Advertisement

ಹೆಣ್ಣಿಗೆ ಮಾತ್ರ ಯಾಕೆ ಬದಲಾಗುವ ಅನಿವಾರ್ಯತೆ!

10:06 AM Dec 07, 2019 | mahesh |

ಹೆಣ್ಣಿನ ಪಾಲಿಗೆ ಬದಲಾಗಿ ಬಿಡುವುದೊಂದು ಅನಿವಾರ್ಯತೆ. ತನ್ನತನವನ್ನು ಮರೆತು ತನ್ನವರಿಗೋಸ್ಕರ ಬದಲಾಗಿ ಬಿಡುವ ಅಗತ್ಯತೆ. ಇಷ್ಟವಿದ್ದರೂ, ಇಲ್ಲದಿದ್ದರೂ ಅನಿವಾರ್ಯವಾಗಿ ಮತ್ತೂಬ್ಬರ ಇಷ್ಟದಂತೆ ಬದುಕಿಬಿಡುವುದು. ಹೆಣ್ಣು ಬದಲಾವಣೆಯನ್ನು ಸುಲಭವಾಗಿ ಒಪ್ಪಿಬಿಡುತ್ತಾಳೆ ಅನ್ನೋ ಕಾರಣಕ್ಕೇನೋ ಬದಲಾವಣೆ ಅವಳ ಪಾಲಿಗೊಂಡು ಅಲಿಖೀತ ನಿಯಮ.

Advertisement

ಸಮಾಜದಲ್ಲಿ ನಾನು ಹೀಗೆಯೇ ಬದುಕಿಬಿಡುತ್ತೇನೆ ಅಂದುಕೊಂಡು ಬದುಕಿಬಿಡುವವರು ತುಂಬಾ ಕಡಿಮೆ. ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಹಲವರು ಸಂಬಂಧಿಕರು ಏನ್‌ ಹೇಳ್ತಾರೋ, ನೆರೆಮನೆಯವರು ಟೀಕಿಸ್ತಾರಾ, ಸಮಾಜ ಇದನ್ನು ಒಪ್ಪಿಕೊಳ್ಳುತ್ತಾ ಅನ್ನೋ ಗೊಂದಲದಲ್ಲೇ ಅನಿವಾರ್ಯವಾಗಿ ಬದಲಾಗಿ ಬಿಡುತ್ತಾರೆ. ಹಾಗೆ ಬದಲಾಗದೆ ಸುಮ್ಮನೆ ಉಳಿದವರು ಸಮಾಜದ ಪಾಲಿಗೆ ಬಜಾರಿಗಳು, ನಡತೆಗೆಟ್ಟವರು, ಸಿಕ್ಕಾಪಟ್ಟೆ ಬೋಲ್ಡ್ ಎಂದೆನಿಸಿಕೊಳ್ಳುತ್ತಾರೆ.

ಅದೆಷ್ಟೋ ಹೆಣ್ಣು ಮಕ್ಕಳು ಕೆಲವೇ ಕೆಲವು ವರುಷಗಳ ಅಂತರದಲ್ಲಿ ಬದಲಾಗಿರೋದನ್ನು ನಾವು ನೋಡಿದ್ದೇವೆ. ಕಾಲೇಜಿಗೆ ಹೋಗೋವಾಗ ಎಲ್ಲರ ಜತೆ ಬೆರೆತು ಮಾತನಾಡುವವರು, ಆಮೇಲೆ ಇದ್ದಕ್ಕಿದ್ದಂತೆ ಒಮ್ಮೆಲೇ ಸೈಲೆಂಟಾಗಿ ಬಿಡುತ್ತಾರೆ. ಹಾಗಂತ ಅವರು ಇಷ್ಟಪಟ್ಟು ಆ ರೀತಿ ಬದಲಾಗಿರುವುದಿಲ್ಲ. ಯಾರದೋ ವರ್ತನೆ, ಯಾರದೋ ಟೀಕೆ ಅವರನ್ನು ಈ ರೀತಿ ಬದಲಾಗುವಂತೆ ಮಾಡಿರುತ್ತದೆ. ಅನಿವಾರ್ಯವಾಗಿ ಬದಲಾಗಿ ತಮ್ಮತನವನ್ನು ಕಳೆದುಕೊಳ್ಳುತ್ತಾರೆ.

