ಬೆಂಗಳೂರು: “ನಾನ್ಯಾಕೆ ವರುಣಾಕ್ಕೆ ಹೋಗಲಿ. ಚಾಮರಾಜನಗರ ಜಿಲ್ಲೆಯಲ್ಲಿ ಕೆಲಸ ಮಾಡುವಂತೆ ಅಮಿತ್ ಶಾ ಸೂಚನೆ ನೀಡಿದ್ದು ಅದರಂತೆ ಕಾರ್ಯನಿರ್ವಹಿಸುತ್ತಿರುವೆ’ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಗೋವಿಂದರಾಜನಗರದಲ್ಲಿ ಮಂಗಳವಾರ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದ ದೊಡ್ಡ ಲೀಡರ್, ಅವರು ಎಲ್ಲಿ ನಿಲ್ಲಬೇಕು ಎಂಬುದು ಅವರ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನನ್ನ ಬಗ್ಗೆ ನೀವು ಯಾಕೆ ಮಲತಾಯಿ ಧೋರಣೆ ತಾಳುತ್ತೀರಿ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಪ ಚುನಾವಣೆಗೆ ನಿಂತಾಗ ನಾನು ಕೆಲಸ ಮಾಡಿದ್ದೆ. 42 ಬೂತ್ ಜವಾಬ್ದಾರಿ ತೆಗೆದುಕೊಂಡಿದ್ದೆ. ಶಕ್ತಿಗಿಂತ ಅದೃಷ್ಟ ಮುಖ್ಯ, ಅದಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ರಾಜ್ಯದಲ್ಲಿ ಸರ್ವೋಚ್ಚ ನಾಯಕರು ಎಂದು ತಿಳಿಸಿದರು.
ನಾನು ಬೇರೆಯವರ ರೀತಿ ಏನೇನೋ ಮಾತನಾಡಲ್ಲ, ಈಗಾಗಲೇ ನನಗೆ ನನ್ನ ಕ್ಷೇತ್ರ ಇದೆ. ಚಾಮರಾಜನಗರಕ್ಕೆ ಹೋಗಿ ಕೆಲಸ ಮಾಡುವಂತೆ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ಹೀಗಿರುವಾಗ ನನ್ನನ್ನು ಯಾಕೆ ವರುಣಾಗೆ ತಂದು ಹಾಕ್ತೀರಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ನಮ್ಮ ಪಕ್ಷದಲ್ಲಿ ಸೂಕ್ತ ಅಭ್ಯರ್ಥಿಗಳು ಇದ್ದು, ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದರು. ಅಮಿತ್ ಶಾ ಅವರು ಕೆಲವು ಜವಾಬ್ದಾರಿ ನೀಡಿದ್ದಾರೆ. ನಾನು ಹನೂರು ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದರೆ ಯಾರೂ ಬೇಡ ಎನ್ನಲ್ಲ. ನನಗೆ ಗೋವಿಂದರಾಜ ನಗರ ಕ್ಷೇತ್ರವಿದೆ ಎಂದರು.