Advertisement

ನಗರ ಪ್ರದೇಶಕ್ಕೆ ಹೆಜ್ಜೆ ಇಡುತ್ತಿರುವ ಕಾಡು ಪ್ರಾಣಿಗಳು !

07:56 PM Oct 10, 2021 | Team Udayavani |

ಮಹಾನಗರ: ಪ್ರಕೃತಿ ಮುನಿಸಿ ನಿಂದಾಗಿ ಕಾಡಿನಲ್ಲಿರಬೇಕಾದ ಪ್ರಾಣಿಗಳು ವರ್ಷದಿಂದ ವರ್ಷಕ್ಕೆ ನಾಡಿಗೆ ಬರುವ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಚಿರತೆ, ಕಾಡುಕೋಣ, ಹೆಬ್ಟಾವು ಸಹಿತ ಕೆಲವೊಂದು ಪ್ರಾಣಿಗಳು-ಉರಗ ಸಂತತಿ ನಗರದ ಹೃದಯಭಾಗದಲ್ಲಿ ಕಾಣಿಸಿಕೊಂಡು ಅಚ್ಚರಿ-ಆತಂಕ ಮೂಡಿಸುತ್ತಿವೆ.

Advertisement

ಅ. 3ರಂದು ನಗರದಲ್ಲಿ ಚಿರತೆ ಕಾಣಿಸಿ ಕೊಂಡಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಈ ಹಿಂದೆ ಕೂಡ ಇದೇ ರೀತಿ, ಜಿಲ್ಲೆಯ ಜನವಸತಿ ಪ್ರದೇಶದಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಂಡ ಘಟನೆ ನಡೆದಿತ್ತು. 2005ರಲ್ಲಿ ಬಾವುಟಗುಡ್ಡೆಯಲ್ಲಿ ಚಿರತೆ ಪ್ರತ್ಯಕ್ಷಗೊಂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಅರಿವಳಿಕೆ ಮದ್ದು ನೀಡಿ ಚಿರತೆಯನ್ನು ವಶಕ್ಕೆ ಪಡೆದುಕೊಂಡಿದ್ದರು. ಅದೇ ರೀತಿ ಕಳೆದ ವರ್ಷ ಸುರತ್ಕಲ್‌ ಬಳಿ ಎಂಆರ್‌ಪಿಎಲ್‌ ಪರಿಸರದಲ್ಲಿ ಚಿರತೆಯೊಂದು ಆತಂಕ ಸೃಷ್ಟಿಸಿತ್ತು. ಅರಣ್ಯ ಇಲಾಖೆ, ಪಿಲಿಕುಳದ ತಂಡ ಕುತ್ತೆತ್ತೂರು ಸಮೀಪ ಸೆರೆಹಿಡಿದಿತ್ತು.

ಮೂಡುಬಿದಿರೆಯ ಗ್ರಾಮವೊಂದರಲ್ಲಿ ಕೆಲವು ತಿಂಗಳ ಹಿಂದೆ ಚಿರತೆ ಬಾಯಿಯಿಂದ ನಾಯಿ ಮರಿ ತಪ್ಪಿಸಿಕೊಂಡು ಬಚಾವಾಗಿದ್ದ ದೃಶ್ಯ ಅಲ್ಲಿನ ಸಿ.ಸಿ. ಕೆಮರಾದಲ್ಲಿ ಸೆರೆಯಾಗಿತ್ತು. ಇನ್ನು, ಪೂಂಜಾಲಕಟ್ಟೆ ಪರಿಸರದಲ್ಲಿ ಆಗಾಗ್ಗೆ ಕಾಣಿಸಿಕೊಂಡು ಭಯ ಹುಟ್ಟಿಸುತ್ತಿದೆ. ಪೂಂಜಾಲಕಟ್ಟೆಯ ದುಗ್ಗಮಾರ ಗುಡ್ಡೆ, ಮಜಲೋಡಿ, ನಾಕುನಾಡು ಪರಿಸರದಲ್ಲಿ ಕೆಲವು ತಿಂಗಳ ಹಿಂದೆ ಚಿರತೆ ಕಾಣಿಸಿಕೊಂಡಿತ್ತು.

