ಉಡುಪಿ: ನಾನು ಯಾವತ್ತೂ ಸಹೋದರ ನರೇಂದ್ರ ಮೋದಿಯನ್ನು ಟೀಕಿಸಿರಲಿಲ್ಲ. ನಾನು ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿದ್ದೆ ಅನ್ನುವುದೂ ಸುಳ್ಳು ಸುದ್ದಿ. ಸಹೋದರ ನರೇಂದ್ರನನ್ನು ಬಿಟ್ಟು ನಾನ್ಯಾಕೆ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಲಿ? ಅವರಲ್ಲಿ ಅಂಥಾದ್ದೇನಿದೆ ಎಂದು ಬೆಂಬಲ ನೀಡಲಿ?
ಇದು ಪ್ರಧಾನ ಮಂತ್ರಿ ಅವರ ಸಹೋದರ ಪ್ರಹ್ಲಾದ್ ಮೋದಿ ಪ್ರಶ್ನೆ.ಬುಧವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಂದರ್ಭ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಇದೇ ಮೊದಲ ಬಾರಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಡುತ್ತಿದ್ದೇನೆ. ಕಳೆದ 5 ವರ್ಷಗಳಿಂದ ಎನ್‌ಡಿಎ ಸರಕಾರ ಉತ್ತಮ ಕೆಲಸ ಮಾಡಿದೆ. ಅವರ ಕಾರ್ಯ ವೈಖರಿ ಬಗ್ಗೆ ಜನರಿಗೆ ಆತ್ಮ ತೃಪ್ತಿಯಿದೆ. ಪ್ರಧಾನಿ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಜನತೆ ಬಯಸುತ್ತಿದ್ದಾರೆ ಎಂದು ಪ್ರಹ್ಲಾದ್ ಮೋದಿ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಆರ್ಥಿಕ ನೀತಿಯನ್ನು ಜನ ಖುಷಿಯಿಂದ ಸ್ವೀಕರಿಸುತ್ತಿದ್ದಾರೆ. ಎನ್‌ಡಿಎ ಸರಕಾರದ ಸಾಧನೆಯನ್ನು ಇಡೀ ವಿಶ್ವವೇ ಗರುತಿಸುವಂತೆ ಆಗಿದೆ. ಇದು ಸ್ವಾತಂತ್ರಾéನಂತರದ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಸಾಧ್ಯವಾಗಿರಲಿಲ್ಲ ಎಂದರು.
ಬಹಳಷ್ಟು ಪ್ರಿಯಾಂಕಾಗಳಿದ್ದಾರೆ ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದಿಂದ ಏನೂ ಬದಲಾವಣೆ ಸಾಧ್ಯವಿಲ್ಲ. ದೇಶದಲ್ಲಿ ಬಹಳಷ್ಟು ಪ್ರಿಯಾಂಕಾಗಳಿದ್ದಾರೆ. ಒಬ್ಬ ಪ್ರಿಯಾಂಕಾ ಬಂದರೆ ಏನಾಗುತ್ತೆ ಎಂದರು.
ರೈತರಿಗೆ ಕೇಂದ್ರ ಸರಕಾರ ಬಜೆಟ್‌ನಲ್ಲಿ ಅನೇಕ ಕೊಡುಗೆಗಳನ್ನು ನೀಡಿದೆ. ವಿಪಕ್ಷಗಳು ದಿನಕ್ಕೆ 17 ರೂ. ನೀಡಿದೆ ಅಂತಾರೆ. ಅಷ್ಟಾದರೂ ಈ ಕೇಂದ್ರ ಸರಕಾರ ನೀಡಿದೆ. ಈ ಹಿಂದೆ ದಶಕಗಳ ಕಾಲ ಅಧಿಕಾರ ನಡೆಸುವಾಗ ಕಾಂಗ್ರೆಸಿಗರಿಗೆ ರೈತರ ನೆನಪಾಗಿಲ್ಲ. ಕೃಷ್ಣನಿಗೆ ಸುಧಾಮ ಅವಲಕ್ಕಿ ಕೊಟ್ಟಂತೆ ರೈತರಿಗೆ ಕೇಂದ್ರ ಸರಕಾರ ಅಲ್ಪವಾದರೂ ಕೊಟ್ಟಿತಲ್ಲ, ಅದೇ ಖುಷಿ ಎಂದು ತಿಳಿಸಿದರು.