Advertisement

ಸುಳ್ಯ ತಾಲೂಕಿನಲ್ಲಿ ಕೃಷಿಗೆ ನಿರಂತರ ಆನೆ ದಾಳಿ : ತಡೆಗೆ ಶಾಶ್ವತ ಯೋಜನೆ ಎಂದು?

11:46 PM Mar 07, 2021 | Team Udayavani |

ಅರಂತೋಡು: ಸುಳ್ಯ ತಾಲೂಕಿನ ಹೆಚ್ಚಿನ ಗಡಿ ಭಾಗಗಳು ಅರಣ್ಯದಂಚಿನ ಪ್ರದೇಶದಲ್ಲಿ ಇದ್ದು ಈ ಭಾಗದ ತೋಟಗಳಿಗೆ ಆಗಾಗ ಆನೆ ದಾಳಿ ನಡೆಸುತ್ತಿದ್ದು, ಕೃಷಿಕರು ಹೈರಾಣಾಗಿದ್ದಾರೆ.

Advertisement

ಸುಮಾರು 40 ವರ್ಷಗಳಿಂದ ಆನೆ ದಾಳಿಗಳನ್ನು ತಡೆಗಟ್ಟಲು ತಾಲೂಕಿನ ಕೆಲವಡೆ ಆನೆಕಂದಕಗಳನ್ನು ತೋಡಿದ್ದರೂ ಅವುಗಳನ್ನು ಲೆಕ್ಕಿಸದೆ ಕಾಡಾನೆಗಳು ತೋಟ ಗಳಿಗೆ ನುಗ್ಗುತ್ತಿವೆ. ಸಂಪಾಜೆ ಗ್ರಾಮದ ಬಯ್ಲೆ ಕುಯಿಂತೋಡು, ಕೈಪಡ್ಕ,ನೆಲ್ಲಿಕುಮೇರಿ, ಸಂಪಾಜೆ ಬಯಲು, ತೊಡಿಕಾನ ಗ್ರಾಮದ ಬಾಳಕಜೆ, ಪಟ್ಟಿ, ಪೆತ್ತಾಜೆ, ಶೆಟ್ಟಿಯಡ್ಕ, ಅರಂತೋಡು ಗ್ರಾಮದ ಜೋಡಿಪಣೆ, ಚುಕ್ರಡ್ಕ ಹಾಗೂ ಮಂಡೆಕೋಲು, ಆಲೆಟ್ಟಿ, ಅಜ್ಜಾವರ, ಪುಳಿಕುಕ್ಕು, ಹರಿಹರ, ಕೊಲ್ಲಮೊಗ್ರ, ಬಾಳುಗೋಡು ಭಾಗಗಳ ಕೃಷಿ ತೋಟಗಳು ಪದೇ ಪದೆ ಕಾಡಾನೆ ದಾಳಿಗೆ ತುತ್ತಾಗುತ್ತಿವೆ.

ನಷ್ಟವಾಗುತ್ತಿರುವ ಕೃಷಿ
ಈ ಪ್ರದೇಶದಲ್ಲಿ ರಬ್ಬರ್‌, ಅಡಿಕೆ, ತೆಂಗು, ಕೊಕ್ಕೊ, ಬಾಳೆ, ಗೇರು, ಕಾಳುಮೆಣಸು ಹೆಚ್ಚಾಗಿ ಬೆಳೆಯುತ್ತಿದ್ದು ಇವುಗಳು ಆನೆ ದಾಳಿಗೆ ನಲುಗುತ್ತಿವೆ. ಸಂಪಾಜೆ ಗ್ರಾಮದ ಕುಯಿಂತೋಡು ಕೆ.ಪಿ. ಜಗದೀಶ ಅವರ ತೋಟಕ್ಕೆ 40 ವರ್ಷಗಳಿಂದ ಆನೆಗಳು ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.

ಆಗಾಗ ದಾಳಿ
ಕಾಡಾನೆಗಳು ತೋಟಕ್ಕೆ ಬಂದು ಒಮ್ಮೆ ಸ್ವಲ್ಪ ಬೆಳೆಗಳನ್ನು ನಾಶ ಮಾಡಿಹೋದರೆ ಮತ್ತೆ ಕೆಲವು ದಿನಗಳ ಬಳಿಕ ಮತ್ತೆ ಅಲ್ಲಿಗೇ ದಾಳಿ ಮಾಡುತ್ತವೆ. ಅಲ್ಪ ಸ್ವಲ್ಪ ಹಾನಿಯಾದರೆ ರೈತರು ಕೃಷಿ ಇಲಾಖೆಗೆ ಅರ್ಜಿ ಕೊಡಲು ಮನಸ್ಸು ಮಾಡುವುದಿಲ್ಲ. ಅರ್ಜಿ ಕೊಟ್ಟರೂ ಸಿಗುವ ಪರಿಹಾರ ತುಂಬಾ ಕಡಿಮೆ. ಅದಕ್ಕಾಗಿ ಹಲವು ಬಾರಿ ಕಚೇರಿಗೆ ಅಲೆಯಬೇಕಾಗುತ್ತದೆ. ಸಿಗುವ ಪರಿಹಾರಕ್ಕಿಂತ ಆಗುವ ಖರ್ಚೆ ಜಾಸ್ತಿ. ಇದರಿಂದ ಕಾಡಿನಂಚಿನ ಕೃಷಿಕರ ಜೀವನ ಕಷ್ಟದಲ್ಲಿ ಸಾಗುತ್ತಿದೆ.

