ದಾವಣಗೆರೆ: ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸುವ ‘ಶಕ್ತಿ’ಯೋಜನೆಯಲ್ಲಿ ಷರತ್ತುಗಳನ್ನು ಹಾಕುತ್ತಿರುವುದು ಯಾವ ಕಾರಣಕ್ಕೆ ತಮಗೆ ಅರ್ಥವಾಗುತ್ತಿಲ್ಲ. ಸರ್ಕಾರದ ಷರತ್ತುಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡುವುದಾಗಿ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಭಾನುವಾರ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿರುವ ತಾತ್ಕಾಲಿಕ ಸಾರಿಗೆ ಬಸ್‌ನಿಲ್ದಾಣದಲ್ಲಿ ನಡೆದ ಶಕ್ತಿ ಯೋಜನೆ… ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಸಾಮಾನ್ಯ, ವೇಗದೂತ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಣಿಸಲು ಅವಕಾಶ ಮಾಡಿಕೊಟ್ಟಿರುವಾಗ ಯಾಕೆ ಇಲ್ಲದ ಕಂಡೀಷನ್ ಹಾಕಲಾಗುತ್ತಿದೆ ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದರು.
ಮಹಿಳೆಯರು ಎಂದರೆ ಮಹಿಳೆಯರೇ. ನೋಡಿದ ತಕ್ಷಣ ಮಹಿಳೆಯರು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಆದರೂ, ಆ ದಾಖಲೆ ತೋರಿಸಬೇಕು. ಈ ದಾಖಲೆ ತೋರಿಸಬೇಕು ಎನ್ನುವ ಕಂಡೀಷನ್ ಏಕೆ ಎಂದು ಪ್ರಶ್ನಿಸಿದರು. ಆಗ ಮಧ್ಯ ಪ್ರವೇಶಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಹೊರ ರಾಜ್ಯದವರಾ ಇಲ್ಲ ನಮ್ಮ ರಾಜ್ಯದವರಾ ಎಂದು ತಿಳಿದುಕೊಳ್ಳಲು ಕಂಡೀಷನ್ ಹಾಕಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಹೊರ ರಾಜ್ಯದವರಿಗೂ ಉಚಿತವಾಗಿ ಬಸ್‌ಗಳಲ್ಲಿ ಸಂಚರಿಸುವ ಅನುಕೂಲ ಮಾಡಿಕೊಡಬೇಕು. ಯಾರೇ ಮಹಿಳೆಯೇ ಆಗಿರಲಿ. ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸರಾಗ ಮತ್ತು ಸುರಕ್ಷಿತವಾಗಿ ಪ್ರಯಾಣಕ್ಕೆ ಸಾರಿಗೆ ಸಂಸ್ಥೆಯವರು ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಸರ್ಕಾರ ಶಿಸ್ತು ಕ್ರಮ ತೆಗೆದು ಕೊಳ್ಳಲಿದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಎಚ್ಚರಿಸಿದರು.
ಕಾಂಗ್ರೆಸ್‌ನವರು ಬಹಳಷ್ಟು ಒಳ್ಳೆಯ ಕೆಲಸಗಳ ಮಾಡಿದ್ದಾರೆ. ಆದರೆ, ಅವೆಲ್ಲವೂ ಬಿಜೆಪಿಯವರ ಸುಳ್ಳುಗಳ ಮಧ್ಯೆ ಮರೆತೇ ಹೋಗಿದೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ಬಹಳ ನಿಸ್ಸೀಮರು. ನಮ್ಮ ಸರ್ಕಾರ ನುಡಿ ದಂತೆ ನಡೆಯುವ ಸರ್ಕಾರ. ಐದು ಗ್ಯಾರಂಟಿಯಲ್ಲಿ ಮೊದಲ ಗ್ಯಾರಂಟಿ ಜಾರಿಗೆ ತರಲಾಗಿದೆ. ಇನ್ನುಳಿದ ಗ್ಯಾರಂಟಿಗಳನ್ನೂ ಆದಷ್ಟು ಬೇಗ ಜಾರಿಗೆ ತರಲಾಗುವುದು ಎಂದು ತಿಳಿಸಿದರು.