Advertisement

Madikeri: ಅರಣ್ಯ ಸಿಬಂದಿಯನ್ನೇ ತುಳಿದು ಕೊಂದ ಕಾಡಾನೆ; ಇಬ್ಬರ ಮೇಲೆ ಒಂಟಿ ಸಲಗದ ದಾಳಿ

11:24 AM Sep 05, 2023 | Team Udayavani |

ಮಡಿಕೇರಿ: ಇತ್ತೀಚೆಗಷ್ಟೇ ಕಾಡಾನೆ ತುಳಿತಕ್ಕೆ ಸಿಲುಕಿ ಅರಣ್ಯ ಇಲಾಖೆಯ ಶಾರ್ಪ್‌ ಶೂಟರ್‌ ಒಬ್ಬರು ಮೃತಪಟ್ಟ ಘಟನೆ ಮಾಸುವ ಮೊದಲೇ ಅಂಥದ್ದೇ ಇನ್ನೊಂದು ಘಟನೆ ಕೊಡಗಿನಲ್ಲಿ ಸೋಮವಾರ ಸಂಭವಿಸಿದೆ. ನಾಡಿಗೆ ಬಂದ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ಇಲಾಖೆಯ ಸಿಬಂದಿಯೊಬ್ಬರನ್ನು ಆನೆಯೊಂದು ಬಲಿ ತೆಗೆದುಕೊಂಡಿದೆ.

Advertisement

ಅರಣ್ಯ ಇಲಾಖೆಯ ಆನೆ ಕಾರ್ಯಪಡೆಯ ಸಿಬಂದಿ ಗಿರೀಶ್‌ (35) ಮೃತಪಟ್ಟವರು.

ನಡೆದದ್ದೇನು?

ಸುಂಟಿಕೊಪ್ಪ ಸಮೀಪದ ಕೆದಕಲ್‌ ಪರಿಸರದಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಒಂಟಿ ಸಲಗವನ್ನು ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಓಡಿಸಲು 20 ಮಂದಿಯ ಆರ್‌ಆರ್‌ಟಿ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಈ ಸಂದರ್ಭ ಸಿಬಂದಿಯನ್ನೇ ಅಟ್ಟಾಡಿಸಿಕೊಂಡು ಬಂದ ಕಾಡಾನೆ ಏಕಾಏಕಿ ಗಿರೀಶ್‌ ಅವರ ಮೇಲೆ ದಾಳಿ ಮಾಡಿ ತುಳಿದು ಹಾಕಿತು. ತೀವ್ರವಾಗಿ ಗಾಯಗೊಂಡ ಗಿರೀಶ್‌ ಅವರನ್ನು ತತ್‌ಕ್ಷಣ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದರು.

ಇಬ್ಬರ ಮೇಲೆ ದಾಳಿ

Advertisement

ಸುಂಟಿಕೊಪ್ಪ ಸಮೀಪದ ಕೆದಕಲ್‌ ಗ್ರಾ.ಪಂ. ವ್ಯಾಪ್ತಿಯ ಡಿ ಬ್ಲಾಕ್‌ ಬಳಿ ಬೈಕ್‌ನಲ್ಲಿ ಮರದ ಕೆಲಸಕ್ಕೆಂದು ತೆರಳುತ್ತಿದ್ದ ಸುಂಟಿಕೊಪ್ಪದ ನಿವಾಸಿ ಮುರುಗೇಶ್‌ ಅವರ ಮೇಲೆ ಒಂಟಿಸಲಗ ಮೊದಲು ದಾಳಿ ಮಾಡಿತು. ಗಾಯಗೊಂಡ ಮುರುಗೇಶ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಘಟನೆಯಿಂದ ಬೈಕ್‌ಗೆ ಹಾನಿಯಾಗಿದೆ. ಅಲ್ಲಿಂದ ಕಾಲ್ಕಿತ್ತ ಆನೆ ಸ್ವಲ್ಪ ದೂರದಲ್ಲೇ ಇದ್ದ ಹಬೀಬ್‌ ಅವರ ತೋಟದತ್ತ ತೆರಳಿ ಮತ್ತೂಬ್ಬ ವ್ಯಕ್ತಿಯ ಮೇಲೂ ದಾಳಿ ಮಾಡಿತು. ವಿಷಯ ತಿಳಿದ ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸುತ್ತಿದ್ದರು.

ಹಾಸನದಲ್ಲೂ ನಡೆದಿತ್ತು

ಹಾಸನ ಜಿಲ್ಲೆಯ ಆಲೂರು ಹಳ್ಳಿಯೂರಿನಲ್ಲಿ ಗಾಯಗೊಂಡಿದ್ದ ಕಾಡಾನೆಗೆ ಚಿಕಿತ್ಸೆ ನೀಡಲು ಅರಿವಳಿಕೆ ನೀಡುವ ಪ್ರಯತ್ನದಲ್ಲಿದ್ದ ಆನೆಗಳ ತಜ್ಞ, ಶಾರ್ಪ್‌ ಶೂಟರ್‌, ಆಲೂರು ತಾಲೂಕು ಹೊನ್ನವಳ್ಳಿಯ ವೆಂಕಟೇಶ್‌ (65) ಅವರ ಮೇಲೆಯೇ ಆನೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಆ. 31ರಂದು ಸಂಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next