Advertisement

ಹೃದಯ ಸಂಬಂಧಿ ಖಾಯಿಲೆಗೂ ಮದ್ದು; ಬಸಳೆ ಎಂಬ ಬೆರಗೂ, ಬೆಡಗೂ

11:38 AM Dec 04, 2020 | Nagendra Trasi |

ಅಡುಗೆ ಮನೆಯಲ್ಲಿ ಬಸಳೆ ಸೊಪ್ಪು ಅಥವಾ ಗೋಳಿ ಸೊಪ್ಪು ಇದೆ ಅಂದರೆ ಅದರ ಗಮ್ಮತ್ತೇ ಬೇರೆ. ಈ ಸೊಪ್ಪು ಬಳಸಿ ಸಾರು, ಗೊಜ್ಜು, ಪಲ್ಯ, ಬಜ್ಜಿ… ಹೀಗೆ ಬಗೆಬಗೆಯ ಆಹಾರ ತಯಾರಿಸಬಹುದು. ದೊಡ್ಡಗೋಳಿ ಸೊಪ್ಪು ಅಥವಾ ಗಿಡಬಸಳೆ ಎಂದು ಕರೆಯುವ ಈ ಹಸಿರು ಸೊಪ್ಪು ಅತ್ಯಧಿಕ ವಿಟಮಿನ್‌ ಗುಣಗಳನ್ನು ಹೊಂದಿದೆ. ಇದನ್ನು ಸೊಪ್ಪು ತರಕಾರಿಯಾಗಿ ಹಲವು ಬಗೆಯ ಅಡುಗೆಗಳಲ್ಲಿ ಬಳಸಬಹುದು. ಇದು ಹೃದಯ ಸಂಬಂಧಿ ಖಾಯಿಲೆಗೂ ಮದ್ದು.

Advertisement

1. ಸೊಪ್ಪಿನ ಗೊಜ್ಜು
ಬೇಕಾಗುವ ಸಾಮಗ್ರಿಗಳು: 
ದೊಡ್ಡ ಗೋಳಿಸೊಪ್ಪು- 1 ಮುಷ್ಟಿ, ಕಡಲೆಬೇಳೆ- 2 ಚಮಚ, ಉದ್ದಿನಬೇಳೆ- 1 ಚಮಚ, ಕೆಂಪು ಮೆಣಸಿನಕಾಯಿ- 5, ಕಾಯಿತುರಿ- 3/4 ಕಪ್‌, ರುಚಿಗೆ ತಕ್ಕಷ್ಟು ಉಪ್ಪು, ಲಿಂಬೆಕಡಿ- 1

ಮಾಡುವ ವಿಧಾನ: 
ಸೊಪ್ಪನ್ನು ಸ್ವತ್ಛಗೊಳಿಸಿ ಕತ್ತರಿಸಿಕೊಂಡು, ಸ್ವಲ್ಪವೇ ನೀರು ಹಾಕಿ ಬೇಯಿಸಿ. ನೀರು ಬಸಿದಿಟ್ಟುಕೊಳ್ಳಿ. ನಂತರ ಬಾಣಲೆಗೆ ಸ್ವಲ್ಪ ಎಣ್ಣೆಬಿಟ್ಟು ಕಡಲೆಬೇಳೆ, ಉದ್ದಿನಬೇಳೆ, ಮೆಣಸಿನಕಾಯಿಯನ್ನು ಹುರಿದುಕೊಂಡು ಅದಕ್ಕೆ ತೆಂಗಿನಕಾಯಿ ಸೇರಿಸಿ ನುಣ್ಣಗೆ ರುಬ್ಬಿ. ನಂತರ ಬೇಯಿಸಿಕೊಂಡ ಸೊಪ್ಪನ್ನು ಕೈಯಲ್ಲಿಯೇ ಚೆನ್ನಾಗಿ ಕಿವುಚಿ. ಇದಕ್ಕೆ ರುಬ್ಬಿದ ಪದಾರ್ಥ ಸೇರಿಸಿ ಉಪ್ಪು- ಹುಳಿ ಬೆರೆಸಿ ಅನ್ನದ ಜೊತೆ ಬಡಿಸಿ.

2. ಸೊಪ್ಪಿನ ಮೊಸರು ಬಜ್ಜಿ
ಬೇಕಾಗುವ ಸಾಮಗ್ರಿಗಳು: 
ಸೊಪ್ಪು -1/2 ಮುಷ್ಟಿ, ಈರುಳ್ಳಿ- 1, ಹಸಿಮೆಣಸಿನಕಾಯಿ- 1, ಗಟ್ಟಿ ಮೊಸರು- 1 ಕಪ್‌, ಒಗ್ಗರಣೆಗೆ ಸ್ವಲ್ಪ ಎಣ್ಣೆ, ಉದ್ದಿನಬೇಳೆ- ಸಾಸಿವೆ ಕಾಳು ತಲಾ 1/2 ಚಮಚ, ರುಚಿಗೆ ಉಪ್ಪು, ಸಕ್ಕರೆ - 1/2 ಚಮಚ.

