Advertisement
ನನ್ನ ಲಸಿಕೆ, ನನ್ನ ಹಕ್ಕು ಮೊದಲಿನಿಂದಲೂ ಇಂಥದ್ದೊಂದು ವಾದವನ್ನು ಮುಂದಿಡುತ್ತಾ ಬಂದಿದ್ದಾರೆ, ಜಗತ್ತಿನ ನಂ.1 ಟೆನಿಸ್ ಆಟಗಾರ ನೊವಾಕ್ ಜೊಕೋವಿಕ್. ಸದ್ಯ ಬಹುತೇಕ ಎಲ್ಲ ದೇಶಗಳು, ತಮ್ಮ ದೇಶಕ್ಕೆ ಆಗಮಿಸುವವರಿಗೆ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರುವ ಮತ್ತು ಕೊರೊನಾ ನೆಗೆಟಿವ್ ವರದಿಯನ್ನು ಕೇಳುತ್ತಿವೆ. ಆದರೆ ಜೊಕೋ ಮಾತ್ರ ತಾವು ಲಸಿಕೆ ಪಡೆದಿರುವ ಅಥವಾ ಪಡೆಯದೇ ಇರುವ ಕುರಿತ ಯಾವುದೇ ಮಾಹಿತಿ ನೀಡಲ್ಲ ಎಂದೇ ವಾದಿಸಿಕೊಂಡು ಬರುತ್ತಿದ್ದಾರೆ. ನಾನು ಲಸಿಕೆ ಪಡೆಯುವುದು ಅಥವಾ ಪಡೆಯದೇ ಇರುವುದು ನನ್ನ ಹಕ್ಕು. ಈ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ ಎಂಬುದು ಅವರ ವಾದ.
ಸದ್ಯದಲ್ಲೇ ಇಲ್ಲಿ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿ ಆರಂಭವಾಗಲಿದೆ. ಈಗಾಗಲೇ ಎರಡೂ ಡೋಸ್ ಲಸಿಕೆ ಪಡೆದಿರುವ ಜಗತ್ತಿನ ಶ್ರೇಷ್ಠ ಆಟಗಾರರಾಗಿರುವ ರೋಜರ್ ಫೆಡರರ್, ರಫೇಲ್ ನಡೇಲ್ ಅವರು ಆಸ್ಟ್ರೇಲಿಯಾಕ್ಕೆ ಬಂದಿಳಿದಿದ್ದಾರೆ. ಹಾಗೆಯೇ ಇನ್ನೂ ಹಲವು ಆಟಗಾರರು ಬಂದಿದ್ದಾರೆ. ಸದ್ಯ ಜಗತ್ತಿನಲ್ಲಿ ಕೊರೊನಾ ತಾಂಡವವಾಡುತ್ತಿರುವುದರಿಂದ ಕಡ್ಡಾಯವಾಗಿ 2 ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ದೇಶಕ್ಕೆ ಪ್ರವೇಶ ಎಂದು ಆಸ್ಟ್ರೇಲಿಯಾ ನಿಯಮ ಮಾಡಿದೆ. ಅಲ್ಲದೆ ಕೊರೊನಾ ಸಂಬಂಧಿತ ಇನ್ನೂ ಹಲವಾರು ಕಠಿನ ನಿಯಮಗಳು ಇಲ್ಲಿ ಜಾರಿಯಲ್ಲಿವೆ. ವಾರದ ಹಿಂದಷ್ಟೇ ಲಸಿಕೆ ಕಾರಣದಿಂದಲೇ ಆಸ್ಟ್ರೇಲಿಯಾ ಓಪನ್‌ನಿಂದ ಹಿಂದೆ ಸರಿಯುವುದಾಗಿ ಹೇಳಿದ್ದ ಜೊಕೋ, ಅನಂತರ ವಿಕ್ಟೋರಿಯನ್ ಸ್ಟೇಟ್‌ನಿಂದ ಮೆಡಿಕಲ್ ವಿನಾಯಿತಿ ಸಿಕ್ಕಿದ್ದು, ಓಪನ್‌ನಲ್ಲಿ ಆಡಲಿದ್ದೇನೆ ಎಂದಿದ್ದರು. ಹೀಗಾಗಿಯೇ ಬುಧವಾರ ರಾತ್ರಿಯೇ ಮೆಲ್ಬೋರ್ನ್ ಗೆ ಬಂದಿಳಿದಿದ್ದರು. ಈಗೇನಾಗಿದೆ?