ಅತಿಯಾಗಿ ಮಾತನಾಡಿದರೆ ಚೆಲ್ಲುಚೆಲ್ಲು, ಕಡಿಮೆ ಮಾತನಾಡಿದರೆ ಹುಡುಗಿ ಚುರುಕಿಲ್ಲ ಅನ್ನೋ ಟೀಕೆ ಹೆಣ್ಣುಮಕ್ಕಳನ್ನು ಅನಿವಾರ್ಯವಾಗಿ ಬದಲಾಗುವಂತೆ ಮಾಡಿಬಿಡುತ್ತದೆ. ತಾನಿಷ್ಟ ಬಂದಂತೆಯೇ ಇರುತ್ತೇನೆ ಎಂದುಕೊಂಡು ಹೆಣ್ಣುಮಕ್ಕಳು ಇರುವುದು ಕಡಿಮೆ. ಎಲ್ಲ ವಿಷಯದಲ್ಲೂ ಹೆಣ್ಣುಮಕ್ಕಳನ್ನು ಟೀಕಿಸುವ ಸಮಾಜದಲ್ಲಿ ಅದು ಅಸಾಧ್ಯ ಕೂಡ.

ಮದುವೆಯ ಮೊದಲು ಇದ್ದಂತೆ ಹೆಣ್ಣುಮಕ್ಕಳು ಮದುವೆಯಾದ ಮೇಲೆ ಇರಲು ಸಾಧ್ಯವಾಗುವುದಿಲ್ಲ. ಮದುವೆಯ ಮೊದಲು ಹೆಣ್ಣು ಮನೆಯಲ್ಲಿ ಅವಳೇ ರಾಜಕುಮಾರಿ. ತನ್ನ ನಿಲುವು, ನಿರ್ಧಾರ ಪ್ರಕಟಿಸಲು ಅವಳು ಯಾವತ್ತೂ ಸರ್ವ ಸ್ವತಂತ್ರಳು. ಆದರೆ, ಅದೇ ಹುಡುಗಿ, ಮದುವೆಯಾದ ಮೇಲೆ ಒಂದು ಸಣ್ಣ ನಿರ್ಧಾರವನ್ನು ತೆಗೆದುಕೊಳ್ಳಲೂ ನೂರಾರು ಬಾರಿ ಯೋಚಿಸುತ್ತಾಳೆ.

Advertisement

ಯಾಕೆಂದರೆ, ಅವಳ ಒಂದು ನಿರ್ಧಾರ ಅವಳ ವ್ಯಕ್ತಿತ್ವವನ್ನೇ ಪ್ರಶ್ನಿಸುವಂತಿರುತ್ತದೆ. ಮದುವೆಯಾದ ಬಳಿಕ ಹೆಣ್ಣು ತನಗಿಷ್ಟವಿಲ್ಲದ ಅದೆಷ್ಟೋ ವಿಷಯದಲ್ಲಿ ಬದಲಾಗಿಬಿಡುತ್ತಾಳೆ. ಎಲ್ಲರಿಗೋಸ್ಕರ ತನ್ನ ವ್ಯಕ್ತಿತ್ವವನ್ನೇ ಬದಲಾಯಿಸಿಕೊಳ್ಳುತ್ತಾಳೆ.

ಕೋಪ ಬಂದರೂ ತೋರಿಸಿಕೊಳ್ಳದೆ, ಎಲ್ಲವನ್ನೂ ಸಹಿಸಿಕೊಂಡು, ನೋವನ್ನು ನುಂಗಿಕೊಂಡು ಬದುಕುವುದನ್ನು ಕಲಿತುಕೊಳ್ಳುತ್ತಾಳೆ.