Advertisement

ಮಾಡುವ ವಿಧಾನ: 
ಸ್ವತ್ಛಗೊಳಿಸಿದ ಸೊಪ್ಪನ್ನು ಕತ್ತರಿಸಿಕೊಂಡು ಬೇಯಿಸಿ, ನೀರು ಬಸಿದಿಟ್ಟುಕೊಳ್ಳಿ. ತಣ್ಣಗಾದ ಮೇಲೆ ಇದಕ್ಕೆ ಈರುಳ್ಳಿ- ಹಸಿಮೆಣಸನ್ನು ಸಣ್ಣದಾಗಿ ಕೊಚ್ಚಿ ಸೇರಿಸಿ, ಉಪ್ಪು- ಸಕ್ಕರೆ- ಮೊಸರನ್ನು ಬೆರೆಸಿರಿ. ನಂತರ ಉದ್ದಿನಬೇಳೆ- ಸಾಸಿವೆಯ ಒಗ್ಗರಣೆ ಕೊಡಿರಿ.

3. ಸೊಪ್ಪಿನ ಕರಕಲಿ
ಬೇಕಾಗುವ ಸಾಮಗ್ರಿಗಳು: 

ಸೊಪ್ಪು ನಾಲ್ಕೈದು ಮುಷ್ಟಿ(ಜಾಸ್ತಿ ಸೊಪ್ಪು ಇರಲಿ). ಸಣ್ಣ ಮೆಣಸು ಅಥವಾ ಹಸಿಮೆಣಸು- ಖಾರಕ್ಕೆ ತಕ್ಕಷ್ಟು, ರುಚಿಗೆ ಉಪ್ಪು, ಲಿಂಬೆಕಡಿ- 1 ಅಥವಾ ಹುಳಿಪುಡಿ- 1 ಚಮಚ, ಬೆಳ್ಳುಳ್ಳಿ ಗಡ್ಡೆ- 1, ಒಗ್ಗರಣೆಗೆ ಎಣ್ಣೆ ಸ್ವಲ್ಪ, ಸಾಸಿವೆ ಕಾಳು- 1/2 ಚಮಚ.

ಮಾಡುವ ವಿಧಾನ: 
ಸೊಪ್ಪನ್ನು ಸ್ವತ್ಛಗೊಳಿಸಿ ಕತ್ತರಿಸಿಕೊಂಡು, ನೀರು ಹಾಕದೆ ಉಪ್ಪು$ಹಾಕಿ ಬೇಯಿಸಿರಿ. ಇದು ಬೇಯುತ್ತಿರುವಾಗಲೇ ಮೆಣಸನ್ನು ಪೇಸ್ಟ್‌ ಮಾಡಿ ಸೇರಿಸಿರಿ. ಚೆನ್ನಾಗಿ ಬೆಂದ ನಂತರ ತಣ್ಣಗಾದ ಮೇಲೆ ಕೈಯಲ್ಲಿಯೇ ಸರಿಯಾಗಿ ಕಿವುಚಿ ಹುಳಿಪುಡಿ ಹಾಕಿರಿ. ನಂತರ ಒಗ್ಗರಣೆಗೆ ಎಣ್ಣೆ ಕಾಯಿಸಿ ಸಾಸಿವೆ ಕಾಳು- ಬೆಳ್ಳುಳ್ಳಿ ಹಾಕಿ, ಬೆಂದ ಮೇಲೆ ಇದಕ್ಕೆ ಸೇರಿಸಿದರೆ ರುಚಿಯಾದ ಕರಕಲಿ ಊಟಕ್ಕೆ ಸಿದ್ಧ.

4. ಸೊಪ್ಪಿನ ಪಲ್ಯ
ಬೇಕಾಗುವ ಸಾಮಗ್ರಿಗಳು:
ಸೊಪ್ಪು- 3 ಮುಷ್ಟಿ, ಈರುಳ್ಳಿ- 2, ಕಾಯಿ- 1/2 ಕಪ್‌, ಹಸಿಮೆಣಸಿನಕಾಯಿ - 3, ರುಚಿಗೆ ಉಪ್ಪು, ಸಕ್ಕರೆ- 1 ಚಮಚ, ಒಗ್ಗರಣೆಗೆ ಎಣ್ಣೆ ಸ್ವಲ್ಪ, ಉದ್ದಿನ ಬೇಳೆ- ಕಡಲೆಬೇಳೆ- ಸಾಸಿವೆಕಾಳು ತಲಾ 1 ಚಮಚ, ಅರಿಶಿನಪುಡಿ- 1/2 ಚಮಚ.

ಮಾಡುವ ವಿಧಾನ: 
ಸೊಪ್ಪನ್ನು ಸ್ವತ್ಛಗೊಳಿಸಿ ಕತ್ತರಿಸಿಕೊಳ್ಳಿ. ಈರುಳ್ಳಿಯನ್ನು ಹೆಚ್ಚಿಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿಕೊಂಡು ಕಡಲೆಬೇಳೆ- ಉದ್ದಿನಬೇಳೆ- ಸಾಸಿವೆಕಾಳು- ಅರಿಶಿನಪುಡಿ ಮತ್ತು ಮೆಣಸಿನಕಾಯಿಯನ್ನು ಕೊಚ್ಚಿಕೊಂಡು ಎಣ್ಣೆಗೆ ಹಾಕಿ ಬೆಂದಮೇಲೆ ಸೊಪ್ಪು ಸೇರಿಸಿ ನೀರು ಹಾಕದೆ ಬೇಯಿಸಿ. ಸ್ವಲ್ಪ ಬೆಂದಮೇಲೆ ಉಪ್ಪು- ಹುಳಿ- ಹೆಚ್ಚಿದ ಈರುಳ್ಳಿ- ಕಾಯಿತುರಿ ಹಾಕಿ ಸರಿಯಾಗಿ ಬೇಯಿಸಿ ಇಳಿಸಿರಿ.

ಚಿತ್ರ-ಬರಹ: ಅರ್ಚನಾ ಬೊಮ್ನಳ್ಳಿ, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next