Advertisement

WI V/s Aus: ರುದರ್‌ಫೋರ್ಡ್‌-ರಸೆಲ್‌ ದಾಖಲೆ ಜತೆಯಾಟ ಆಸೀಸ್‌ಗೆ ಸೋಲುಣಿಸಿದ ವಿಂಡೀಸ್‌

11:04 PM Feb 13, 2024 | Team Udayavani |

ಪರ್ತ್‌: ಶರ್ಫೇನ್‌ ರುದರ್‌ಫೋರ್ಡ್‌ ಮತ್ತು ಆ್ಯಂಡ್ರೆ ರಸೆಲ್‌ ಅವರ ದಾಖಲೆ ಜತೆಯಾಟದ ನೆರವಿನಿಂದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 37 ರನ್ನುಗಳಿಂದ ಸೋಲಿಸಿದ ವೆಸ್ಟ್‌ ಇಂಡೀಸ್‌ ತನ್ನ ಸರಣಿ ಸೋಲಿನ ಅಂತರವನ್ನು 1-2ಕ್ಕೆ ಇಳಿಸಿಕೊಂಡಿದೆ.

Advertisement

ಮಂಗಳವಾರ ಪರ್ತ್‌ನಲ್ಲಿ ನಡೆದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ವೆಸ್ಟ್‌ ಇಂಡೀಸ್‌ 6 ವಿಕೆಟಿಗೆ 220 ರನ್‌ ಪೇರಿಸಿದರೆ, ಆಸ್ಟ್ರೇಲಿಯ 5 ವಿಕೆಟಿಗೆ 183 ರನ್‌ ಮಾಡಿತು.
9 ಓವರ್‌ ವೇಳೆ 79 ರನ್ನಿಗೆ 5 ವಿಕೆಟ್‌ ಕಳೆದುಕೊಂಡಿದ್ದ ವೆಸ್ಟ್‌ ಇಂಡೀಸ್‌ ತೀವ್ರ ಸಂಕಟದಲ್ಲಿತ್ತು. ಆಗ ಜತೆಗೂಡಿದ ರುದರ್‌ಫೋರ್ಡ್‌ ಮತ್ತು ರಸೆಲ್‌ ಆಸೀಸ್‌ ಬೌಲಿಂಗ್‌ ದಾಳಿಯನ್ನು ಪುಡಿಗಟ್ಟುತ್ತ ಸಾಗಿದರು. ಸ್ಫೋಟಕ ಬ್ಯಾಟಿಂಗ್‌ ಮೂಲಕ ವಿಂಡೀಸ್‌ ಮೊತ್ತವನ್ನು ಏರಿಸುತ್ತ ಹೋದರು. ಪರ್ತ್‌ ಅಂಗಳದಲ್ಲಿ ರನ್‌ ಪ್ರವಾಹವೇ ಹರಿದು ಬಂತು. ರುದರ್‌ಫೋರ್ಡ್‌ 40 ಎಸೆತಗಳಿಂದ 67 ರನ್‌ ಬಾರಿಸಿದರೆ (5 ಫೋರ್‌, 5 ಸಿಕ್ಸರ್‌), ರಸೆಲ್‌ ಕೇವಲ 29 ಎಸೆತ ಎದುರಿಸಿ 71 ರನ್‌ ಕಲೆಹಾಕಿದರು. ಸಿಡಿಸಿದ್ದು 4 ಬೌಂಡರಿ ಹಾಗೂ 7 ಸಿಕ್ಸರ್‌.

ರುದರ್‌ಫೋರ್ಡ್‌-ರಸೆಲ್‌ 139 ರನ್‌ ಜತೆಯಾಟ ನಿಭಾಯಿಸಿದರು. ಇದು 6ನೇ ವಿಕೆಟಿಗೆ ಒಟ್ಟುಗೂಡಿದ ಅತ್ಯಧಿಕ ಮೊತ್ತದ ದಾಖಲೆ ಆಗಿದೆ. ಶ್ರೀಲಂಕಾ ಎದುರಿನ 2010ರ ಬ್ರಿಜ್‌ಟೌನ್‌ ಪಂದ್ಯದಲ್ಲಿ ಆಸ್ಟ್ರೇಲಿಯದ ಮೈಕಲ್‌ ಹಸ್ಸಿ-ಕ್ಯಾಮರಾನ್‌ ವೈಟ್‌ 101 ರನ್‌, 2022ರಲ್ಲಿ ಸಿಂಗಾಪುರ ವಿರುದ್ಧ ಪಪುವಾ ನ್ಯೂ ಗಿನಿ ತಂಡದ ಟೋನಿ ಪಾಲ ಉರ ಮತ್ತು ನಾರ್ಮನ್‌ ವನುವ 115 ರನ್‌ ಒಟ್ಟುಗೂಡಿಸಿದ್ದರು.

ವಾರ್ನರ್‌ ಅಬ್ಬರದ ಆಟ
ಆಸ್ಟ್ರೇಲಿಯದ ಚೇಸಿಂಗ್‌ ವೇಳೆ ಡೇವಿಡ್‌ ವಾರ್ನರ್‌ ಸಿಡಿದು ನಿಂತರು. 49 ಎಸೆತಗಳಿಂದ 81 ರನ್‌ ಬಾರಿಸಿ (9 ಬೌಂಡರಿ, 3 ಸಿಕ್ಸರ್‌) ತವರಲ್ಲಿ ಆಡಿದ ಅಂತಿಮ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಜತೆಗೆ ಸರಣಿಶ್ರೇಷ್ಠ ಗೌರವವೂ ಒಲಿದು ಬಂತು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-6 ವಿಕೆಟಿಗೆ 220 (ರಸೆಲ್‌ 71, ರುದರ್‌ಫೋರ್ಡ್‌ ಔಟಾಗದೆ 67, ಚೇಸ್‌ 37, ಬಾಟ್ಲೆìಟ್‌ 37ಕ್ಕೆ 2). ಆಸ್ಟ್ರೇಲಿಯ-5 ವಿಕೆಟಿಗೆ 183 (ವಾರ್ನರ್‌ 81, ಡೇವಿಡ್‌ ಔಟಾಗದೆ 41, ಚೇಸ್‌ 19ಕ್ಕೆ 2, ಶೆಫ‌ರ್ಡ್‌ 31ಕ್ಕೆ 2).

Advertisement

ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್‌. ಸರಣಿಶ್ರೇಷ್ಠ: ಡೇವಿಡ್‌ ವಾರ್ನರ್‌.

 

Advertisement

Udayavani is now on Telegram. Click here to join our channel and stay updated with the latest news.

Next