ನಾಯಿ ಹಿಡಿಯಲು ಬಂದು ಚಿರತೆಯೊಂದು ತಾನೇ ಬಂಧಿಯಾಗಿರುವ ಘಟನೆ ಸುಬ್ರಹ್ಮಣ್ಯ ಸಮೀಪದ ಕೈಕಂಬದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆದಿತ್ತು. ಅದೇ ರೀತಿ, ಬಂಟ್ವಾಳ ತಾಲೂಕಿನ ಮಂಗಳೂರು- ಧರ್ಮಸ್ಥಳ ಹೆದ್ದಾರಿಯ ಮೂರ್ಜೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು.

ಇದನ್ನೂ ಓದಿ:100 ಕೋಟಿ ಕೋವಿಡ್ ವ್ಯಾಕ್ಸಿನ್ ದಾಖಲೆ ಬರೆಯುತ್ತಿದ್ದೇವೆ : ಜೆ.ಪಿ.ನಡ್ಡಾ

Advertisement

ನಗರದಲ್ಲಿ ಕಾಡುಕೋಣ ಪ್ರತ್ಯಕ್ಷ
ಕಳೆದ ವರ್ಷ ಮೇ 5ರಂದು ಕುದ್ರೋಳಿ, ಮಣ್ಣಗುಡ್ಡೆ ವ್ಯಾಪ್ತಿಯ ಜನನಿಬಿಡ ರಸ್ತೆಯಲ್ಲಿ ಕಾಡುಕೋಣ ದಿಢೀರ್‌ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿತ್ತು. ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಆಗಮಿಸಿದರೂ ಸೆರೆಹಿಡಿಯಲು ಸಾಧ್ಯವಾಗಲಿಲ್ಲ. ಕುದ್ರೋಳಿ, ಮಣ್ಣಗುಡ್ಡೆ, ಲೇಡಿಹಿಲ್‌, ಬಿಜೈ ಭಾಗದಲ್ಲೆಲ್ಲ ಓಡಾಡಿ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಕೊನೆಗೂ ಮಣ್ಣಗುಡ್ಡೆ ಗೋದಾಮಿನ ಸಮೀಪ ಅರಿ ವಳಿಕೆ ಚುಚ್ಚುಮದ್ದು ಪ್ರಯೋ ಗಿಸಲಾಯಿತು. ಬಳಿಕ ಸೆರೆ ಹಿಡಿದು ಕ್ರೇನ್‌ ಸಹಾಯ ದಿಂದ ಲಾರಿಗೇರಿಸಿ ರಕ್ಷಿತಾರಣ್ಯಕ್ಕೆ ಕರೆ ದೊಯ್ಯುವಾಗ ಮಾರ್ಗ ಮಧ್ಯೆ ಹೃದಯಾಘಾತದಿಂದ ಮೃತಪಟ್ಟಿತ್ತು.

ಹಲವೆಡೆ ಕಾಣಿಸುತ್ತಿದೆ ಹೆಬ್ಟಾವು!
ನಗರದ ಜೈಲ್‌ ರಸ್ತೆಯಲ್ಲಿ ಪೊಲೀಸ್‌ ಕ್ವಾಟ್ರಸ್‌ ಕಾಂಪೌಂಡ್‌ನ‌ಲ್ಲಿ ಕೆಲವು ತಿಂಗಳ ಹಿಂದೆ ಬೃಹತ್‌ ಗಾತ್ರದ ಹೆಬ್ಟಾವು ಕಾಣಿಸಿಕೊಂಡಿತ್ತು. ಮಣ್ಣಗುಡ್ಡೆ ಸಮೀಪದ ವಾದಿರಾಜ ನಗರದಲ್ಲಿ ಸಂಕಲ್ಪ ಜಿ.ಪೈ ಅವರು ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಮನೆ ಹಿಂಭಾಗದ ಚರಂಡಿಯ ಪೈಪ್‌ನಲ್ಲಿ ಇದ್ದ ಹೆಬ್ಟಾವು ದಿಢೀರನೆ ಕಾಲಿಗೆ ಕಚ್ಚಿತ್ತು. ಕೂಡಲೇ ಇನ್ನೊಂದು ಕಾಲಿನಿಂದ ಹಾವಿನ ತಲೆಯ ಭಾಗಕ್ಕೆ ತುಳಿದ ಕಾರಣ ಹಾವು ವಾಪಾಸ್‌ ಪೈಪಿನ ಒಳಗೆ ಹೋಗಿತ್ತು.

