Advertisement

ತಪ್ಪದ ಕಾಡಾನೆ ಕಾಟ, ರೈತ ಹೈರಾಣು

09:20 PM Feb 12, 2020 | Lakshmi GovindaRaj |

ಬಂಗಾರಪೇಟೆ: ತಾಲೂಕಿನ ಬೂದಿಕೋಟೆ ಹೋಬಳಿಯಲ್ಲಿ ಕಾಡಾನೆಗಳ ಕಾಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ತಮಿಳುನಾಡಿಗೆ ಹೊಂದಿಕೊಂಡ ಕಾಡಂಚಿನ ಗ್ರಾಮಗಳಲ್ಲಿ ನಿರಂತರ ಕಾಡಾನೆ ದಾಳಿ ನಡೆಯುತ್ತಿದ್ದು, ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ನಾಶವಾಗಿ ರೈತರು ಹೈರಾಣಾಗಿದ್ದಾರೆ.

Advertisement

ಅರಣ್ಯ ಸಿಬ್ಬಂದಿಗೂ ಇದು ತಲೆ ಬಿಸಿಯಾಗಿದೆ. ತಮಿಳುನಾಡಿನ ಕಾಡಿನಿಂದ ಬಂದಿರುವ 15ಕ್ಕೂ ಹೆಚ್ಚು ಆನೆಗಳು ಗಡಿ ಗ್ರಾಮಗಳಲ್ಲಿ ಸುತ್ತುವರಿಯುತ್ತಿದ್ದು, ರಾತ್ರಿಯಾಗುತ್ತಿದ್ದಂತೆ ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆಗಳನ್ನು ತುಳಿದು, ತಿಂದು ನಷ್ಟ ಉಂಟುಮಾಡುತ್ತಿವೆ.

ಬೆಳೆ ಜೊತೆ ಪೈಪ್‌ಗಳೂ ನಾಶ: ಅದೇ ರೀತಿಯಾಗಿ ಮಂಗಳವಾರ ರಾತ್ರಿ ಹಲವು ರೈತರ ಜಮೀನಿಗೆ ನುಗ್ಗಿರುವ ಕಾಡಾನೆಗಳು ಬೆಳೆಗಳನ್ನು ತುಳಿದು, ತಿಂದು ನಾಶ ಮಾಡಿವೆ. ಮೂತನೂರು ರೈತ ವೆಂಕಟೇಶ್‌ ಒಂದು ಎಕರೆಯಲ್ಲಿ ಬೆಳೆದಿದ್ದ ಮೂಲಂಗಿ, ಹುಣಸೆ, ಮಾವಿನಮರ, ಕೊಳವೆಬಾವಿ ಪೈಪ್‌ಗಳು, ಶ್ರೀನಿವಾಸ್‌ ಅವರು 2 ಎಕರೆಯಲ್ಲಿ ಬೆಳೆದಿದ್ದ ರಾಗಿ, ಒಂದು ಎಕರೆ ಹುಲ್ಲು, ರಾಮಕೃಷ್ಣ ಅವರ 3 ಎಕರೆ ಟೊಮೆಟೋವನ್ನು ತಿಂದು ತುಳಿದು ನಾಶ ಮಾಡಿವೆ.

ತೆಂಗಿನ ಮರ ಕಿತ್ತು ಹೋಗೆದ ಕಾಡನೆ: ಅದೇ ರೀತಿ ಮಾರಂಡಹಳ್ಳಿ ಬೀರಪ್ಪ ಅವರ ಒಂದೂವರೆ ಎಕರೆಯಲ್ಲಿನ ಬೀನ್ಸ್‌, ಒಂದು ಎಕರೆ ರಾಗಿ, ಮುಕ್ಕಾಲು ಎಕರೆ ಚಿಕ್ಕಡಿಕಾಯಿ, ನಾಗರಾಜ್‌ ಅವರ ಒಂದು ಎಕರೆ ಟೊಮೆಟೋ, ನಾರಾಯಣಪ್ಪ ಅವರ ಎರಡು ಎಕರೆ ರಾಗಿ, ದಿಗೂರು ಗ್ರಾಮದ ತಿಮ್ಮಕ್ಕ ಒಂದು ಎಕರೆಯಲ್ಲಿ ಬೆಳೆದಿದ್ದ ಬೀನ್ಸ್‌,

