ತಿ.ನರಸೀಪುರ: ಕಾಡುಹಂದಿ ದಾಳಿ ಮಾಡಿದ್ದರಿಂದ ಮಹಿಳೆ ಗಾಯಗೊಂಡಿರುವ ಘಟನೆ ತಾಲೂಕಿನ ವಾಟಾಳು ಗ್ರಾಮದಲ್ಲಿ ಸೋಮವಾರ ನಡೆದಿದೆ. ತಾಲೂಕಿನ ವಾಟಾಳು ಗ್ರಾಮದ ಲೇಟ್ ಬಿಳಿಗಿರಿ ರಂಗಯ್ಯ ಎಂಬುವವರ ಪತ್ನಿ ನಾಗಮ್ಮ(50) ಗಾಯಗೊಂಡ ಮಹಿಳೆ. ಮುಂಜಾನೆ ನಸುಕಿನಲ್ಲಿ ಬಹಿರ್ದೆಸೆಗೆ ತೆರಳುತ್ತಿದ್ದಾಗ ಇದ್ದಕ್ಕಿದ್ದಂತೆ ಕಾಡು ಹಂದಿ ದಾಳಿ ಮಾಡಿ ಗಾಯಗೊಳಿಸಿದೆ.
ಕಾಡು ಹಂದಿ ದಾಳಿಯಿಂದಾಗಿ ಭುಜದ ಮೂಳೆ ಮುರಿದು, ತಲೆಗೆ ಹಾಗೂ ಬಲ ತೋಡೆಗೆ ಬಲವಾದ ಪೆಟ್ಟುಬಿದ್ದಿದೆ. ಗಾಯಗೊಂಡ ನಾಗಮ್ಮ ಅವರನ್ನು ನೆರೆ ಹೊರೆಯವರು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಟಾಳು ಗ್ರಾಮದಲ್ಲಿ ಕಾಡು ಹಂದಿಗಳ ದಾಳಿ ಮರುಕಳಿಸುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡು ಹಂದಿಗಳ ಹಾವಳಿಗೆ ಅರಣ್ಯ ಇಲಾಖೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಪರಿಹಾರಕ್ಕೆ ಆಗ್ರಹ: ಕಾಡು ಹಂದಿ ದಾಳಿಯಿಂದ ಗಾಯಗೊಂಡಿರುವ ವಾಟಾಳು ಗ್ರಾಮದ ನಾಗಮ್ಮ ಅವರಿಗೆ ಅರಣ್ಯ ಇಲಾಖೆ ಪರಿಹಾರ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಆಗ್ರಹಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಗಾಯಾಳು ಆರೋಗ್ಯ ವಿಚಾರಿಸಿ ಮಾತನಾಡಿದರು.
ಕಾಡಾನೆ, ಹುಲಿ ಸಿಂಹಗಳ ಮಾದರಿಯಲ್ಲಿ ಕಾಡು ಹಂದಿಯೂ ಕಾಡಂಚಿನ ಗ್ರಾಮಗಳಲ್ಲಿನ ಜನರ ಮೇಲೆ ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆ ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕಿದ್ದು ಕೂಡಲೇ ಪರಿಹಾರ ನೀಡಬೇಕು.
ಇಲ್ಲದಿದ್ದರೆ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ದಸಂಸ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಖಜಾಂಚಿ ಹಿರಿಯೂರು ಸೋಮಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಸ್.ಲಕ್ಷ್ಮಣ, ಮುಖಂಡ ಕಿರಗಸೂರು ರಜನಿ ಮತ್ತಿತರರಿದ್ದರು.