ಪರಿಹಾರ ರೈತರ ಖಾತೆಗೆ
ಕೆಲ ವೊಂದು ಕಡೆ ಆನೆಕಂದಕಗಳು ಮಳೆಯಿಂದ ಹಾನಿಯಾದ ಪರಿಣಾಮ ಸಮರ್ಪಕವಾಗಿ ಕಾರ್ಯ ನಿರ್ವಹಿ ಸುತ್ತಿಲ್ಲ. ಈ ಕಂದಕಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಚಿವರ ಸಭೆಯಲ್ಲಿ ಚರ್ಚಿಸಿ ಸರಕಾರಕ್ಕೆ ಬರೆಯ ಲಾಗಿದೆ. ಆನೆದಾಳಿಗಳಿಂದ ನಷ್ಟವಾದ ಕೃಷಿಕರಿಗೆ ಸರಕಾರ ನಿಗದಿ ಪಡಿಸಿದ ರೀತಿ ಯಲ್ಲಿ ಪರಿಹಾರವನ್ನು ಖಾತೆಗೆ ಜಮೆ ಮಾಡಲಾಗುತ್ತಿದೆ. -ಗಿರೀಶ್‌, ವಲಯ ಅರಣ್ಯಾಧಿಕಾರಿ, ಸುಳ್ಯ.

Advertisement

ಯೋಜನೆ ಅಗತ್ಯ
40 ವರ್ಷಗಳಿಂದ ಕಾಡಾನೆಗಳು ನಮ್ಮ ತೋಟಕ್ಕೆ ದಾಳಿ ಮಾಡುತ್ತಿವೆ. ಇಲಾಖೆ ವತಿಯಿಂದ ನಿರ್ಮಿಸಿದ ಆನೆ ಕಂದಕಗಳು ಅವೈಜ್ಞಾನಿ ಕವಾಗಿದ್ದು ಇವನ್ನು ದಾಟಿಕೊಂಡೆ ಕಾಡಾನೆಗಳು ನುಗ್ಗುತ್ತಿವೆ. ಸೈರನ್‌ ಕೂಡ ಕೆಲಸ ಮಾಡುತ್ತಿಲ್ಲ. ಆನೆ ದಾಳಿಯಿಂದ ಉಂಟಾದ ನಷ್ಟಕ್ಕೆ ಸಿಗುವ ಪರಿಹಾರ ತುಂಬಾ ಕಡಿಮೆ . ಅಷ್ಟು ಸಿಗಬೇಕಾದರೆ ಅದರ ಹಿಂದೆಯೇ ಅಲೆಯಬೇಕು. ಆಗ ಹಾನಿ ಖರ್ಚಿಗಿಂತ ಅಲೆದಾಟದ ಖರ್ಚೇ ಜಾಸ್ತಿ ಆಗುತ್ತಿದೆ. ಹೀಗಾಗಿ ಕಾಡಾನೆಗಳ ಕಾಟ ತಡೆಯಲು ಶಾಶ್ವತ ಯೋಜನೆ ರೂಪಿಸಬೇಕು.
-ಕೆ.ಪಿ. ಜಗದೀಶ, ಕೃಷಿಕರು, ಕುಯಿಂತೋಡು.

ಆಟಕ್ಕುಂಟು ಲೆಕ್ಕಕ್ಕಿಲ್ಲದ ಆನೆಕಂದಕಗಳು
ಅನೇಕ ಕಡೆ ಆ®ಗಳು ಬರುವ ದಾರಿ ಯಲ್ಲಿ ಆನೆ ಕಂದಕ ಗಳನ್ನು ನಿರ್ಮಾಣ ಮಾಡ ಲಾಗಿದೆ. ಈ ಕಂದಕಗಳನ್ನೂ ದಾಟಿ ಆನೆಗಳು ನುಗ್ಗುತ್ತವೆ. ಈ ಕಂದಕಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸ ಲಾಗಿದೆ ಎಂದು ರೈತರು ದೂರುತ್ತಿ¨ªಾರೆ. ಹೀಗಾಗಿ ತಾಲೂಕಿನ ಅರಣ್ಯದಂಚಿನ ಪ್ರದೇಶದ ರೈತರ ಸಂಕಷ್ಟ ನಿವಾರಣೆಗೆ ಸರಕಾರ ಶಾಶ್ವತ ಯೋಜನೆ ರೂಪಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

– ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next