ಜೊಕೋವಿಕ್‌ಗೆ ವೈದ್ಯಕೀಯ ವಿನಾಯಿತಿ ಕೊಟ್ಟಿದ್ದಾರೆ ಎನ್ನಲಾದ ಸುದ್ದಿ ಆಸ್ಟ್ರೇಲಿಯಾದಲ್ಲಿ ಭಾರೀ ವಿವಾದ ಸೃಷ್ಟಿಸಿದೆ. ಸಿರಿವಂತರು ಮತ್ತು ಗಣ್ಯರಿಗೆ ಒಂದು ನ್ಯಾಯ, ಉಳಿದವರಿಗೆ ಮತ್ತೂಂದು ನ್ಯಾಯವೇ ಎಂದು ಜನತೆ ಪ್ರಶ್ನಿಸಿದೆ. ಹೀಗಾಗಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು, ಜೊಕೋಗೆ ವೈದ್ಯಕೀಯ ವಿನಾಯಿತಿಯನ್ನು ನಿರಾಕರಸಿದ್ದಾರೆ. ನಿಯಮಗಳು ಎಲ್ಲರಿಗೂ ಒಂದೇ, ಇದನ್ನು ಯಾರೂ ಉಲ್ಲಂ ಸುವಂತಿಲ್ಲ. ಒಂದು ವೇಳೆ, ಜೊಕೋ ಎಲ್ಲ ವೈದ್ಯಕೀಯ ನಿಯಮಾವಳಿಗಳನ್ನು ಪೂರೈಸಿದ ಮೇಲೆ ದೇಶದೊಳಗೆ ಎಂಟ್ರಿ ಕೊಡಬಹುದು ಎಂದಿದ್ದಾರೆ. ಸೆರ್ಬಿಯಾದಲ್ಲಿ ಆಕ್ರೋಶ
ಆಸ್ಟ್ರೇಲಿಯದಲ್ಲಿ ಜೊಕೋ ಅವರನ್ನು ನಡೆಸಿಕೊಂಡ ಬಗ್ಗೆ, ತವರು ದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಡೀ ದೇಶ ಜೊಕೋ ಬೆನ್ನಿಗೆ ನಿಲ್ಲಲಿದೆ ಎಂದು ಅಲ್ಲಿನ ಪ್ರಧಾನಿ ಹೇಳಿದ್ದಾರೆ. ಮೊದಲಿಗೆ ವೈದ್ಯಕೀಯ ವಿನಾಯಿತಿ ನೀಡುತ್ತೇವೆ ಎಂದು ಹೇಳಿ, ಈಗ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ.
Advertisement
ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆಯೇ? ಹೌದು, ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡುವ ಆಟಗಾರರು ಮತ್ತು ಇತರ ಸಿಬಂದಿ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಲೇಬೇಕು. ಇಲ್ಲದಿದ್ದರೆ ಇಂಥವರಿಗೆ ಆಸ್ಟ್ರೇಲಿಯಾದೊಳಗೆ ಪ್ರವೇಶ ಸಿಗುವುದೇ ಇಲ್ಲ. ಬಹುತೇಕ ಎಲ್ಲ ಆಟಗಾರರು ಮತ್ತು ಸಿಬಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಫೆಡರರ್ ಕೂಡ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದರು. ಇದೇ ಮೊದಲ ವಿವಾದವೇ?
ಜೊಕೋ ವಿಚಾರದಲ್ಲಿ ಇದು ಮೊದಲ ವಿವಾದವೇನಲ್ಲ. 2020ರಲ್ಲಿ ಇಡೀ ಜಗತ್ತಿನಲ್ಲಿಯೇ ಕೊರೊನಾ ಸ್ಫೋಟಗೊಂಡಾಗ, ಇವರು ಪ್ರದರ್ಶನ ಪಂದ್ಯಾವಳಿ ಏರ್ಪಡಿಸಿ ಜಗತ್ತಿನ ಬೇರೆ ಬೇರೆ ದೇಶಗಳ ಆಟಗಾರರನ್ನು ಕರೆಸಿಕೊಂಡಿದ್ದರು. ಈ ಸಂದರ್ಭದಲ್ಲಿ ಜೊಕೋ ಸೇರಿದಂತೆ ಹಲವಾರು ಆಟಗಾರರಿಗೆ ಕೊರೊನಾ ಬಂದಿತ್ತು. ಬಳಿಕ ಅವರು ಈ ಪ್ರದರ್ಶನ ಪಂದ್ಯಾವಳಿ ಏರ್ಪಡಿಸಿದ್ದಕ್ಕೆ ಪಶ್ಚಾತ್ತಾಪಪಟ್ಟಿದ್ದರು. ಜೊಕೋಗೆ ಆಸ್ಟ್ರೇಲಿಯನ್ ಓಪನ್ ಮಹತ್ವದ್ದು
ಜೊಕೋವಿಕ್ ಅವರು ಈಗಾಗಲೇ ವಿಂಬಲ್ಡನ್, ಯುಎಸ್ ಮತ್ತು ಫ್ರೆಂಚ್ ಓಪನ್ ಅನ್ನು ಗೆದ್ದಿದ್ದು, ಆಸ್ಟ್ರೇಲಿಯ ಓಪನ್ ಅನ್ನು ಗೆದ್ದರೆ, ಒಂದೇ ವರ್ಷ ನಾಲ್ಕೂ ಪ್ರಮುಖ ಗ್ರಾನ್ ಸ್ಲಾಮ್ ಗಳನ್ನು ಗೆದ್ದ ಕೀರ್ತಿಗೆ ಪಾತ್ರರಾಗುತ್ತಾರೆ. ಅಲ್ಲದೆ ಇನ್ನೊಂದು ಗೆದ್ದರೆ, 21 ಗ್ರಾನ್ ಸ್ಲಾಮ್ ಗಳನ್ನು ಗೆದ್ದ ದಾಖಲೆಯನ್ನೂ ಮಾಡುತ್ತಾರೆ. ಅಂದರೆ ಫೆಡರರ್, ನಡಾಲ್ ಮತ್ತು ಜೊಕೋ ತಲಾ 20 ಪ್ರಶಸ್ತಿ ಗೆದ್ದಿದ್ದು, ಇವರು ಇನ್ನೊಂದು ಗೆದ್ದರೆ ದಾಖಲೆ ನಿರ್ಮಿಸುತ್ತಾರೆ.