಯು ಮಂಗಳವಾರ ರಾತ್ರಿ ಐತ್ತೂರು ಭಾಗದ ಸುಳ್ಯ ಸಮೀಪದಲ್ಲಿ ತೋಟಕ್ಕೆ ನುಗ್ಗಿ ಕೃಷಿ ನಾಶ ಮಾಡಿದೆ ಎಂಬ ಮಾಹಿತಿಯಂತೆ ಅತ್ತ ತೆರಳಿದ ತಂಡಕ್ಕೆ ಐತ್ತೂರಿನ ಅಜಾನದ ರಬ್ಬರ್‌ ತೋಟದಲ್ಲಿ ಆನೆ ಕಂಡುಬಂದಿತು. ರೆಂಜಿಲಾಡಿಯಲ್ಲಿದ್ದ ಸಾಕಾನೆ ಶಿಬಿರದ ಐದು ಆನೆಗಳನ್ನು ಗುರುವಾರ ಬೆಳಗ್ಗೆ ಐತ್ತೂರಿಗೆ ಕೊಂಡೊಯ್ಯಲಾಯಿತು. ಸಂಜೆ ವೇಳೆಗೆ ಕಾರ್ಯಾಚರಣೆಯ ವೈದ್ಯರ ತಂಡವು ಸಮೀಪಕ್ಕೆ ತೆರಳಿ ಎರಡು ಬಾರಿ ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದನ್ನು ನೀಡಲು ಯತ್ನಿಸಿದ್ದರೂ ಗುರಿ ತಪ್ಪಿತು. ಅರಣ್ಯ ಮತ್ತು ಕಡಿದಾದ ಪ್ರದೇಶ ಅದಾಗಿರುವ ಕಾರಣ ಕಾಡಾನೆಯ ಸೆರೆ ಸಾಧ್ಯವಾಗಿಲ್ಲ. ಅದಲ್ಲದೆ ಕಾರ್ಯಾಚರಣೆಯ ತಂಡ ಮತ್ತು ಸಾಕಾನೆಗಳು ಆಗಮಿಸುತ್ತಿದ್ದಂತೆ ಒಂಟಿ ಸಲಗವು ತೀವ್ರ ಪ್ರತಿರೋಧ ಒಡ್ಡಿ ತಪ್ಪಿಸಿಕೊಂಡಿತು ಎನ್ನಲಾಗಿದೆ. ಅದು ಕಾರ್ಯಾಚರಣೆ ತಂಡವನ್ನೇ ಹಿಮ್ಮೆಟ್ಟಿಸಲು ಯತ್ನಿಸಿದ ಘಟನೆಯೂ ನಡೆದಿದೆ. ಬಳಿಕ ಇಂದಿನ ಕಾರ್ಯಾಚರಣೆಯನ್ನು ಸ್ಥಗಿತ ಮಾಡಿ ಸಾಕಾನೆಗಳನ್ನು ಪೇರಡ್ಕದ ಆನೆ ಶಿಬಿರಕ್ಕೆ ತರಲಾಯಿತು. ಕಾರ್ಯಾಚರಣೆ ವೇಳೆ 2 ಕಾಡಾನೆಗಳ ಇರುವಿಕೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಗುರುವಾರ ಬೆಳಗ್ಗೆ ಕಾರ್ಯಾಚರಣೆ ಮತ್ತೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದರಿಂದ ಕೂಡಲೇ ಕಾಡಾನೆ ಸೆರೆ ಹಿಡಿಯಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದರು. ಡಿಸಿಎಫ್‌ ಡಾ| ದಿನೇಶ್‌ ಕುಮಾರ್‌ ಹಾಗೂ ತಂಡದವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ ಆಗಮಿಸಿದ 5 ಸಾಕಾನೆಗಳು ಸಹಕಾರ ಪಡೆಯಲಾಗಿದೆ. ನಾಗರಹೊಳೆ ಮತ್ತು ಮಂಗಳೂರಿನಿಂದ ತಜ್ಞ ವೈದ್ಯರ ತಂಡವೂ ಜತೆಗಿದೆ.

ಕುತೂಹಲಿಗರ ದಂಡು; ಹಿನ್ನಡೆ
ಕಾರ್ಯಾಚರಣೆ ವೀಕ್ಷಿಸಲು ಅಪಾರ ಸಂಖ್ಯೆಯ ಕುತೂಹಲಿಗರು ಆಗಮಿಸುತಿರುವುದರಿಂದ ಕಾರ್ಯಾ ಚರಣೆಗೆ ಹಿನ್ನಡೆಯಾಗಿದೆ ಎನ್ನಲಾಗಿದೆ. ಕಾಡಾನೆ ಇರುವ ಜಾಗ ಪತ್ತೆಹಚ್ಚಿ ಕಾರ್ಯಾಚರಣೆ ಆರಂಭಿಸುವಷ್ಟರಲ್ಲಿ ಅಲ್ಲಿ ಜನರು ಸೇರುವುದರಿಂದ ಕಾಡಾನೆ ತನ್ನ ಪಥ ಬದಲಿಸುತ್ತದೆ ಎನ್ನಲಾಗಿದೆ.

ಹಳೆ ವೀಡಿಯೋ ವೈರಲ್‌
ಸಕಲೇಶಪುರ ಅಥವಾ ಶಿವಮೊಗ್ಗ (ಎಲ್ಲಿ ಎಂಬುದು ಸ್ಪಷ್ಟತೆ ಇಲ್ಲ) ಭಾಗ ದಲ್ಲಿ ಈ ಹಿಂದೆ ಕಾಡಾನೆ ಸೆರೆಹಿಡಿದ ಕಾರ್ಯಾಚರಣೆಯ ವೀಡಿಯೋ ವೊಂದು ಇದೀಗ ವೈರಲ್‌ ಆಗಿದ್ದು, ಅದರಲ್ಲಿ ಕಡಬದಲ್ಲಿ ಸೆರೆ ಹಿಡಿಯಲಾದ ಕಾಡಾನೆ ಎಂಬ ಬರವಣಿಗೆ ಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿ ರುವ ಘಟನೆಯೂ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next