ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದೊಳಗೆ ನುಗ್ಗಿ ಆತಂಕ ಮೂಡಿಸಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತೀರ್ಥಹಳ್ಳಿ ತಾಲೂಕು ದೇವಂಗಿಯ ಮಳಲೂರು ಕಾಡಿನಲ್ಲಿ ಆನೆ ಸೆರೆ ಹಿಡಿಯಲಾಯಿತು.
ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಸಕ್ರೆಬೈಲು ಬಿಡಾರದ ಸಿಬ್ಬಂದಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆನೆ ಕಾಣಿಸಿಕೊಳ್ಳುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಆನೆಗೆ ಮತ್ತು ಬರುವ ಇಂಜೆಕ್ಷನ್ ಡಾರ್ಟ್ ಮಾಡಿ ಸೆರೆ ಹಿಡಿದಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಈ ಕಾಡಾನೆ ತೀರ್ಥಹಳ್ಳಿ ಪಟ್ಟಣದೊಳಗೆ ನುಗ್ಗಿತ್ತು. ವಿವಿಧೆಡೆ ಸಂಚರಿಸಿ ಜನರಲ್ಲಿ ಆತಂಕ ಮೂಡಿಸಿತ್ತು. ಕಾಡಾನೆ ಸೆರೆ ಹಿಡಿಯಬೇಕೆಂಬ ಒತ್ತಡವಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆನೆ ಸೆರೆ ಹಿಡಿದಿದ್ದಾರೆ.
ಕಾಡಾನೆ ಸೆರೆಗೆ ಸಕ್ರೆಬೈಲು ಬಿಡಾರದ ಹೆಣ್ಣಾನೆಯನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಸಕ್ರೆಬೈಲಿನ ಭಾನುಮತಿ ಆನೆಯನ್ನು ಕಾಡಿನಲ್ಲಿ ಕಟ್ಟಿ ಹಾಕಿ, ಕಾಡಾನೆಯನ್ನು ಸೆಳೆಯುವ ಹನಿಟ್ರ್ಯಾಪ್ ತಂತ್ರವನ್ನು ಬಳಕೆ ಮಾಡಲಾಗಿತ್ತು. ಎರಡು ದಿನದ ಹಿಂದೆ ಭಾನುಮತಿಯನ್ನು ಗಮನಿಸಿ ಕಾಡಾನೆ ಹತ್ತಿರಕ್ಕೆ ಬಂದಿತ್ತು. ಅಷ್ಟು ಹೊತ್ತಿಗೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡು ಕಾಡಿನೊಳಗ್ಗೆ ಪರಾರಿಯಾಗಿತ್ತು. ಕಳೆದ ರಾತ್ರಿ ಪುನಃ ಭಾನುಮತಿಯನ್ನು ಅರಸಿ ಬಂದ ಕಾಡಾನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಡಾರ್ಟ್ ಮಾಡಿದ್ದಾರೆ.
ಸೆರೆ ಸಿಕ್ಕಿರುವ ಕಾಡಾನೆ ತಪ್ಪಿಸಿಕೊಳ್ಳದಂತೆ ಕ್ರಮ ವಹಿಸಲಾಗಿದೆ. ಆನೆಯ ಕಾಲುಗಳನ್ನು ಕಟ್ಟಿಹಾಕಲಾಗಿದೆ. ಮಳಲೂರು ಕಾಡಿನಲ್ಲಿಯೇ ಆನೆ ಇದೆ. ಜನರ ಸಂಪರ್ಕಕ್ಕೆ ಬಂದಿರುವುದರಿಂದ ಅನೆಯ ಸ್ವಭಾವದ ಮೇಲೆ ನಿಗಾ ವಹಿಸಲಾಗುತ್ತಿದೆ. ಮುಂದೆ ಅದನ್ನು ಅಭಯಾರಣ್ಯಕ್ಕೆ ಬಿಡಬೇಕೋ, ಸಕ್ರೆಬೈಲು ಬಿಡಾರಕ್ಕೆ ಕರೆದೊಯ್ದು ಪಳಗಿಸಬೇಕೋ ಅನ್ನುವ ಕುರಿತು ಚರ್ಚೆ ನಡೆಯುತ್ತಿದೆ. ಸದ್ಯ ಕಾಡಾನೆ ಸೆರೆಯಾಗಿರುವುದರಿಂದ ತೀರ್ಥಹಳ್ಳಿಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.