ಬೆಳಗಾವಿ: ದೇಶದಲ್ಲಿ ತ್ರಿವಳಿ ತಲಾಖ್ ನಿಷೇಧ ಕಾಯ್ದೆ ಜಾರಿಯಾಗುತ್ತಿದ್ದಂತೆ ಸವದತ್ತಿಯಲ್ಲಿ ತಲಾಖ್ ನೀಡಿದ ಪತಿಯ ವಿರುದ್ಧ ಪತ್ನಿ ದೂರು ದಾಖಲಿಸಿದ್ದಾರೆ. ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಬೀಬಿ ಆಯೀಶಾ, ತನ್ನ ಪತಿ ಇಸ್ಮಾಯಿಲ್ ಖಾನ್ ಕಾನೂನು ಬಾಹಿರವಾಗಿ ತನಗೆ ವಿವಾಹ ವಿಚ್ಛೇದನ ನೀಡಿದ್ದಾರೆ. ಪತಿ ಹಾಗೂ ಇತರರ ವಿರುದ್ಧ ತ್ರಿವಳಿ ತಲಾಖ್ ನಿಷೇಧ ಕಾಯ್ದೆಯ ಕಲಂ 4ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಸವದತ್ತಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
2017ರಲ್ಲಿ ಇಸ್ಮಾಯಿಲ್ ಖಾನ್ ಜೊತೆ ವಿವಾಹವಾಗಿದೆ. ಗೋವಾದಲ್ಲಿ ನೆಲೆಸಿದ್ದಾಗ 10 ತಿಂಗಳ ಹಿಂದೆ ನಿನಗೆ ಕಾಯಿಲೆ ಇದೆ, ತವರಿಗೆ ಹೋಗಿ ತೋರಿಸಿಕೊಂಡು ಬಾ ಎಂದು ನನ್ನನ್ನು ಕಳುಹಿಸಿದ್ದ. ತವರು ಮನೆಯಲ್ಲಿ ಉಳಿದು ಕೊಂಡಿದ್ದ ನಾನು ಹಲವು ವೈದ್ಯರಿಗೆ ತೋರಿಸಿ, ತಪಾಸಣೆ ಮಾಡಿಸಿಕೊಂಡಿದ್ದೆ. ಆದರೆ, ಯಾವುದೇ ಕಾಯಿಲೆ ಇಲ್ಲ ಎಂಬುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
ಬಳಿಕ, ನನಗೆ ಯಾವುದೇ ಕಾಯಿಲೆ ಇಲ್ಲ. ಹೀಗಾಗಿ, ಗೋವಾಕ್ಕೆ ಕರೆದುಕೊಂಡು ಹೋಗುವಂತೆ ನನ್ನ ತಂದೆ-ತಾಯಿ, ಹಿರಿಯರೆಲ್ಲರೂ ಪತಿ ಇಸ್ಮಾಯಿಲ್‌ಗೆ ಹೇಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ಪತಿ, ನನಗೆ ಕಾಯಿಲೆ ಇದೆ. ಆದ್ದರಿಂದ ವಿಚ್ಛೇದನ ನೀಡುವುದಾಗಿ ಹೇಳಿ ನನ್ನನ್ನು ಗೋವಾಕ್ಕೆ ಕರೆಸಿಕೊಂಡಿಲ್ಲ. ಈ ಮಧ್ಯೆ, 2019ರ ಫೆ.22ರಂದು ಅಂಚೆ ಮೂಲಕ ಪತಿ ಇಸ್ಮಾಯಿಲ್, ತಲಾಖ್-ಎ-ಬಿನ್ ಕಳುಹಿಸಿದ್ದಾರೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ವೈವಾಹಿಕ ಜೀವನ ಸರಿಯಾಗಿ ನಡೆಯುತ್ತಿಲ್ಲ. ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲವಾಗಿದೆ ಎಂದು ಹೇಳಿ ಇಸ್ಮಾಯಿಲ್ ತನ್ನ ಪತ್ನಿ ಬೀಬಿ ಆಯೀಶಾಗೆ ತಲಾಖ್ ನೀಡಿದ್ದಾರೆ. 17,786 ಮೊತ್ತದ ಡಿ.ಡಿ. ಕಳುಹಿಸಿ ತಲಾಖ್ ನೀಡಿದ್ದಾರೆ. ಕಾನೂನು ಬಾಹಿರವಾಗಿ ತಲಾಖ್ ನೀಡುವ ಮೂಲಕ ನನಗೆ ಅನ್ಯಾಯ ಮಾಡಲಾಗಿದೆ. ಹೀಗಾಗಿ, ನ್ಯಾಯ ಒದಗಿಸಿಕೊಡಿ ಎಂದು ಪತ್ನಿ ದೂರು ನೀಡಿದ್ದಾರೆ.
ಯಕ್ಕುಂಡಿಯ ಬೀಬಿ ಆಯೀಶಾಳನ್ನು ಇಸ್ಮಾ ಯಿಲ್ ಖಾನ್‌ನೊಂದಿಗೆ ವಿವಾಹ ಮಾಡಿಕೊಡ ಲಾಗಿತ್ತು. 10 ತಿಂಗಳ ಹಿಂದೆ ಕಾಯಿಲೆ ಇರುವುದಾಗಿ ಹೇಳಿ ಪತ್ನಿಗೆ ಅಂಚೆ ಮೂಲಕ ತಲಾಖ್ ನೀಡಿರುವ ಬಗ್ಗೆ ಸವದತ್ತಿ ಠಾಣೆಯಲ್ಲಿ ಶುಕ್ರವಾರ ರಾತ್ರಿ ದೂರು ದಾಖಲಾಗಿದೆ. ಪ್ರಕರಣ ಕುರಿತು ತನಿಖೆ ನಡೆದಿದ್ದು, ಪತಿಯನ್ನು ಕರೆ ತಂದು ವಿಚಾರಣೆ ನಡೆಸಲಾಗುವುದು.
-ಲಕ್ಷ್ಮಣ ನಿಂಬರಗಿ, ಎಸ್‌ಪಿ, ಬೆಳಗಾವಿ