ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ ಕಾಡಾನೆಯೊಂದು ಮೃತ ಪಟ್ಟಿರುವ ಘಟನೆ ನಡೆದಿದೆ.
ಹಾಸನದ ಬೇಲೂರಿನಲ್ಲಿ ಸೆರೆ ಹಿಡಿಯಲಾಗಿದ್ದ ತಣ್ಣೀರ್ ಕೊಂಬನ್ ಎಂಬ ಹೆಸರಿನ ಆನೆಗೆ ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಬಿಡಲಾಗಿತ್ತು.
ನಂತರ ಆ ಆನೆಯು ಕೇರಳ ಅರಣ್ಯದ ಮೂಲಕ ಮಾನಂದವಾಡಿಗೆ ತೆರಳಿ ಪಟ್ಟಣದಲ್ಲಿ ಬೀಡುಬಿಟ್ಟು ಜನಸಂದಣಿ ಪ್ರದೇಶಕ್ಕೆ ನುಗ್ಗಿ ದಾಂಧಲೆ ನಡೆಸಿತ್ತು. ವಿಚಾರ ತಿಳಿದ ಕೇರಳ ಅರಣ್ಯ ಇಲಾಖೆಯು ಬಂಡೀಪುರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ತದ ನಂತರ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದು ಫೆ.2ರಂದು ಬಂಡೀಪುರದ ರಾಂಪುರ ಆನೆ ಶಿಬಿರಕ್ಕೆ ಆನೆಯನ್ನು ಕರೆತರಲಾಗಿತ್ತು.
ಆದರೆ ಬಂಡೀಪುರದ ರಾಂಪುರ ಆನೆ ಶಿಬಿರದಲ್ಲಿ ಕಾಡಾನೆ ಸಾವನ್ಬಪ್ಪಿದೆ. ಆನೆ ಸಾವಿಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರವಷ್ಟೆ ಕಾರಣ ತಿಳಿಯಲಿದೆ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿದ್ದಾರೆ.
ಪರಿಸರ ವಾದಿಗಳ ಆಕ್ರೋಶ: ತಣ್ಣೀರ್ ಕೊಂಬನ್ ಎಂಬ ಆನೆಯನ್ನು ಕೇರಳದಲ್ಲಿ ಸೆರೆ ಹಿಡಿಯುವ ವೇಳೆ ಹೆಚ್ಚಿನ ಪ್ರಮಾಣದ ಅರವಳಿಕೆ ಚುಚ್ಚುಮದ್ದು ನೀಡಿದ ಕಾರಣದಿಂದ ರಾಂಪುರ ಆನೆ ಶಿಬಿರದಲ್ಲಿ ಕಾಡಾನೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಅವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಿ ಆನೆ ಸೆರೆಹಿಡಿದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಪರಿಸರವಾದಿ ಜೋಸೆಫ್ ಹೂವರ್ ಅರಣ್ಯ ಅಧಿಕಾರಿಗಳು ಹಾಗೂ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದರು.