Advertisement

ಮದುವೆಯಾದ ಮಗ ಬದಲಾಗಿದ್ದೇಕೆ?

10:09 AM Feb 06, 2020 | mahesh |

ವಿವಾಹ ವಾರ್ಷಿಕೋತ್ಸವದ ದಿನ ಹೋಟೆಲ್‌ನ ಊಟಕ್ಕೆ ಅತ್ತೆ-ಮಾವ ಬರುವುದು ಅವಳಿಗೆ ಇಷ್ಟವಿರಲಿಲ್ಲ. ಅಮ್ಮನಿಗೆ ಈ ವಿಚಾರ ತಿಳಿದರೆ, ನೋವಾಗುತ್ತದೆಂದು, ಅಪ್ಪನ ಬಳಿ ಮಗ ತನ್ನ ಸಂದಿಗ್ಧವನ್ನು ತಿಳಿಸಿದ್ದಾನೆ. “ಮನೆ ಕೆಲಸದ ಸಹಾಯಕ್ಕೆ ಬೇಕು, ಸಂಭ್ರಮಕ್ಕೆ ಬೇಡವಾದೆವಾ?’ ಎಂದು, ವಿಶ್ವನವರು ತಮ್ಮ ದೊಡ್ಡ ಮಗನಿಗೆ ಫೋನ್‌ ಮಾಡಿ, ತಕ್ಷಣವೇ ಊರಿಗೆ ವಾಪಸ್ಸು ಹೊರಡಲು ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿಸಿಯೇಬಿಟ್ಟರು.

Advertisement

ಹಿರಿಯರಾದ ರಾಜೇಶ್ವರಿ ಮತ್ತು ವಿಶ್ವ ದಂಪತಿಗೆ ಇಬ್ಬರು ಗಂಡುಮಕ್ಕಳು. ಇಬ್ಬರೂ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಸೊಸೆಯಂದಿರೂ ವಿದ್ಯಾವಂತರು, ಅವರೂ ಒಳ್ಳೆಯ ಕೆಲಸದಲ್ಲಿದ್ದಾರೆ. ಮುದ್ದಿನ ಮೊಮ್ಮಕ್ಕಳಿದ್ದಾರೆ. ಕಳೆದ ವಾರವಷ್ಟೇ ಅವರಿಬ್ಬರು ತಮ್ಮ ಮಕ್ಕಳ ಮನೆಯಿಂದ ಹಿಂತಿರುಗಿದ್ದಾರೆ. ಮಕ್ಕಳ ಮನೆಯ ವಾಸ/ಪ್ರವಾಸ ಅವರಿಗೇಕೋ ಹಿತವೆನಿಸಿಲ್ಲ. ನನ್ನ ಬಳಿ ಬರುತ್ತಲೇ ಕೇಳಿದ ಪ್ರಶ್ನೆ, “ಮದುವೆಯಾದ ಮೇಲೆ ಗಂಡು ಮಕ್ಕಳು ಗುರುತು ಸಿಗದಂತೆ ಬದಲಾಗ್ತಾರಲ್ಲಾ, ಏಕೆ ಮೇಡಂ?’ ಸೊಸೆಯಂದಿರು ತಮ್ಮ ಗಂಡು ಮಕ್ಕಳನ್ನು ಹೈಜಾಕ್‌ ಮಾಡಿಕೊಂಡಿರುವ ಅನುಭವ ಅವರಿಗಾಗಿದೆ. ವಯಸ್ಸಾದ ಮೇಲೆ ಮಕ್ಕಳಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬುದು ಅವರ ಚರ್ಚೆಯ ವಿಷಯ.

ಹಿಂದೆ, ಚಿಕ್ಕ ಸೊಸೆ ಚೊಚ್ಚಲ ಗರ್ಭಿಣಿಯಾದಾಗ, ಮಗ-ಸೊಸೆಯ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಬೇರೆ ಇತ್ತು. ಅವಳಿಗೆ ಆರೈಕೆ ಮಾಡಲು ಮಗನ ಆಹ್ವಾನದ ಮೇರೆಗೆ, ಮಗನ ಮನೆಗೆ ಹೋದಾಗ, ಸೊಸೆ ಚೆನ್ನಾಗಿಯೇ ನಡೆದುಕೊಂಡಿದ್ದಳು. ಆದರೆ, ವಿವಾಹ ವಾರ್ಷಿಕೋತ್ಸವದ ದಿನ ಹೋಟೆಲ್‌ನ ಊಟಕ್ಕೆ ಅತ್ತೆ-ಮಾವ ಬರುವುದು ಅವಳಿಗೆ ಇಷ್ಟವಿರಲಿಲ್ಲ. ಅಮ್ಮನಿಗೆ ಈ ವಿಚಾರ ತಿಳಿದರೆ, ನೋವಾಗುತ್ತದೆಂದು, ಅಪ್ಪನ ಬಳಿ ಮಗ ತನ್ನ ಸಂದಿಗ್ಧವನ್ನು ತಿಳಿಸಿದ್ದಾನೆ. “ಮನೆ ಕೆಲಸದ ಸಹಾಯಕ್ಕೆ ಬೇಕು, ಸಂಭ್ರಮಕ್ಕೆ ಬೇಡವಾದೆವಾ?’ ಎಂದು, ವಿಶ್ವನವರು ತಮ್ಮ ದೊಡª ಮಗನಿಗೆ ಫೋನ್‌ ಮಾಡಿ, ತಕ್ಷಣವೇ ಊರಿಗೆ ವಾಪಸ್ಸು ಹೊರಡಲು ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿಸಿಯೇಬಿಟ್ಟರು. ಇತ್ತ ಕಡೆ, ದೊಡ್ಡ ಸೊಸೆಗೆ ವಿಮಾನದ ಖರ್ಚನ್ನು ತನ್ನ ಗಂಡ ಹೊತ್ತನಲ್ಲಾ ಎಂದು ಬೇಜಾರು. ಅದೇ ವಿಚಾರವಾಗಿ ಮಕ್ಕಳಿಬ್ಬರ ನಡುವೆ ಅಹಿತಕರವಾದ ಮಾತುಕತೆಯಾಗಿದೆ.

