Advertisement
ಅದೇಕೆ ಒಂದೇ ವಯಸ್ಸಿನ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಆರೋಗ್ಯವಂತರಾಗಿ ತಾರುಣ್ಯದ ಕಳೆಯಿಂದ ಮಿನುಗುತ್ತಿದ್ದರೆ, ಇನ್ನೊಬ್ಬರು ತಮ್ಮ ವಯಸ್ಸಿಗೂ ಮೀರಿದವರಂತೆ ಕಾಣಿಸುತ್ತಾರೆ? ಬಹುಬೇಗ ಆರೋಗ್ಯ ಸಮಸ್ಯೆಗಳು ಅವರನ್ನು ಮುತ್ತಿಕೊಳ್ಳುತ್ತವೆ? ಶತಶತಮಾನಗಳಿಂದಲೂ ಈ ಪ್ರಶ್ನೆಗೆ ನಾವು ಉತ್ತರಕಂಡುಕೊಳ್ಳಲು ಪ್ರಯತ್ನಿಸುತ್ತಲೇ ಇದ್ದೇವೆ. ಆದರೆ ಈಗ ವಿಜ್ಞಾನಿಗಳಿಗೆ, ‘ವ್ಯಕ್ತಿಯೊಬ್ಬನ ವಯಸ್ಸಿನ (ಜೈವಿಕ) ಏರಿಳಿತಗಳಲ್ಲಿ ಆತನಲ್ಲಿನ ವಂಶವಾಹಿಗಳ ನಡುವಿನ ಸಂಕೀರ್ಣ ಕ್ರಿಯೆಗಳು, ಆತನ ಸಾಮಾಜಿಕ ಸಂಬಂಧಗಳು, ಸುತ್ತಲಿನ ಪರಿಸರ ಮತ್ತು ಜೀವನಶೈಲಿ ಪರಿಣಾಮ ಬೀರುತ್ತದೆ’ ಎನ್ನುವುದು ಸ್ಪಷ್ಟವಾಗುತ್ತಾ ಸಾಗಿದೆ.
Related Articles
ವಿಪರೀತ ಸಿಟ್ಟುಮಾಡಿಕೊಳ್ಳುವುದು ಮತ್ತು ಇತರರ ಮೇಲೆ ಅಪನಂಬಿಕೆ ಬೆಳೆಸಿಕೊಳ್ಳುವುದನ್ನು ಸಿನಿಕ ವೈಷಮ್ಯ ಎನ್ನಬಹುದು. ಅಂಗಡಿಯೊಂದಕ್ಕೆ ಹೋದಾಗ ನಿಮ್ಮ ಮುಂದೆ ದೊಡ್ಡ ಕ್ಯೂ ಇರುತ್ತದೆ ಎಂದುಕೊಳ್ಳಿ. ಸಾಮಾನ್ಯ ವ್ಯಕ್ತಿಯಾದರೆ ‘ಯಪ್ಪಾ ನನಗೆ ಇಷ್ಟುದ್ದ ಕ್ಯೂನಲ್ಲಿ ನಿಲ್ಲೋದಕ್ಕೆ ಸಿಟ್ಟುಬರುತ್ತೆ’ ಎಂದು ಯೋಚಿಸಬಹುದು. ಆದರೆ ಸಿನಿಕ ವೈಷಮ್ಯದ ವ್ಯಕ್ತಿ ಮಾತ್ರ ಕ್ಯೂನಲ್ಲಿ ತನ್ನ ಮುಂದಿರುವವರ ಮೇಲೆ ಅನಗತ್ಯವಾಗಿ ಕೋಪಮಾಡಿಕೊಳ್ಳುತ್ತಾನೆ! ಈ ರೀತಿಯ ಗುಣವಿರುವವರು ಹೃದಯ ಸಂಬಂಧಿ ಕಾಯಿಲೆಗಳು, ಜೀರ್ಣಾಂಗದ ತೊಂದರೆಗಳಿಗೆ ಈಡಾಗುವ ಸಾಧ್ಯತೆ ಹೆಚ್ಚು. ಅಕಾಲಿಕ ಮರಣದ ಪ್ರಮಾಣವೂ ಈ ವರ್ಗದವರಲ್ಲಿ ಅಧಿಕ. ಅಷ್ಟೇ ಅಲ್ಲದೇ ಅವರಲ್ಲಿ ಟೆಲೋಮಿಯರ್ಸ್‌ಗಳ ಗಾತ್ರವೂ ಚಿಕ್ಕದಿರುತ್ತದೆ!
