Advertisement

ಕಾಡಾನೆ ಹಾವಳಿ ತಡೆಗೆ ಜೇನು ಹುಳುಗಳ ನೆರವು! ಮಂಡೆಕೋಲು ಭಾಗದಲ್ಲಿ ಮೊದಲ ಪ್ರಯೋಗ

12:04 AM Jan 20, 2023 | Team Udayavani |

ಸುಳ್ಯ: ಕಾಡಾನೆ ಹಾವಳಿಯಿಂದ ಕಂಗಾಲಾಗಿರುವ ಕೃಷಿಕರು ಪ್ರಸ್ತುತ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಸಿದ್ಧರಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆ ಇರಿಸುವುದೇ ಅವರು ಕಂಡು ಕೊಂಡಿರುವ ದಾರಿ.

Advertisement

ಆನೆ ಹಾವಳಿಯಿಂದ ಸುಳ್ಯ ತಾಲೂಕಿನ ಮಂಡೆಕೋಲು, ಅಜ್ಜಾವರ, ಆಲೆಟ್ಟಿ ಇತ್ಯಾದಿ ಗ್ರಾಮಗಳ ಕೃಷಿಕರು ಹೈರಾಣಾಗಿ¨ªಾರೆ. ಆನೆ ಕಂದಕ, ಸೋಲಾರ್‌ ಬೇಲಿ, ಸಿಮೆಂಟ್‌ ಹಲಗೆ ಅಳವಡಿಕೆ ಹೀಗೆ ಹಲವು ತಂತ್ರಗಳನ್ನು ಅಳವಡಿಸಿದರೂ ಪರಿಣಾಮಕಾರಿಯಾಗಿಲ್ಲ. ಅಸ್ಸಾಂನಲ್ಲಿ ಕೃಷಿಕರು ಪ್ರಯೋಗಿಸಿ ಯಶಸ್ವಿಯಾಗಿರುವ ಜೇನುಗೂಡು ಬಳಕೆಯನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ಭಾಗದ ತೋಟಗಳಲ್ಲಿ ಮಾಡಲಾಗುತ್ತಿದೆ.

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ದ.ಕ., ಉಡುಪಿ ಜೇನು ವ್ಯವಸಾಯಗಾರರ ಸಹಕಾರ ಸಂಘದ ನೇತೃತ್ವ ದಲ್ಲಿ ಹನಿಮಿಷನ್‌ ಯೋಜನೆ ಯಡಿಯಲ್ಲಿ ರೈತರಿಗೆ ಜೇನುಕೃಷಿ ತರಬೇತಿ ನೀಡಲಾಗಿದೆ.ಅರ್ಹರಿಗೆ ಜೇನು ಕೃಷಿ ಮಾಡಲು ತಲಾ 10 ಪೆಟ್ಟಿಗೆಯನ್ನು ಜೇನು ಕುಟುಂಬ ಸಮೇತ ನೀಡಿ, ಪೆಟ್ಟಿಗೆಯನ್ನು ಆನೆಗಳು ಬರುವ ದಾರಿಯಲ್ಲಿ ಜೋಡಿಸುವ ಪ್ರಯತ್ನ ನಡೆಯಲಿದೆ.

ಜೇನು ಕೃಷಿಯ ಆದಾಯದ ಜತೆಗೆ ಆನೆಗಳ ಹಾವಳಿ ತಪ್ಪಿದರೆ ಇದೊಂದು ವರದಾನ ವಾಗಲಿದೆ ಎಂಬ ನಿರೀಕ್ಷೆ ಕೃಷಿಕರದು.

ಏನಿದು ಜೇನು ಪೆಟ್ಟಿಗೆ ಪ್ರಯೋಗ
ತೋಟದ ಬದಿಯಲ್ಲಿ ಜೇನು ಪೆಟ್ಟಿಗೆಗಳನ್ನು ಸಾಲಾಗಿ ಇರಿಸಿ ತಂತಿಗಳ ಮೂಲಕ ಪರಸ್ಪರ ಕಟ್ಟಲಾಗುತ್ತದೆ. ಆನೆಗಳು ದಾಂಗುಡಿಯಿಡುವಾಗ ಜೇನು ಪೆಟ್ಟಿಗೆಗೆ ಅಥವಾ ತಂತಿಗೆ ತಾಗಿದರೆ ಎಲ್ಲ ಪೆಟ್ಟಿಗೆಗಳು ಏಕಕಾಲಕ್ಕೆ ಅಲುಗಾಡುವುದರಿಂದ ಜೇನು ನೊಣಗಳು ಎದ್ದು ಗುಂಪಾಗಿ ಗುಂಯ್‌ಗಾಡುತ್ತವೆ. ಆ ಸದ್ದು ಆನೆಗಳಿಗೆ ಕಿರಿಕಿರಿ ಉಂಟು ಮಾಡುವುದರಿಂದ ಮತ್ತೆ ಆ ಕಡೆ ಬರಲಾರವು. ಮುಂದಕ್ಕೆ ಇಂತಹ ಪೆಟ್ಟಿಗೆಗಳನ್ನು ಕಂಡಾಗಲೇ ಕಾಡಾನೆಗಳು ಹಿಂದೆ ಸರಿಯುತ್ತವೆ ಎಂಬುದು ಈ ಪ್ರಯೋಗದ ತಾತ್ಪರ್ಯ.
ಜೇನು ಪೆಟ್ಟಿಗೆಗಳ ಜತೆಗೆ ಸಿಸಿ ಕೆಮರಾ ಅಳವಡಿಸಿ ಕಾಡಾನೆಗಳ ಚಲನ ವಲನದ ಬಗ್ಗೆಯೂ ನಿಗಾವಹಿಸಲಾಗುತ್ತಿದೆ.

Advertisement

ಜೇನು ಪೆಟ್ಟಿಗೆ ಜೋಡಿಸಿ ಕಾಡಾನೆ ಹಾವಳಿ ತಡೆಗೆ ಪ್ರಯತ್ನಿಸಲಾಗುವುದು. ಅಸ್ಸಾಂ, ಮೇಘಾಲಯದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು, ಇಲ್ಲಿಯೂ ಆ ಪ್ರಯೋಗಕ್ಕೆ ಮುಂದಾಗಿದ್ದೇವೆ.
– ಬಾಲಚಂದ್ರ ದೇವರಗುಂಡ, ಗ್ರಾ.ಪಂ. ಸದಸ್ಯ

– ದಯಾನಂದ ಕಲ್ನಾರ್

Advertisement

Udayavani is now on Telegram. Click here to join our channel and stay updated with the latest news.

Next