ಹೊಸದಿಲ್ಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಅವರು ಸ್ಪರ್ಧಾ ಕಣಕ್ಕೆ ಇಳಿದಿಲ್ಲ. ಇದೀಗ ಪ್ರಿಯಾಂಕಾ ಗಾಂಧಿ ಅವರು ಯಾಕೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎನ್ನುವುದಕ್ಕೆ ಉತ್ತರ ನೀಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ದೇಶದಾದ್ಯಂತ ಪಕ್ಷದ ಪ್ರಚಾರ ನಡೆಸುವ ಸಲುವಾಗಿ ಸ್ಪರ್ಧೆ ನಡೆಸುತ್ತಿಲ್ಲ ಎಂದಿದ್ದಾರೆ. ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿದ ಅವರು, ಒಂದು ವೇಳೆ ರಾಹುಲ್ ಗಾಂಧಿ ಮತ್ತು ತಾನು ಇಬ್ಬರೂ ಚುನಾವಣೆಯಲ್ಲಿ ಸ್ಪರ್ಧಸಿದರೆ ಅದು ಬಿಜೆಪಿಗೆ ಅನುಕೂಲವಾಗುತ್ತದೆ ಎಂದರು.
“ನಾನು ಕಳೆದ 15 ದಿನಗಳಿಂದ ರಾಯಬರೇಲಿಯಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಗಾಂಧಿ ಕುಟುಂಬಕ್ಕೂ ರಾಯಬರೇಲಿಗೂ ಹಳೆಯ ಸಂಬಂಧವಿದೆ. ಹಾಗಾಗಿ, ನಾವು ಇಲ್ಲಿಗೆ ಬಂದು ಅವರನ್ನು ಭೇಟಿ ಮಾಡಿ ಅವರೊಂದಿಗೆ ಸಂವಹನ ನಡೆಸುತ್ತೇವೆ ಎಂದು ಜನರು ನಿರೀಕ್ಷಿಸುತ್ತಾರೆ. ನಾವು ರಿಮೋಟ್ ಕಂಟ್ರೋಲ್ ಮೂಲಕ ಇಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
“ಒಂದು ವೇಳೆ ನಾನು ಮತ್ತು ರಾಹುಲ್ ಇಬ್ಬರೂ ಸ್ಪರ್ಧಿಸಿದ್ದರೆ 15 ದಿನಗಳ ಕಾಲ ಅವರವರ ಸ್ವಂತ ಕ್ಷೇತ್ರದಲ್ಲಿಯೇ ಇರಬೇಕಿತ್ತು. ಹಾಗಾಗಿ ಇಡೀ ದೇಶದಾದ್ಯಂತ ಪ್ರಚಾರ ನಡೆಸುವುದು ಸೂಕ್ತ ಎಂದು ಭಾವಿಸಿದ್ದೇವೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚಿಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ, “ನಾನು ಸಂಸತ್ ಪ್ರವೇಶಿಸುವ ಬಗ್ಗೆ ಅಥವಾ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಎಂದೂ ಯೋಚನೆ ಮಾಡಿಲ್ಲ. ನನಗೆ ಪಕ್ಷಕ್ಕೆ ಕೆಲಸ ಮಾಡಬೇಕು, ಪಕ್ಷ ನೀಡಿದ ಜವಾಬ್ದಾರಿ ನಿಭಾಯಿಸ ಬಯಸುತ್ತೇನೆ. ಒಂದು ವೇಳೆ ನಾನು ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಜನರು ಬಯಸಿದರೆ ನಾನು ಸ್ಪರ್ಧೆ ಮಾಡುತ್ತೇನೆ” ಎಂದು ಹೇಳಿದರು.