ಸ್ವಲ್ಪ ದಿನಗಳ ನಂತರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಾಜೇಶ್ವರಿಯವರು ಬದುಕುಳಿದಿದ್ದೇ ಹೆಚ್ಚು. ಅದು ಅವರಿಗೆ ಸಿಕ್ಕಿದ ಪುನರ್ಜನ್ಮ ಅಂತಲೇ ಹೇಳಬಹುದು. ಆದರೂ, ಮಕ್ಕಳಿಬ್ಬರು ತಾಯಿಯನ್ನು ನೋಡಲು ಬರಲಿಲ್ಲ. ತಾಯಿ ಫೋನು ಮಾಡಿದರೆ, ಉತ್ತರಿಸುತ್ತಲೂ ಇರಲಿಲ್ಲ. ಸೊಸೆಯಂದಿರು ಫೋನ್‌ ತೆಗೆದರೂ ಕ್ಲುಪ್ತವಾದ ಮಾತು. “ತಾಯಿಯಾಗಿ ನಾನು ಎಲ್ಲಿ ಎಡವಿದೆ?’ ಎಂದು ರಾಜೇಶ್ವರಿ ಬಹಳವಾಗಿ ನೊಂದುಕೊಂಡರು. ಮನೋಕ್ಲೇಶೆ ಉಂಟಾಗಿದ್ದೇ ಹೀಗೆ.

ಅರಿತು ನಡೆಯಬೇಕಾದ ಮಕ್ಕಳೇಕೆ ಎಡವುತ್ತಾರೆ? ಸ್ವಾರ್ಥ ಎಂದರೇನು, ತ್ಯಾಗ ಎಂದರೇನು, ಮೋಹ ಎಂಬುದು ಎಷ್ಟಿರಬೇಕು ಎಂಬಿತ್ಯಾದಿ ಜಿಜ್ಞಾಸೆಗಳಿಂದ ಆ ದಂಪತಿಯ ತಲೆಕೆಟ್ಟಿದೆ. ಆರ್ಥಿಕವಾಗಿ ರಾಜೇಶ್ವರಿ-ವಿಶ್ವ ಸಶಕ್ತರು. ಆದರೂ, ಭಾವನಾತ್ಮಕ ಸಂಬಂಧಗಳನ್ನು ಉಳಿಸಿಕೊಳ್ಳಲು ಜೀವನದಲ್ಲಿ ಮತ್ತೆ ಹೊಸ ಪಾಠ ಕಲಿಯಬೇಕು ನೋಡಿ ಎನ್ನುವಾಗ, ಇಬ್ಬರ ಕಣ್ಣಂಚಿನಲ್ಲೂ ನೀರಾಡುತ್ತಿತ್ತು. ಈ ಘಟನೆಯಲ್ಲಿ, ಹೊಂದಿಕೊಳ್ಳಬೇಕಾಗಿರುವುದು ಮಕ್ಕಳು ಎನಿಸಿತು.

Advertisement

ನಾನು, ಮಕ್ಕಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಲು ಅವಕಾಶ ಮತ್ತು ಅನುಮತಿ ಕೋರಿದೆ. ಮಕ್ಕಳು-ಸೊಸೆಯಂದಿರು ತಕ್ಷಣ ಒಪ್ಪಿಕೊಂಡು, ಭಾಗವಹಿಸಿದರು. ಆನಂತರ, ಕೌಟುಂಬಿಕ ವಾತಾವರಣದಲ್ಲಿ ನೈತಿಕ ಹೊಣೆಗಾರಿಕೆಯನ್ನು ನಿಭಾಯಿಸುವುದರಿಂದ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುವುದಿಲ್ಲ ಎಂಬುದು ಮಕ್ಕಳಿಗೆ ಅರಿವಾಯಿತು. ನಡೆದ ಘಟನೆಗಳ ಸರಿ-ತಪ್ಪುಗಳ ವಿಶ್ಲೇಷಣೆಗಿಂತ, ಸಹಾನುಭೂತಿಯಿಂದ ಕೂಡಿದ ಸಂವಹನ ಮುಖ್ಯವೆಂಬುದನ್ನು ಎಲ್ಲರೂ ಮನಗಂಡರು. ಭಾವನಾತ್ಮಕವಾಗಿ ಹಿರಿಯರಿಗೆ ಹೃದಯಪೂರ್ವಕವಾಗಿ ಉತ್ತೇಜನ ನೀಡಿದರೆ, ಜೀವನ ಎಷ್ಟು ಹಗುರ ಎಂದು ಮಕ್ಕಳೆಲ್ಲರೂ ಅರಿತರು.

ಕೊನೆಯ ಮಾತು: ಜನ ಒಳ್ಳೆಯವರೇ ಆದರೂ ಒಂದು ಮಿಳ್ಳೆ ತುಪ್ಪಕ್ಕಾಗಿ ಕುಟುಂಬದಲ್ಲಿ ಅಪಾರ್ಥ ಬೇಡ.

Advertisement

Udayavani is now on Telegram. Click here to join our channel and stay updated with the latest news.

Next