Advertisement

ವಿಕೆಟ್‌ ಕೀಪರ್‌ಗಳಿಗೂ ಕೋಚ್‌ ಅಗತ್ಯ: ಸಯ್ಯದ್‌ ಕಿರ್ಮಾನಿ

11:52 PM Jan 02, 2022 | Team Udayavani |

1983ರ ವಿಶ್ವಕಪ್‌ ವಿಜೇತ ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಆಗಿದ್ದು, ಆ ವಿಶ್ವಕಪ್‌ನಲ್ಲಿಯೇ ಶ್ರೇಷ್ಠ ವಿಕೆಟ್‌ಕೀಪರ್‌ ಎಂಬ ಹೆಗ್ಗಳಿಕೆ ಪಡೆದಿದ್ದ ಸಯ್ಯದ್‌ ಕಿರ್ಮಾನಿ ಅವರು ಉಡುಪಿಗೆ ಭೇಟಿ ನೀಡಿದ್ದ ಸಂದರ್ಭ “ಉದಯವಾಣಿ’ ಜತೆ ಮಾತನಾಡಿ ಕ್ರಿಕೆಟ್‌ ರಂಗದಲ್ಲಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Advertisement

 ವಿಕೆಟ್‌ಕೀಪರ್‌ಗಳ ಗುಣಮಟ್ಟ ಸುಧಾರಣೆ ಹೇಗೆ ?
ವಿಕೆಟ್‌ಕೀಪರ್‌ಗಳು ಗುಣಮಟ್ಟ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಭಾರತ ತಂಡದಲ್ಲಿ ಇದುವರೆಗೂ ವಿಕೆಟ್‌ಕೀಪಿಂಗ್‌ ಕೋಚ್‌ ಬಗ್ಗೆ ಯೋಚಿಸಿಲ್ಲ. ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌ಗೆ ಪ್ರತ್ಯೇಕ ಕೋಚ್‌ಗಳು ಇದ್ದಾರೆ. ಆದರೆ ಕೀಪಿಂಗ್‌ಗೆ ಕೋಚ್‌ ಇಲ್ಲ. ಕ್ರಿಕೆಟ್‌ನಲ್ಲಿ ವಿಕೆಟ್‌ಕೀಪಿಂಗ್‌ ಎನ್ನುವುದು ಹೆಚ್ಚು ಪ್ರಾಮುಖ್ಯ
ಪಡೆದಿದೆ. ಒಬ್ಬ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ದೌರ್ಬಲ್ಯವನ್ನು ಪತ್ತೆ ಮಾಡಿ ಫೀಲ್ಡರ್‌ ಮತ್ತು ಬೌಲರ್‌ಗಳಿಗೆ ಎಚ್ಚರಿಸಬಹುದು. ಈ ಎಲ್ಲ ವಿಚಾರಗಳಿಂದ ತನ್ನ ತಂಡದ ನಾಯಕನಿಗೆ ವಿಕೆಟ್‌ಕೀಪರ್‌ ಉತ್ತಮ ಮಾರ್ಗದರ್ಶಕನಾಗಿರುತ್ತಾನೆ. ಈಗಾಗಲೇ ಇದನ್ನು ಎಂ.ಎಸ್‌. ಧೋನಿ ಸಾಬೀತು ಪಡಿಸಿದ್ದು, ತಂಡದ ನಾಯಕನಾಗಿಯೂ ಅವರು ಯಶಸ್ವಿಯಾದರು.

ಯುವ ಕ್ರಿಕೆಟಿಗರಿಗೆ ನಿರಂತರ ಫಾರ್ಮ್ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ?
ಕಳಪೆ ಫಾರ್ಮ್ ಎಲ್ಲರನ್ನೂ ಒಂದಲ್ಲ ಒಂದು ರೀತಿಯಿಂದ ಕಾಡುತ್ತದೆ. ವೈಯಕ್ತಿಕವಾಗಿಯೂ ತಂಡದ ರೂಪದಲ್ಲಿಯೂ ಫಾರ್ಮ್ ಸಮಸ್ಯೆ ಇರಲಿದೆ. ಹಾಲಿ ಭಾರತ ತಂಡದಲ್ಲಿರುವ ಎಲ್ಲ ಯುವ ಆಟಗಾರರು ಉತ್ತಮ ಫಾರ್ಮ್ ನಲ್ಲಿದ್ದು, ಸ್ಥಿರತೆ ಕಾಯ್ದುಕೊಂಡಿದ್ದಾರೆ.

 ದೇಸಿ ಕ್ರಿಕೆಟ್‌ಗೆ ಐಪಿಎಲ್‌ ಯಾವ ರೀತಿಯಲ್ಲಿ ಅನುಕೂಲಕರ?
ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಿಂದ ದೇಸಿ ಕ್ರಿಕೆಟ್‌ಗೆ ಅನುಕೂಲವಿದೆ. ಯುವ, ಪ್ರತಿಭಾನ್ವಿತ ಆಟಗಾರರಿಗೆ ಐಪಿಎಲ್‌ ಒಳ್ಳೆಯ ವೇದಿಕೆಯಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್‌ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದರಿಂದ ಅವರಿಗೆ ಉತ್ತಮ ಮಾರ್ಗದರ್ಶನ ದೊರೆಯಲಿದೆ. ಕೆ.ಎಲ್‌.ರಾಹುಲ್‌ನಂಥ ಪ್ರತಿಭಾನ್ವಿತ ಆಟಗಾರರು ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಪ್ರಮುಖ ಪಂದ್ಯ ಸೋತಾಗ ನಾಯಕತ್ವ ಬದಲಾವಣೆ ಎಷ್ಟು ಸರಿ?
ನಾಯಕತ್ವದ ಬದಲಾವಣೆಯಿಂದ ಇತರ ಆಟಗಾರರ ಮೇರೆ ಪರಿಣಾಮ ಬೀರುವುದಿಲ್ಲ, ಇದರಿಂದ ಹೊಸ ಆಟಗಾರರಿಗೆ ಹೆಚ್ಚಿನ ಅವಕಾಶ ಮತ್ತು ಜವಾಬ್ದಾರಿಗಳು ಸಿಗುತ್ತವೆ. ಬಿಸಿಸಿಐ, ತಂಡದ ಆಯ್ಕೆ ಸಮಿತಿ ಇಲ್ಲಿವರೆಗೆ ತಂಡದ ನಾಯಕತ್ವ ವಿಚಾರಕ್ಕೆ ಸಂಬಂಧಿಸಿ ಉತ್ತಮ ನಿರ್ಧಾರವನ್ನೇ ತೆಗೆದುಕೊಂಡಿದೆ. ವಿರಾಟ್‌ ಕೊಹ್ಲಿ, ಧೋನಿ ಸಮರ್ಥವಾಗಿಯೇ ಇಲ್ಲಿವರೆಗೆ ತಂಡವನ್ನು ಮುನ್ನಡೆಸಿದ್ದಾರೆ. ಇವರಿಗೆ ಸಹ ಆಟಗಾರರ ಸಹಕಾರ ಅನನ್ಯವಾಗಿತ್ತು.

Advertisement

 ಬಯೋಬಬಲ್‌, ಯೊ-ಯೊ ಟೆಸ್ಟ್‌ ಎಲ್ಲ ಕಾಲಕ್ಕೂ ಅಗತ್ಯವಿದೆಯೆ?
ಪ್ರಸ್ತುತ ಆಟಗಾರರು ಫಾರ್ಮ್ ಜತೆಗೆ ಆರೋಗ್ಯ ಮತ್ತು ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದು ಮುಖ್ಯ. ಕೋವಿಡ್‌ ಸೋಂಕಿನಿಂದ ಆಟಗಾರರು ಸುರಕ್ಷಿತವಾಗಿರುವ ದೃಷ್ಟಿಯಿಂದ ಬಯೋಬಬಲ್‌ ಉತ್ತಮ ಕ್ರಮವಾಗಿದೆ. ಇನ್ನೂ ಯೊ-ಯೊ ಟೆಸ್ಟ್‌ಗೆ ಸಂಬಂಧಿಸಿ ಆಟಗಾರನ ದೈಹಿಕ ಕ್ಷಮತೆ ಪರೀಕ್ಷೆ ನಡೆಸಿ ಆಟವಾಡಿಸುವುದು ಸೂಕ್ತವಾಗಿದೆ.