ಊಸರಹಳ್ಳಿ ಗ್ರಾಮದ ನಾಗರಾಜ್‌ ಅವರ ಎರಡು ಎಕರೆ ಟೊಮೆಟೋ, ಬೀರಪ್ಪ ಅವರ ಒಂದು ಎಕರೆ ಬೀನ್ಸ್‌, ಒಂದು ಎಕರೆ ರಾಗಿ, ಡ್ರಿಪ್‌ ಪೈಪ್‌ಗ್ಳನ್ನು ತುಳಿದು ಅವರ ತೆಂಗಿನ ಮರಗಳನ್ನು ಕಾಡಾನೆಗಳು ಮುರಿದು ಹಾಕಿವೆ. ಸೊರಕಾಯಲಹಳ್ಳಿ ಗ್ರಾಮದ ಸುಂದರಪ್ಪ ಹಾಗೂ ನಾರಾಯಣಾಚಾರಿ ರಾಗಿಯನ್ನು ತುಳಿದು ನಾಶಮಾಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಾಡಾನೆ ಓಡಿಸುವಲ್ಲಿ ವಿಫ‌ಲ: ಅರಣ್ಯ ಇಲಾಖೆಯ ಸಿಬ್ಬಂದಿ ಆನೆಗಳನ್ನು ಮತ್ತೆ ಅರಣ್ಯ ಪ್ರದೇಶಕ್ಕೆ ಓಡಿಸುವಲ್ಲಿ ವಿಫ‌ಲರಾಗುತ್ತಿರುವ ಪರಿಣಾಮ ರೈತರು ಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆದಿರುವ ಬೆಳೆ ನಾಶ ಮಾಡುತ್ತಿದೆ. ಬೆಳೆಗಳನ್ನೆಲ್ಲಾ ಹೀಗೆ ನಾಶಮಾಡುತ್ತಿದ್ದರೆ ಮಾಡಿದ ಸಾಲವನ್ನು ತೀರಿಸೋದಾದ್ರು ಹೇಗೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಹಾರ ಕೊಟ್ಟಿಲ್ಲ: ಕಳೆದ ವರ್ಷ ಆನೆಗಳ ದಾಳಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ಸಿಗಲಿಲ್ಲ. ಇನ್ನಾದರೂ ಅರಣ್ಯ ಇಲಾಖೆಯವರು ವಿಳಂಬ ಮಾಡದೆ ರೈತರಿಗೆ ನಷ್ಟ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ರಾತ್ರಿ ವೇಳೆಯಲ್ಲಿ ಪ್ರತಿದಿನ ಕಾಡಾನೆಗಳನ್ನು ಓಡಿಸಲು ಬಂಗಾರಪೇಟೆ ಹಾಗೂ ಮಾಲೂರು ತಾಲೂಕಿನ ಅರಣ್ಯ ಇಲಾಖೆ ಸಿಬ್ಬಂದಿ ಒಟ್ಟುಗೂಡಿ ಪಟಾಕಿ ಸಿಡಿಸಿದರೂ ಪ್ರಯೋಜನವಾಗುತ್ತಿಲ್ಲ.

ತಮಿಳುನಾಡಿಗೆ ಓಡಿಸಿ: ಕೂಡಲೇ ಆನೆಗಳನ್ನು ಓಡಿಸಬೇಕು, ನಮ್ಮ ಬೆಳೆ, ಜೀವ ರಕ್ಷಣೆ ಮಾಡಬೇಕು, ಗ್ರಾಮಗಳಲ್ಲಿ ನೆಮ್ಮದಿಯಿಂದ ವಾಸಿಸುವುದು ಕಷ್ಟವಾಗಿದೆ. ಕಾಡಾನೆಗಳನ್ನು ಓಡಿಸಲು ಒಂದು ತಂಡವನ್ನು ಕರೆಯಿಸಿ, ಆನೆಗಳನ್ನು ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಓಡಿಸಬೇಕು, ಮತ್ತೆ ಆಗಮಿಸದಂತೆ ಶಾಶ್ವತ ಪರಿಹಾರ ಕೈಗೊಳ್ಳಬೇಕು, ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಮೂತನೂರು ರೈತ ವೆಂಕಟೇಶ್‌ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next