ಶಿಲ್ಲಾಂಗ್: ರಾಮ್ ಸಿಂಗ್ ಎಂಬ ಐಎಎಸ್ ಅಧಿಕಾರಿ, ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ನ ಉಪ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಈ ಐಎಎಸ್ ಅಧಿಕಾರಿ ಸ್ವಚ್ಛತೆ, ಹಸಿರು ಹಾಗೂ ಆರೋಗ್ಯಕರ ಜೀವನ ನಡೆಸಲು ಜನಸಾಮಾನ್ಯರಿಗೂ ಮಾದರಿಯಾಗುವ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ.
ವಾರದಲ್ಲಿ ಹತ್ತು ಕಿ.ಮೀ ನಡೆದು ಹೋಗಿ ತರಕಾರಿ ತರುತ್ತಾರೆ:
ಐಎಎಸ್ ಅಧಿಕಾರಿ ರಾಮ್ ಸಿಂಗ್ ಪ್ರತಿ ವಾರ ಹತ್ತು ಕಿಲೋ ಮೀಟರ್ ನಡೆದುಕೊಂಡೇ ಹೋಗಿ ಸ್ಥಳೀಯ ಮಾರ್ಕೆಟ್ ನಿಂದ ತರಕಾರಿ, ಹಣ್ಣು, ಹಂಪಲನ್ನು ತರುತ್ತಾರೆ. ಅಷ್ಟೇ ಅಲ್ಲ ಪ್ಲಾಸ್ಟಿಕ್ ಬಳಕೆ ತೊಲಗಿಸಲು, ವಾಹನದಿಂದಾಗುವ ವಾಯುಮಾಲಿನ್ಯ ಕಡಿಮೆ ಮಾಡುವ ಉದ್ದೇಶ ಹೊಂದಿರುವ ಇವರು ಹತ್ತು ಕಿಲೋ ಮೀಟರ್ ನಡೆದುಕೊಂಡೇ ಹೋಗಿ ತರಕಾರಿ ತರುತ್ತಾರೆ.
ಸ್ಥಳೀಯವಾಗಿ ಸಾಂಪ್ರದಾಯಿಕವಾಗಿ ಬಳಸುವ ಬಿದಿರಿನ ಬಾಸ್ಕೆಟ್ ನಲ್ಲಿ (ಟುರಾ ಮಾರ್ಕೆಟ್) ತರಕಾರಿ ಖರೀದಿಸಿ ಅದನ್ನು ಬೆನ್ನ ಮೇಲೆ ಹೊತ್ತುಕೊಂಡು ಬರುವ ಚಿತ್ರವನ್ನು ರಾಮ್ ಸಿಂಗ್ ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ.
21ಕೆಜಿ ತರಕಾರಿ ಖರೀದಿ, ಪ್ಲಾಸ್ಟಿಕ್ ಇಲ್ಲ, ವಾಹನದಿಂದ ವಾಯುಮಾಲಿನ್ಯ ಇಲ್ಲ, ಟ್ರಾಫಿಕ್ ಜಾಮ್ ಇಲ್ಲ, ಫಿಟ್ ಇಂಡಿಯಾ, ಫಿಟ್ ಮೇಘಾಲಯ, ಉತ್ತಮ ತರಕಾರಿ ತಿನ್ನಿ, ಕ್ಲೀನ್ ಅಂಡ್ ಗ್ರೀನ್ ಟುರಾ, ಹತ್ತು ಕಿಲೋ ಮೀಟರ್ ಬೆಳಗ್ಗಿನ ನಡಿಗೆ ಎಂದು ಬರೆದು ಚಿತ್ರ ಸಹಿತ ರಾಮ್ ಸಿಂಗ್ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.
ಐಎಎಸ್ ಅಧಿಕಾರಿಯ ಈ ಸರಳ ಜೀವನ, ಪರಿಸರ ಕಾಳಜಿಯ ಫೇಸ್ ಬುಕ್ ಪೋಸ್ಟ್ ಗೆ ಸಾವಿರಾರು ಜನರು ಇಷ್ಟಪಟ್ಟಿದ್ದಾರೆ. ನೂರಾರು ಮಂದಿ ಅವರ ಕಾಳಜಿಗೆ ಅಭಿನಂದನೆ ಸಲ್ಲಿಸಿದ್ದಾರೆ.