ಮಡಿಕೇರಿ: ಕೊಡಗು ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ, ಪರಿಸರವಾದಿ ನಿವೃತ್ತ ಕರ್ನಲ್ ಮುತ್ತಣ್ಣ ಅವರ ಮೇಲೆ ಕಾಡಾನೆಯೊಂದು ದಾಳಿ ಮಾಡಿದೆ. ಕಾಲು ಮುರಿತಕ್ಕೊಳಗಾಗಿರುವ ಅವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಬೆಳಗ್ಗೆ ಪಾಲಿಬೆಟ್ಟದಲ್ಲಿರುವ ತಮ್ಮ ತೋಟಕ್ಕೆ ಮುತ್ತಣ್ಣ ಅವರು ತೆರಳುತ್ತಿದ್ದಾಗ ಏಕಾಏಕಿ ಎದುರಿನಿಂದ ಬಂದ ಒಂಟಿ ಸಲಗ ದಾಳಿ ಮಾಡಿದೆ. ಈ ಸಂದರ್ಭ ಓಡುವಾಗ ಕೆಳಗೆ ಬಿದ್ದ ಮುತ್ತಣ್ಣ ಅವರ ಕಾಲು ಮುರಿತಕ್ಕೊಳಗಾಗಿದ್ದು, ತೋಟ ಕಾರ್ಮಿಕರು ಗೋಣಿಕೊಪ್ಪ ಆಸ್ಪತ್ರೆಗೆ ಕರೆದೊಯ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರ್ನಲ್ ಮುತ್ತಣ್ಣ ಅವರು ಕೊಡಗಿನ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ವನ್ಯಜೀವಿಗಳ ಹಿತದೃಷ್ಟಿಯಿಂದ ಕೊಡಗಿಗೆ ರೈಲು ಮಾರ್ಗ, ಹೆದ್ದಾರಿ ವಿಸ್ತರಣೆ, ಚತುಷ್ಪಥ ರಸ್ತೆ ಮೊದಲಾದ ಪರಿಸರ ವಿರೋಧಿ ಕಾಮಗಾರಿಗಳ ವಿರುದ್ದ ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಇದೀಗ ಅವರ ಮೇಲೆಯೇ ಕಾಡಾನೆ ದಾಳಿ ಮಾಡಿರುವ ಪ್ರಕರಣ ನಡೆದಿದೆ.
ಇದನ್ನೂ ಓದಿ:Unlock 5.0: ಮಹಾರಾಷ್ಟ್ರದಲ್ಲಿ ನವೆಂಬರ್ 5ರಿಂದ ಸಿನಿಮಾ ಥಿಯೇಟರ್, ಈಜುಕೊಳ ಪುನರಾರಂಭ
ಪಾಲಿಬೆಟ್ಟ ಮತ್ತು ಸುತ್ತಲಿನ ಕಾಫಿ ತೋಟಗಳಲ್ಲಿ ಹಲವಾರು ವರ್ಷಗಳಿಂದ ಕಾಡಾನೆಗಳು ಮರಿಗಳ ಸಹಿತ ಠಿಕಾಣಿ ಹೂಡಿದ್ದು, ಸ್ಥಳೀಯರು ಆತಂಕದಲ್ಲೇ ದಿನದೂಡಬೇಕಾಗಿದೆ. ಮುತ್ತಣ್ಣ ಅವರಿಗೆ ಸಾಂತ್ವನ ಹೇಳಲು ಬಂದ ರೈತ ಸಂಘದ ಪ್ರಮುಖರು ಕಾಡಾನೆ ಹಾವಳಿ ವಿರುದ್ಧ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.