ಹಳಿಯಾಳ: ಕೊಳಚೆ ನಿರ್ಮೂಲನಾ ಮಂಡಳಿಯಿಂದ ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಆರೋಪಿಸಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆವಾಸ್ ಯೋಜನೆಯಡಿ ಕೊಳಚೆ ನಿರ್ಮೂಲನಾ ಮಂಡಳಿಗೆ ಮನೆಗಳನ್ನು ಕಟ್ಟಲು ಅನುದಾನ ಬಿಡುಗಡೆಯಾಗಿದೆ. ಸರ್ಕಾರಿ ಜಾಗ ಅತಿಕ್ರಮಣ ಮಾಡಿರುವುದನ್ನು ಗುರುತಿಸಿ ಹಾಗೂ ಕೊಳಚೆ ಪ್ರದೇಶವೆಂದು ಗುರುತಿಸಲ್ಪಟ್ಟಿದ್ದ ಜಾಗದಲ್ಲಿಯೇ ಮನೆ ಕಟ್ಟಬೇಕೆಂಬ ನಿಮಯವಿದೆ. ಆದರೆ ಹಳಿಯಾಳದಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.
ಪಟ್ಟಣದ ಚವ್ವಾಣ ಪ್ಲಾಟ್ ಹಾಗೂ ಚರ್ಚ್ ಪಕ್ಕದ ಯಾವುದೇ ಸ್ಥಳ ಕೊಳಚೆ ಪ್ರದೇಶಕ್ಕೆ ಬರುವುದಿಲ್ಲ. ಹೀಗಿದ್ದರು ಸ್ಲಂ ಬೋರ್ಡ್‌ನವರು ಕಾನೂನು ಬಾಹಿರವಾಗಿ ಇಲ್ಲಿ ಮನೆಗಳನ್ನು ಕಟ್ಟುತ್ತಿದ್ದು ಇದರಿಂದ ಕೊಳಚೆ ಪ್ರದೇಶದ ಜನರಿಗೆ- ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆಯದೆ ವಂಚನೆಯಾಗುತ್ತಿದೆ ಎಂದರು. ಪಟ್ಟಣದ ಹೊರಗಿನ ಗುತ್ತಿಗೇರಿ, ಸಿದ್ದರಾಮೇಶ್ವರಗಲ್ಲಿ ಸೇರಿದಂತೆ 3-4 ಪ್ರದೇಶ ಹೊರತುಪಡಿಸಿ ಯಾವುದೇ ಪ್ರದೇಶ ಕೊಳಚೆ ಪ್ರದೇಶವೆಂದು ಗುರುತಿಸದೆ ಇದ್ದರು ಕೂಡ ಪುರಸಭೆ ಸದಸ್ಯರೊಬ್ಬರು, ಸ್ಲಂ ಬೋರ್ಡ್ ಅಧಿಕಾರಿಗಳು ಶಾಮಿಲಾಗಿ ಫಲಾನುಭವಿಗಳ ಲಕ್ಷಾಂತರ ರೂ. ಲಪಟಾಯಿಸಲು ವ್ಯವಸ್ಥಿತ ಯೋಜನೆ ರೂಪಿಸಿದ್ದಾರೆ. ತಕ್ಷಣ ಈ ಕಾಮಗಾರಿ ತಡೆಯಬೇಕು ಎಂದು ಆಗ್ರಹಿಸಿದ ಸುನೀಲ್ ಹೆಗಡೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೂ ತರವುದಾಗಿ ಹೇಳಿದರು.
ಸದ್ಯಕ್ಕೆ ಚೌಕಿಮಠ ಹಾಗೂ ಚವ್ವಾಣ ಪ್ಲಾಟ್ ಪ್ರದೇಶದಲ್ಲೂ ಈ ಮಂಡಳಿ ಅಧಿಕಾರಿಗಳಿಂದ ಅವ್ಯವಹಾರ, ಭ್ರಷ್ಟಾಚಾರ ನಡೆಸಲಾಗಿರುವ ಬಗ್ಗೆ ಜನರಿಂದ ದೂರುಗಳು ಇರುವ ಕಾರಣ ಹಾಗೂ ಒಂದು ಸಮುದಾಯಕ್ಕೆ ಲಾಭ ದೊರಕಿಸಿಕೊಡಲು ಇನ್ನೊಂದು ಸಮುದಾಯ ತುಳಿಯುವ ಹುನ್ನಾರ ಮಾಡುವುದು ಯಾವ ಪುರುಷಾರ್ಥಕ್ಕ ಎಂದು ಪ್ರಶ್ನಿಸಿದ ಹೆಗಡೆ, ಈ ಕುರಿತು ಸರ್ಕಾರಕ್ಕೆ ದೂರು ನೀಡುವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯರು ಹಗೂ ಸ್ಥಳೀಯ ಶಾಸಕರು ಟ್ಯಾಂಕರ್ ನೀರು ಸರಬರಾಜು ವಿಷಯದಲ್ಲಿ ಕೆಳಮಟ್ಟದ ಪ್ರಚಾರಕ್ಕೆ ಮುಂದಾಗಿರುವರು. ಇದರಿಂದ ಅನಾವಶ್ಯಕ ಗದ್ದಲ ಉಂಟಾಗಿದ್ದು ಮುಜುಗರದ ವಾತಾವರಣ ನಿರ್ಮಾಣವಾಗಿದ್ದು 24 ತಾಸಿನೊಳಗೆ ಪುರಸಭೆ ನೀರು ಪೂರೈಸದೆ ಇದ್ದರೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ದೂರು ನೀಡಲಾಗುವುದು. ಮುಂದೆ ಏನೇ ಕ್ರಮ ಜರುಗಿದರು ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಸಿದರು.