Advertisement
ಕೊಡಗು ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಹಿಂಡು ಹಿಂಡಾಗಿ ಲಗ್ಗೆ ಇಡುತ್ತಿರುವ ಆನೆಗಳಿಂದಾಗಿ ಮಾನವ ಜೀವಭಯ ಸೃಷ್ಟಿ, ಮಾತ್ರವಲ್ಲ ಮುಂದಿನ ಬದುಕಿನ ಬಗ್ಗೆ ನಿರೀಕ್ಷೆಗಳು ಹುಸಿಯಾಗುವ ಸಾಧ್ಯತೆಗಳಿವೆ. ಹಿಂಡು ಹಿಂಡಾಗಿ ಕಾಡಾನೆಗಳು ಮುಖ್ಯ ರಸ್ತೆಯಲ್ಲೇ ಸಂಚರಿಸುತ್ತಿವೆ. ತೋಟಗಳಲ್ಲೇ ಮರಿ ಹಾಕಿ ಸಂಸಾರ ಮಾಡುತ್ತಿವೆ. ಹೊತ್ತು, ಗೊತ್ತಿಲ್ಲದೆ ಅಲೆದಾಡುತ್ತಿರುವ ದೈತ್ಯ ಜೀವಿಗಳಿಗೆ ಅಂಜಿ ಕಾರ್ಮಿಕರು ತೋಟದ ಕೆಲಸಕ್ಕೆ ಹೋಗುತ್ತಿಲ್ಲ, ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಪೋಷಕರು ಧೈರ್ಯ ತೋರುತ್ತಿಲ್ಲ. ರೈತರು ತಮ್ಮ ಜಮೀನಿನಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಳ್ಳಲು ಉತ್ಸಾಹ ತೋರುತ್ತಿಲ್ಲ. ಸಾವಿರಾರು ರೂಪಾಯಿ ವ್ಯಯಿಸಿ ಬೆಳೆದ ಫಸಲು ಕಾಡಾನೆಗಳ ಹೊಟ್ಟೆ ಸೇರುವುದಾದರೆ ನಾವೇಕೆ ಬೆಳೆ ಬೆಳೆಯಬೇಕು ಎಂದು ಬೆಳೆಗಾರರು ಪ್ರಶ್ನಿಸುತ್ತಿದ್ದಾರೆ.
ಪಟಾಕಿ ಶಬ್ದ, ಕಾರ್ಯಾಚರಣೆ, ಕಂದಕ, ಸೋಲಾರ್ ಮತ್ತು ರೈಲ್ವೇ ಕಂಬಿಗಳ ಬೇಲಿ ಈ ಎಲ್ಲ ಪ್ರಯೋಗಗಳು ನಡೆದು ಹೋಗಿವೆ. ಆನೆಗಳು ಮಾತ್ರ ರಾಜಾರೋಷವಾಗಿ ಓಡಾಡು ತ್ತಿವೆ. ಇತ್ತೀಚೆಗೆ ಮನೆಗಳ ಮೇಲೆಯೂ ದಾಳಿ ಆರಂಭಿಸಿವೆ. ಅರಣ್ಯ ಇಲಾಖೆ ಹಳೆಯ ಪ್ರಯೋಗಗಳನ್ನು ಮಾಡುವುದನ್ನು ಬಿಟ್ಟು ಶಾಶ್ವತ ಪರಿಹಾರಕ್ಕಾಗಿ ದೊಡ್ಡದೊಂದು ಯೋಜನೆಯನ್ನು ರೂಪಿಸಬೇಕಾಗಿದೆ ಎಂದು ಹಿರಿಯ ಬೆಳೆಗಾರರು ಅಭಿಪ್ರಾಯಪಡುತ್ತಾರೆ.
Related Articles
ಅಸಹಾಯಕ ಸ್ಥಿತಿಯಲ್ಲಿರುವ ಅರಣ್ಯ ಅಧಿಕಾರಿಗಳು ಗ್ರಾಮಸ್ಥರು ದೂರು ನೀಡಿದರೆ ಬಂದು ಪಟಾಕಿ ಸಿಡಿಸಿ ಹೋಗುತ್ತಾರೆ. ಅವರು ಹೋದ ತತ್‌ಕ್ಷಣ ಮತ್ತೆ ಅದೇ ಪ್ರದೇಶಕ್ಕೆ ಆನೆಗಳು ಮರಳುತ್ತವೆ. ಮಾನವ ಜೀವ ಹಾನಿಯಾದಾಗ ಪರಿಹಾರದ ಚೆಕ್ ನೀಡಿ ಪ್ರತಿಭಟನಕಾರರನ್ನು ಸುಮ್ಮನಾಗಿಸುತ್ತಾರೆ. ಗ್ರಾಮಸ್ಥರ ಆಗ್ರಹಕ್ಕೆ ಮಣಿದು ಕಾಟಾಚಾರದ ಸಭೆ ನಡೆಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಶ್ವತ ಪರಿಹಾರ ಅನುಷ್ಠಾನಗೊಳಿಸುವಲ್ಲಿ ವಿಫಲರಾ ಗುತ್ತಿದ್ದಾರೆ ಎಂದು ಸ್ಥಳೀಯ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement