ಯಳಂದೂರು: ಯಳಂದೂರು ತಾಲೂಕು ಅರಣ್ಯ ಪ್ರದೇಶದಿಂದಲೇ ಹೆಚ್ಚು ಆವೃತವಾಗಿದೆ. ಇಲ್ಲಿನ ಅನೇಕ ಗ್ರಾಮಗಳು ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಗೆ ಬರಲಿದ್ದು ಕಾಡು ಪ್ರಾಣಿಗಳ ಉಪಟಳಕ್ಕೆ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೃಷಿಭೂಮಿಯ ಹೆಚ್ಚು ಭಾಗ ಅರಣ್ಯದಂಚಿನಲ್ಲೇ ಇದೆ.
ಇತ್ತೀಚೆಗೆ ಈ ಭಾಗದಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದ್ದು ಇದರಿಂದ ರೈತರು ಪರದಾಡುವ ಸ್ಥಿತಿಯಿದೆ. ತಾಲೂಕಿನ ಗೌಡಹಳ್ಳಿ, ಮಲಾರಪಾಳ್ಯ ಯರಗಂಬಳ್ಳಿ, ಗುಂಬಳ್ಳಿ, ದಾಸನಹುಂಡಿ, ಗಂಗವಾಡಿ, ಆಲ್ಕೆರೆ ಅಗ್ರಹಾರ ಸೇರಿ ಅನೇಕ ಗ್ರಾಮಗಳ ರೈತರು ಕಾಡುಪ್ರಾಣಿಗಳ ಭಯದಿಂದಲೇ ತಮ್ಮ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಇನ್ನಿಲ್ಲದೇ ಪರದಾಡುತ್ತಿದ್ದಾರೆ.
ಫಸಲಿನ ಮೇಲೆ ನಿತ್ಯ ದಾಳಿ: ಮುರಿದು ಬಿದ್ದ ಸೋಲಾರ್ ಬೇಲಿ, ಮುಚ್ಚಿದ ಕಂದಕ: ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಸೋಲಾರ್ ಬೇಲಿಯನ್ನು ನಿರ್ಮಾಣ ಮಾಡಲಾಗಿದ್ದು ಇದು ಅನೇಕ ಕಡೆ ಮುರಿದು ಬಿದ್ದಿದೆ. ಗೌಡಹಳ್ಳಿ ಸೇರಿ ಅನೇಕ ಕಡೆ ಆನೆ ಕಂದಕಗಳೂ ಮುಚ್ಚಿ ಹೋಗಿವೆ. ಇಲ್ಲಿಂದ ಆನೆ, ಜಿಂಕೆ, ಕಡವೆ, ಕಾಡುಹಂದಿ ಸೇರಿ ಕಾಡುಪ್ರಾಣಿಗಳು ರೈತರ ಬೆಳೆಗಳ ಮೇಲೆ ನಿತ್ಯ ದಾಳಿ ಮಾಡುತ್ತಿದ್ದು ಫಸಲು ಹಾಳಾಗುತ್ತಿದೆ.
ಗಸ್ತಿನ ಪಾಳಿಯನ್ನು ಕೂಡಲೇ ಸರಿಪಡಿಸಲು ಮುಂದಾಗಿ: ಈ ಪ್ರದೇಶದಲ್ಲಿ ಪ್ರತಿ ರೈತರ ಜಮೀನುಗಳಿಗೂ ಪ್ರತಿನಿತ್ಯ ಕಾಡುಪ್ರಾಣಿಗಳು ಬಂದು ಉಪಟಳ ನೀಡುತ್ತಿವೆ. ಇಲ್ಲಿನ ಬಾಳೆ, ಮುಸುಕಿನ ಜೋಳ, ತೆಂಗು, ಮಾವು, ಟೊಮೆಟೋ ಸೇರಿದಂತೆ ಎಲ್ಲಾ ಬೆಳೆಗಳನ್ನು ನಾಶ ಮಾಡುತ್ತಿವೆ. ಇಲ್ಲಿ ಅರಣ್ಯ ಇಲಾಖೆ ಹಾಕಿರುವ ಸೋಲಾರ್ ತಂತಿ ಬೇಲಿ ಕಿತ್ತು ಬಂದಿದೆ. ಕಂದಕಗಳು ಮುಚ್ಚಿವೆ, ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತಿನ ಪಾಳಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಇದನ್ನು ಸರಿಪಡಿಸಬೇಕು ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.
ಜಮೀನುಗಳಿಗೆ ಪ್ರತಿನಿತ್ಯ ಕಾಡಾನೆ, ಕಾಡುಹಂದಿ, ಜಿಂಕೆ, ಕಡವೆ, ಕಾಡುಕುರಿಗಳು ದಾಳಿ ನಡೆಸಿ ಫಸಲನ್ನು ನಾಶಗೊಳಿಸುತ್ತಿವೆ. ಈ ಬಗ್ಗೆ ದೂರನ್ನು ನೀಡಿದ್ದರೂ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಆನೆಗಳ ಹಿಂಡು ಫಸಲನ್ನು ನಾಶಮಾಡುತ್ತಿವೆ.
● ಮಹದೇವಸ್ವಾಮಿ, ಯರಗಂಬಳ್ಳಿ ಗ್ರಾಮದ ರೈತ
ಸೋಲಾರ್ ತಂತಿ ಕಿತ್ತಿವೆ. 3 ಕಿ.ಮೀ. ವರೆಗೆ ರೈಲುಕಂಬಿಯ ಬ್ಯಾರಿಕಾಡ್ ಹಾಕಲು ಈಗಾಗಲೇ ಪ್ರಕ್ರಿಯೆ ಆರಂಭಗೊಂಡಿದೆ. ಯಳಂದೂರು ವಲಯದಲ್ಲಿ 34 ಕಿ.ಮೀ. ಅರಣ್ಯ ಗಡಿ ಇದೆ. ಹೀಗಾಗಿ ಸಿಬ್ಬಂದಿ ಸರಿದೂಗಿಸಲು ಕೊರತೆ ಇದೆ. ಮೇಲಧಿಕಾರಿಗಳ ಗಮನಕ್ಕೆ ಈ ವಿಷಯ ತರಲಿದ್ದು ರೈತರಿಗೆ ಅನುಕೂಲ ಮಾಡಲು ಕ್ರಮ ವಹಿಸಲಾಗುವುದು.
● ಲೋಕೇಶ್ ಮೂರ್ತಿ, ಆರ್‌ಎಫ್ಒ, ಯಳಂದೂರು ವಲಯ
– ಫೈರೋಜ್ ಖಾನ್