ಬಿಡುವಿಲ್ಲದ ಸರಣಿಗಳಿಂದಾಗಿ ಆಟಗಾರರ ಫಾರ್ಮ್ ಮೇಲೆ ಪರಿಣಾಮ ಬೀರಲಾರದೇ?
ಟೆಸ್ಟ್‌, ಏಕದಿನ ಸರಣಿ ಮತ್ತೆ 20-20 ಹೀಗೆ ಒಂದರ ಹಿಂದೆ ಒಂದು ಬಿಡುವಿಲ್ಲದ ಪಂದ್ಯಗಳಿಂದ, ನಿರಂತರ ಪ್ರವಾಸದಿಂದ ಆಟಗಾರರು ಬಳಲುತ್ತಾರೆ. ಇದರಿಂದ ಮುಂದಿನ ದಿನಗಳಲ್ಲಿ ಆಟಗಾರರು ಕಳಪೆ ಫಾರ್ಮ್ ಹೊಂದುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಆಟಗಾರರಿಗೆ ವಿಶ್ರಾಂತಿ ಅಗತ್ಯವಿದೆ. ಯುವ ಆಟಗಾರರಿಗೂ ಇದರಿಂದ ಅವಕಾಶ ಸಿಗಲಿದೆ.

 “83′ ಸಿನೆಮಾ- ಆ ದಿನ, ಆ ಕ್ಷಣ, ಕಣ್ಣೀರು..
“83′ ಸಿನೆಮಾ ನೋಡಿ ಗದ್ಗದಿತನಾಗಿ ಕಣ್ಣೀರು ಬಂದುಬಿಟ್ಟಿತು. 1983ರ ವಿಶ್ವಕಪ್‌ ಕ್ರಿಕೆಟ್‌ ತಂಡದ ನಮ್ಮ ಎಲ್ಲ 15 ಸದಸ್ಯರು ಮತ್ತು ಕುಟುಂಬದವರಿಗೆ ಮುಂಬಯಿಯಲ್ಲಿ ಚಿತ್ರತಂಡ ಸಿನೆಮಾ ತೋರಿಸಿದರು. ಆ ರೋಚಕ ಐತಿಹಾಸಿಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಭಾವನಾತ್ಮಕವಾಗಿ ಸಿನೆಮಾ ರೂಪಿಸಿದ್ದಾರೆ. ನಿಜಕ್ಕೂ ಅಂದು ನಾವು ಹೇಗೆ ಬಲಿಷ್ಠ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿ ವಿಶ್ವಕಪ್‌ ಗೆದ್ದು ಬೀಗಿದೆವು ಎಂಬುದು ಈಗಲೂ ಅಚ್ಚರಿ ಆಗುತ್ತಿದೆ. ಆ ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧದ ನಮ್ಮ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಆ ದಿನ ರಾತ್ರಿ ತಂಡದ ಸದಸ್ಯರೆಲ್ಲ ಭಾರತ ತ್ರಿವರ್ಣ ಧ್ವಜ ಹಾರುತ್ತಿದ್ದ ಜಾಗದಲ್ಲಿ ಕೆಳಗೆ ನಿಂತು ವಿಶ್ವಕಪ್‌ ಗೆಲ್ಲುವ ಸಂಕಲ್ಪ ಮಾಡಿದೆವು. ದೇಶವೇ ಹೆಮ್ಮೆಪಡುವಂತೆ ರೋಚಕ ಗೆಲುವು ದಾಖಲಿಸಿದೆವು. ಈ ಎಲ್ಲ ಸಿಹಿ ನೆನಪು ಸಿನೆಮಾ ಕಟ್ಟಿಕೊಟ್ಟಿದೆ. ಅಂದು ಏನೂ ಇಲ್ಲದೆ ವಿಶ್ವಕಪ್‌ ಗೆಲುವು ಸಾಧಿಸಿದೆವು. ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಕ್ರಿಕೆಟ್‌ ವೈಭವ ಪ್ರಸ್ತುತ ವರ್ಣಿಸಲಸಾಧ್ಯ.

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next