ಇಷ್ಟವೇ ಇಲ್ಲದ ತರಕಾರಿ ಮನೆಯವರಿಗೆಲ್ಲ ಇಷ್ಟವಾದರೆ ಅನಿವಾರ್ಯವಾಗಿ ಅದನ್ನು ರೂಢಿಯಾಗಿಸಿಕೊಳ್ಳುತ್ತಾಳೆ.

ಎಲ್ಲರೂ ನೋಡುವ ಚಾನೆಲ್‌ನ್ನು ನೋಡಲು ಒಪ್ಪುತ್ತಾಳೆ.
ಸ್ವತಂತ್ರಳಾಗಿ, ಸ್ವಾಭಿಮಾನವಾಗಿ ತನ್ನಿಷ್ಟ ದಂತೆಯೇ ಬದುಕಿದವಳು ತನ್ನ ಸ್ಯಾಲರಿಯ ವ್ಯಯಿಸಿದ ರೀತಿಯನ್ನೂ ಹಿರಿಯರ ಮುಂದಿಡುತ್ತಾಳೆ.

ಎಲ್ಲಕ್ಕಿಂತ ಮುಖ್ಯವಾಗಿ ತನ್ನ ತಪ್ಪಿಲ್ಲದಿದ್ದರೆ ಆಕಾಶ-ಭೂಮಿ ಒಂದು ಮಾಡುವವಳು, ಮಾಡದ ತಪ್ಪನ್ನೂ ಸುಲಭವಾಗಿ ಒಪ್ಪಿಕೊಂಡು ಬಿಡುತ್ತಾಳೆ.

ಹೆಣ್ಣಿನ ಪಾಲಿಗೆ ಮದುವೆಯೆನ್ನುವುದು ಹೊಸ ಸಂಬಂಧಗಳನ್ನು ಕೂಡಿಸುವ ಕೆಲಸ. ಹೀಗಾಗಿ ಸಂಬಂಧವೆನ್ನುವ ಆ ದೀರ್ಘ‌ ಬಂಧನದಲ್ಲಿ ಉಳಿದುಕೊಳ್ಳಲು ಆಕೆಗೆ ಬದಲಾವಣೆ, ಬದಲಾಗಿಬಿಡುವುದು ಅನಿವಾರ್ಯ. ಬಹುಶಃ ಹೆಣ್ಣು ತನ್ನತನವನ್ನು ಮರೆತು ಉಳಿದವರಿಗಾಗಿ ಬದಲಾಗಿಬಿಡುವ ಕಾರಣಕ್ಕಾಗಿಯೇ ಅದೆಷ್ಟೋ ಕುಟುಂಬಗಳು ಯಾವುದೇ ಸಮಸ್ಯೆಯಿಲ್ಲದೆ ಸುಭದ್ರವಾಗಿ ಉಳಿದುಕೊಳ್ಳುತ್ತವೆ.

ಹೀಗಾಗಿಯೇ ಹೆಣ್ಣಿನ ಪಾಲಿಗೆ ಬದಲಾವಣೆ ಅನ್ನೋದು ಅಗತ್ಯದ ಅನಿವಾರ್ಯತೆ. ಆದರೆ ಆ ಬದಲಾವಣೆಯ ಅನಿವಾರ್ಯತೆ ಗಂಡಸರ ಪಾಲಿಗಿಲ್ಲ, ಹೆಣ್ಣಿನ ಪಾಲಿಗೆ ಪಾತ್ರ ಎನ್ನುವುದು ಬೇಸರದ ವಿಚಾರ. ಮದುವೆಯಾದ ಮೇಲೆ ಗಂಡಸರು ಬದಲಾಗುತ್ತಾರೆ ಅನ್ನೋದು ನಿಜವಾದರೂ, ಸಂಪೂರ್ಣವಾಗಿ ಬದಲಾಗಿಬಿಡುವ ಅನಿವಾರ್ಯತೆ ಅವರಿಗಿಲ್ಲ ಅನ್ನೋದು ಅಷ್ಟೇ ಸತ್ಯ.

ವಿನುತಾ ಪೆರ್ಲ

Advertisement

Udayavani is now on Telegram. Click here to join our channel and stay updated with the latest news.

Next