ನವದೆಹಲಿ: ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಕೇಂದ್ರದ ಆಯುಷ್ ಸಚಿವಾಲಯದ ಆದೇಶದಂತೆ ಕಾಲೇಜುಗಳಲ್ಲಿ ಬೃಹತ್ ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸುವಂತೆ ಹೊರಡಿಸಿರುವ ಆದೇಶಕ್ಕೆ ಜಮ್ಮು-ಕಾಶ್ಮೀರದಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಂಕಾದ ಸಿನಿ ಸಂಕ್ರಾಂತಿ: ಮುಹೂರ್ತ, ಸಿನ್ಮಾ ರಿಲೀಸ್ ಮಾಡಲು ಉತ್ಸಾಹವಿಲ್ಲ…
ಜಮ್ಮು-ಕಾಶ್ಮೀರದ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ, ಜನವರಿ 14ರ ಪವಿತ್ರ ಮಕರ ಸಂಕ್ರಾಂತಿಯಂದು ಭಾರತ ಸರ್ಕಾರ ನಿರ್ದೇಶಿಸಿದಂತೆ ಬೃಹತ್ ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೂಚಿಸಿತ್ತು.
ಈ ಕುರಿತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ನ ಮುಖಂಡ ಒಮರ್ ಅಬ್ದುಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದು, ಸೂರ್ಯ ನಮಸ್ಕಾರ, ಯೋಗ ಮಾಡುವಂತೆ ಮುಸ್ಲಿಮ್ ವಿದ್ಯಾರ್ಥಿಗಳನ್ನು ಯಾಕೆ ಬಲವಂತ ಪಡಿಸುತ್ತೀರಿ? ಮಕರ ಸಂಕ್ರಾಂತಿ ಒಂದು ಹಬ್ಬವಾಗಿದೆ, ಇದನ್ನು ಆಚರಿಸುವವರು ಆಚರಿಸಬಹುದು, ಇದೊಂದು ವೈಯಕ್ತಿಕ ಆಯ್ಕೆಯಲ್ಲ. ಒಂದು ವೇಳೆ ಇದನ್ನೇ ಮುಸ್ಲಿಮೇತರ ವಿದ್ಯಾರ್ಥಿಗಳು ಈದ್ ಆಚರಿಸುವಂತೆ ಹೇಳಿದರೆ ಬಿಜೆಪಿ ಒಪ್ಪುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಒಂದು ವೇಳೆ ಮುಸ್ಲಿಂ ಮುಖ್ಯಮಂತ್ರಿ, ರಂಜಾನ್ ವೇಳೆ ಪ್ರತಿಯೊಬ್ಬರು ಉಪವಾಸ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದರೆ, ಆಗ ಇತರ ಸಮುದಾಯದ ವಿದ್ಯಾರ್ಥಿಗಳು ಹೇಗೆ ಪ್ರತಿಕ್ರಿಯಿಸಬಹುದು. ಇಂತಹ ಧಾರ್ಮಿಕ ಸಂಪ್ರದಾಯದ ಆಚರಣೆಯನ್ನು ಹೇರುವುದನ್ನು ನಿಲ್ಲಿಸಿ. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವ ಹಕ್ಕು ನಿಮಗಿಲ್ಲ ಎಂದು ಟ್ವೀಟ್ ನಲ್ಲಿ ಒಮರ್ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರದ ಸೂರ್ಯ ನಮಸ್ಕಾರ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ, ಸಜಾದ್ ಲೋನ್ ಸೇರಿದಂತೆ ಹಲವು ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.