ಔರಾದ: ತೇಗಂಪೂರ ಗ್ರಾಮದಲ್ಲಿ ಕಾಡು ಹಂದಿಗಳು ಜಮೀನಿಗೆ ದಾಳಿ ಮಾಡಿ ಸುಮಾರು ಒಂದು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ನಾಶಪಡಿಸಿದ್ದು, ಬರದಲ್ಲೂ ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಹೀಗೆ ಕಾಡು ಹಂದಿಗಳ ಪಾಲಾಗುತ್ತಿದೆ.
ಬೆಳೆ ಉಳಿಸಿಕೊಳ್ಳಲು ರೈತರು ಹಗಲಿರುಳು ಕಾವಲಿದ್ದರೂ ಪ್ರಯೋಜನವಾಗದೇ ಕಂಗಾಲಾಗಿದ್ದಾರೆ. ಈ ಬಾರಿಯೂ ತಾಲೂಕಿನಾದ್ಯಂತ ಬರದ ಕರಿ ನೆರಳು ಆವರಿಸಿದ್ದು, ಮಳೆಯಿಲ್ಲದೇ ಪರಿತಪಿಸುತ್ತಿರುವ ರೈತರಿಗೆ ಕಾಡು ಹಂದಿಗಳ ಹಾವಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ತೇಗಂಪೂರ ಗ್ರಾಮದ ನಾಗಶೆಟ್ಟಿ ಕಾಶಪ್ಪ ಮುಕ್ತೆದಾರ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು. ರಾತ್ರಿ ವೇಳೆ ಜಮೀನಿಗೆ ಲಗ್ಗೆ ಇಟ್ಟ ಕಾಡು ಹಂದಿಗಳು ಕಬ್ಬು ತಿಂದು, ತುಳಿದು ನಾಶ ಪಡಿಸಿವೆ. ಇದರಿಂದ ಸಾವಿರಾರು ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ನಷ್ಟಕ್ಕೆ ಒಳಗಾಗಿರುವ ನಾಗಶೆಟ್ಟಿ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಿದ್ದೆ ಬಿಟ್ಟು ಬೆಳೆ ಕಾವಲು: ಕಾಡು ಹಂದಿಗಳು ಸಮೀಪದ ಕಾಡಿನಿಂದ ಆಹಾರಕ್ಕಾಗಿ ರಾತ್ರೋರಾತ್ರಿ ದಾಳಿ ಮಾಡುತ್ತಿರುವುದರಿಂದ ಬೆಳೆ ರಕ್ಷಿಸಿಕೊಳ್ಳಲು ರಾತ್ರಿಯೆಲ್ಲ ಕಾವಲು ಕಾಯಬೇಕಾಗಿದೆ. ಒಂದೂವರೆ ತಿಂಗಳಿನಿಂದ ಈ ಸಮಸ್ಯೆ ಎದುರಾಗುತ್ತಿದ್ದು, ರಾತ್ರಿ ವೇಳೆ ಬೆಳೆ ಕಾಯುವುದೇ ರೈತರ ಕೆಲಸವಾಗಿದೆ.
ರಾತ್ರಿ ಹೊತ್ತಲ್ಲಿ ಜೀವ ಕೈಯಲ್ಲಿಡಿದು ಎಷ್ಟೇ ಎಚ್ಚರದಿಂದಿದ್ದರೂ ಕಾಡುಹಂದಿಗಳು ಕಣ್ತಪ್ಪಿಸಿ ಬೆಳೆ ತಿಂದು ನಾಶಪಡಿಸುತ್ತಿವೆ. ಇದು ರೈತರನ್ನು ಚಿಂತೆಗೀಡು ಮಾಡಿವೆ.
ಸೂಕ್ತ ಕ್ರಮಕ್ಕೆ ಆಗ್ರಹ: ತೇಗಂಪೂರ ಸೇರಿದಂತೆ ಯನಗುಂದಾ, ಖಾಶೆಂಪೂರ, ಸುಂದಾಳ, ಮಮದಾಪೂರ ಗ್ರಾಮಗಳಲ್ಲಿ ಕಾಡು ಹಂದಿ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದೆ. ಇದರಿಂದ ರೈತರು ನಷ್ಟಕ್ಕೀಡಾಗುತ್ತಿದ್ದಾರೆ. ಹೀಗಾಗಿ ಕಾಡು ಪ್ರಾಣಿಗಳು ಜಮೀನಿಗೆ ನುಗ್ಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
•ರವೀಂದ್ರ ಮುಕ್ತೆದಾರ