ಚಿರತೆ-ಮಾನವ ಸಂಘರ್ಷ
ವನ್ಯಜೀವಿ ವಿಜ್ಞಾನಿ ಡಾ| ಸಂಜಯ್‌ ಗುಬ್ಬಿ , “ಚಿರತೆಗಳ ಆವಾಸಸ್ಥಾನದ ಹಾನಿ, ಛಿದ್ರೀಕರಣ, ಮಾಂಸಾಹಾರಿ ಪ್ರಾಣಿಗಳ ಉಳಿವಿಗೆ ಅವಶ್ಯವಾದ ಬಲಿಪ್ರಾಣಿಗಳು ನಶಿಸುತ್ತಿರುವುದು ಬಹುದೊಡ್ಡ ಸಮಸ್ಯೆ. ಇದು ನಿಲ್ಲದಿದ್ದರೆ ಚಿರತೆ-ಮಾನವ ಸಂಘರ್ಷ ಉಲ್ಬಣಗೊಳ್ಳಲಿದೆ. ಇದರಿಂದ ಚಿರತೆಗಳಿಗಲ್ಲದೆ ರೈತರಿಗೆ ಕೂಡ ತೊಂದರೆಯಾಗುತ್ತದೆ. ಅರಣ್ಯ ಇಲಾಖೆ, ಸಾರ್ವಜನಿಕರು, ರಾಜಕಾರಣಿಗಳು, ವಿಜ್ಞಾನಿಗಳು ಎಲ್ಲರೂ ಒಂದುಗೂಡಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು. ಚಿರತೆಗಳು ಚಿಕ್ಕ ಪುಟ್ಟ ಕಾಡುಗಳಲ್ಲಿ, ಹಳ್ಳಿಗಳ ಸುತ್ತಮುತ್ತ ಜೀವಿಸುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿಸಿ ಟಿವಿ, ಮೊಬೈಲ್‌ ದೂರವಾಣಿ, ಸಾಮಾಜಿಕ ಜಾಲತಾಣಗಳಿಂದ ಚಿರತೆಗಳ ಇರುವಿಕೆ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ. ಅದರಿಂದ ಜನರು ಗಾಬರಿಗೊಂಡು ಅದನ್ನೇ ಸಂಘರ್ಷವೆಂದು ಭಾವಿಸುತ್ತಾರೆ’ ಎಂದು ಅವರು ಉದಯವಾಣಿಗೆ ತಿಳಿಸಿದ್ದಾರೆ.

ಮಾಹಿತಿ ನೀಡಿ
ಮಂಗಳೂರು ಸಹಿತ ಜಿಲ್ಲೆಯಲ್ಲಿ ಕೆಲವು ಸಮಯದಿಂದ ಚಿರತೆ, ಹೆಬ್ಟಾವು ಮುಂತಾದವು ಕಾಣಿಸಿಕೊಳ್ಳುತ್ತಿವೆ. ಪಚ್ಚನಾಡಿ ಪರಿಸರದಲ್ಲಿ ಕೆಲವು ಚಿರತೆಗಳಿದ್ದು, ಸುತ್ತಮುತ್ತಲಿನ ಮನೆಗಳ ನಾಯಿಗಳನ್ನು ತಿಂದ ಘಟನೆ ನಡೆದಿತ್ತು. ಅದೇ ಚಿರತೆ ಮರೋಳಿ ಕಡೆಗೂ ಬಂದಿರುವ ಸಾಧ್ಯತೆ ಇದೆ. ಅದೇರೀತಿ, ಮಳೆಗಾಲದಲ್ಲಿ ನೀರಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಹೆಬ್ಟಾವುಗಳೂ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಕಾಡು ಪ್ರಾಣಿಗಳು ಬಂತೆಂದು ಗಾಬರಿಪಡುವ ಬದಲು, ಅರಣ್ಯ ಇಲಾಖೆಗೆ ಮಾಹಿತಿ ನೀಡಿ.
-ಡಾ| ದಿನೇಶ್‌ ಕುಮಾರ್‌, ಉಪ ಸಂರಕ್ಷಣಾಧಿಕಾರಿ ದ.ಕ. ಜಿಲ್ಲೆ.

Advertisement

Udayavani is now on Telegram. Click here to join our channel and stay updated with the latest news.

Next