Advertisement
ಒತ್ತಡ ಎದುರಾದಾಗ ಈ ರೀತಿಯ ವ್ಯಕ್ತಿಗಳಲ್ಲಿನ ಜೈವಿಕ ಪ್ರತಿಕ್ರಿಯೆಗಳೂ ಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಮಾನಸಿಕ ಒತ್ತಡ ಎದುರಾದಾಕ್ಷಣ ದೇಹದಲ್ಲಿ ಕಾರ್ಟಿಸಾಲ್ ಎನ್ನುವ ಹಾರ್ಮೋನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ ಹಾಗೂ ರಕ್ತದೊತ್ತಡ ಹೆಚ್ಚಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ. ಆದರೆ ವಿನಾಕಾರಣ ವಿಪರೀತ ಸಿಟ್ಟುಮಾಡಿಕೊಳ್ಳುವ ಜನರು ಒತ್ತಡಕೊಳಗಾದಾಗ ಅವರಲ್ಲಿ ಕಾರ್ಟಿಸಾಲ್ ಅಗತ್ಯ ಪ್ರಮಾಣದಲ್ಲಿ ಬಿಡುಗಡೆಯಾಗುವುದೇ ಇಲ್ಲ. ಸಿಟ್ಟು ಕಡಿಮೆಯಾದರೂ ಇವರಲ್ಲಿ ರಕ್ತದೊತ್ತಡ ಹೆಚ್ಚು ಹೊತ್ತು ಅಧಿಕವಾಗಿಯೇ ಇರುತ್ತದೆ. ಈ ರೀತಿಯ ವರ್ತನೆಯಿರುವವರ ಕೋಶಗಳ ವಯಸ್ಸು ಬೇಗನೇ ಹೆಚ್ಚಾಗುತ್ತದೆ. ಅವರಲ್ಲಿ ಬಹುಬೇಗ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಹೃದಯ ಸಂಬಂಧಿ ರೋಗಗಳು, ಸಂಧಿವಾತ ಸೇರಿದಂತೆ ಅನೇಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಮಹಿಳೆಯರಲ್ಲಿ ಸಿಟ್ಟು ಅಥವಾ ವೈಷಮ್ಯ ಕಡಿಮೆಯಿರುವುದರಿಂದ ಹೃದಯ ತೊಂದರೆಗಳೂ ಅವರಿಗೆ ಕಡಿಮೆಯೇ. ಆದರೆ ಖನ್ನತೆಯಂಥ ಮಾನಸಿಕ ಸಮಸ್ಯೆಗಳು ಅವರ ಆರೋಗ್ಯವನ್ನು ಹಾಳುಮಾಡುತ್ತವೆ.
ನಿರಾಶಾವಾದಟೆಲೋಮಿಯರ್ಸ್ಗಳ ಮೇಲೆ ಋಣಾತ್ಮಕ ಪರಿಣಾಮ ಬೀರುವ ಎರಡನೆಯ ಶಕ್ತಿಯೆಂದರೆ ನಿರಾಶಾವಾದ! ಟೆಲೋ ಮಿಯರ್‌ಗಳ ಗಾತ್ರ ಮತ್ತು ನಿರಾಶಾವಾದಕ್ಕೂ ಇರುವ ಸಂಬಂಧದ ಬಗ್ಗೆ ನಮ್ಮ ತಂಡ ಸಂಶೋಧನೆ ನಡೆಸಿದಾಗ, ನಿರಾಶಾವಾದಿಗಳಲ್ಲಿನ ಟೆಲೋಮಿಯರ್ಸ್‌ಗಳ ಗಾತ್ರ ಕಿರಿದಾಗಿರುತ್ತದೆ ಎನ್ನುವುದು ಸಾಬೀತಾಯಿತು. ನಾವು ಸಂಶೋಧನೆ ನಡೆಸಿದ್ದು ಕೇವಲ 35 ಮಹಿಳೆಯರ ಮೇಲಷ್ಟೆ. ಆದರೂ ನಮ್ಮಂಥದ್ದೇ ಅಧ್ಯಯನಗಳು ಹಲವಾರು ಪ್ರಕಟಗೊಂಡಿವೆ. ಸಾವಿರ ‘ನಿರಾಶಾವಾದಿ’ ಪುರುಷರ ಮೇಲೆ ನಡೆದ ಅಧ್ಯಯನವೊಂದೂ ಇದನ್ನೇ ಸಾಬೀತುಮಾಡಿದೆ. ನಿರಾಶಾವಾದ ಹೆಚ್ಚಿದ್ದಷ್ಟೂ ದೈಹಿಕ ಆರೋಗ್ಯ ಹದಗೆಡುವ ವೇಗ ವೃದ್ಧಿಯಾಗುತ್ತದೆ. ನಿರಾಶಾವಾದಿಗಳಿಗೆ ಕ್ಯಾನ್ಸರ್ ಅಥವಾ ಹೃದಯ ತೊಂದರೆಗಳು ಎದುರಾದವೆಂದರೆ ರೋಗ ಬಹುಬೇಗ ಉಲ್ಬಣಗೊಳ್ಳುತ್ತದೆ. ಸಮಸ್ಯೆಗಳ ಮೆಲುಕು
ಸಮಸ್ಯೆಗಳನ್ನು ಪದೇ ಪದೆ ಮೆಲುಕು ಹಾಕುವು ಗುಣವಿದು. ಈ ಗುಣವುಳ್ಳವರಲ್ಲಿ ಟೆಲೋಮಿಯರ್‌ಗಳ ಗಾತ್ರ ಚಿಕ್ಕದಾಗಿರುತ್ತದೆ ಎನ್ನುತ್ತಿವೆ ಅಧ್ಯಯನಗಳು. ಸಮಸ್ಯೆಗಳ ಮೂಲವೆಲ್ಲಿದೆ, ಅದಕ್ಕೆ ಪರಿಹಾರವೇನು ಎಂದು ಯೋಚಿಸುವುದು ಬೇರೆ. ಆದರೆ ಸಮಸ್ಯೆಯ ಬಗ್ಗೆ ಚಿಂತೆ ಮಾಡುವುದು ಬೇರೆ. ಆತ್ಮ ವಿಮರ್ಶೆಮಾಡಿಕೊಂಡಾಗ ಅಸೌಖ್ಯ ಉಂಟಾಗುತ್ತದಾದರೂ ನಂತರವೆಲ್ಲವೂ ಸೌಖ್ಯವೇ. ಆದರೆ ಸಮಸ್ಯೆಗಳ ಬಗ್ಗೆ ಪುನಃ ಪುನಃ ಚಿಂತೆ ಮಾಡಿದಾಗ ಸಮಸ್ಯೆಗಳಿಗೆ ಪರಿಹಾರವಂತೂ ಸಿಗುವುದಿಲ್ಲ. ಚಿಂತೆ ಹೆಚ್ಚುತ್ತಾ ಹೋಗುತ್ತದಷ್ಟೆ. ನೀವು ಸಮಸ್ಯೆಗಳನ್ನು ಮೆಲುಕು ಹಾಕುತ್ತಾ ಹೋದಾಗ ತಲೆಯಿಂದ ಯೋಚನೆ ದೂರವಾದರೂ ದೇಹದಲ್ಲಿ ಬಹಳ ಸಮಯದವರೆಗೆ ರಕ್ತದೊತ್ತಡ ಅಧಿಕವಿರುತ್ತದೆ, ಹೃದಯದ ಬಡಿತ ಏರುಗತಿಯಲ್ಲಿರುತ್ತದೆ, ನಿಮ್ಮ ಜೀರ್ಣ ವ್ಯವಸ್ಥೆ ಮತ್ತು ಹೃದಯವನ್ನು ಸಮಸ್ಥಿತಿಯಲ್ಲಿಡುವ, ನಿಮ್ಮನ್ನು ಸಮಾಧಾನ ಚಿತ್ತದಲ್ಲಿರುವಂತೆ ಮಾಡುವ ವೇಗಸ್ ನರವೂ ತನ್ನ ಚಟುವಟಿಕೆಯನ್ನು ತಗ್ಗಿಸಿಬಿಡುತ್ತದೆ. ನೀವು ಚಿಂತೆ ಮಾಡುವುದನ್ನು ನಿಲ್ಲಿಸಿ ಎಷ್ಟೋ ಹೊತ್ತಾದರೂ ಈ ನರ ನಿಷ್ಕ್ರಿಯವಾಗಿಯೇ ಇರುತ್ತದೆ. ಟೆಲೋಮಿಯರ್‌ಗಳ ಗಾತ್ರವನ್ನು ಹಿಗ್ಗಿಸುವ ‘ಟೆಲೋ ಮರೇಸ್’ ಎನ್ನುವ ಎಂಜೈಮಿನ ಪ್ರಮಾಣವೂ ಚಿಂತೆ ಮಾಡುವವರಲ್ಲಿ ಕಡಿಮೆಯಿರುತ್ತದೆ! ಸಮಸ್ಯೆಗಳ ಬಗ್ಗೆ ಮತ್ತೆ ಮತ್ತೆ ಯೋಚಿಸುವವರಲ್ಲಿ ಖನ್ನತೆ ಮತ್ತು ದುಗುಡ ಹೆಚ್ಚಾಗುವುದರಿಂದ ಅವರ ಜೀವಕೋಶಗಳಿಗೆ ಬಹಳ ಬೇಗ ಮುಪ್ಪು ಬರುತ್ತದೆ. ತತ್ಪರಿಣಾಮವಾಗಿ ಅವರಿಗೂ ವಯಸ್ಸಿಗೆ ಮೀರಿದ ಆರೋಗ್ಯ ಸಮಸ್ಯೆಗಳ ಕಾಣಿಸಿಕೊಳ್ಳತೊಡಗುತ್ತವೆ. ಚಂಚಲ ಮನಸ್ಸು
ನಮ್ಮ ಯೋಚನೆಗಳು ಒಂದು ಜಾಗದಲ್ಲಿ ನಿಲ್ಲದೇ ಅತ್ತಿತ್ತ ಹರಿದಾಡುವುದನ್ನು ಚಂಚಲ ಮನಸ್ಸು ಎನ್ನುತ್ತೇವೆ. ಹಾರ್ವರ್ಡ್ ಮನಶಾಸ್ತ್ರಜ್ಞರಾದ ಮ್ಯಾಥಿವ್ ಕಿಲ್ಲಿಂಗ್ಸ್‌ವರ್ತ್ ಮತ್ತು ಡೇನಿಯಲ್ ಗಿಲ್‌ಬರ್ಟ್ ಸಾವಿರಾರು ಜನರನ್ನು ಮಾತನಾಡಿಸಿ ಈಗಿನ ತಲೆಮಾರಿನ ಚಿತ್ತ ಎಷ್ಟು ಚಂಚಲವಾಗಿರುತ್ತದೆ ಎನ್ನುವುದನ್ನು ಅಧ್ಯಯನ ಮಾಡಿದ್ದಾರೆ. ನಾವಿಂದು ಹೆಚ್ಚಾಗಿ, ಒಂದು ಕೆಲಸ ಮಾಡುವಾಗ ಇನ್ಯಾವುದೋ ವಿಚಾರದ ಬಗ್ಗೆ ಯೋಚಿಸುತ್ತಿರುತ್ತೇವೆ. ಜನರು ತಾವು ಮಾಡುತ್ತಿರುವ ಕೆಲಸದಲ್ಲಿ ಮಗ್ನರಾಗದಿದ್ದಾಗ (ನಾನು ಬೇರೆ ಜಾಗದಲ್ಲಿ ಇರಬೇಕಿತ್ತು ಎಂದು ಯೋಚಿಸುವಾಗ) ಅವರಲ್ಲಿ ಖನ್ನತೆ ಮತ್ತು ಅಸಂತೋಷ ಹೆಚ್ಚಾಗುತ್ತದೆ ಎನ್ನುತ್ತದೆ ಅವರ ಅಧ್ಯಯನ. ನಮ್ಮ ತಂಡ, ಈ ನಿಟ್ಟಿನಲ್ಲಿ 250 ಮಹಿಳೆಯರ ಮೇಲೆ ಅಧ್ಯಯನ ಕೈಗೊಂಡಿತು. ತಮ್ಮ ಚಿತ್ತ ಎತ್ತೆತ್ತಲೋ ಹರಿದಾಡುತ್ತಿರುತ್ತದೆ ಎಂದು ಹೇಳಿದ ಮಹಿಳೆಯರಲ್ಲಿನ ಟೆಲೋಮಿಯರ್‌ಗಳು 200 ಬೇಸ್‌ಪೇರ್‌ಗಳಷ್ಟು ಕಡಿತಗೊಂಡಿದ್ದವು (35 ವರ್ಷದ ಮಹಿಳೆಯೊಬ್ಬಳಲ್ಲಿ 7,500 ಬೇಸ್‌ಪೇರ್‌ಗಳ ಟೆಲೋ ಮೇರ್‌ಗಳಿರುತ್ತವೆ, 65 ವರ್ಷದ ಮಹಿಳೆಯಲ್ಲಿ ಈ ಸಂಖ್ಯೆ ಅಜಮಾಸು 4,800 ಇರುತ್ತದೆ). ಸಿಟ್ಟು, ಚಂಚಲ ಮನಸ್ಸು, ನಿರಾಶಾವಾದ ಮತ್ತು ಚಿಂತೆ ಅಚಾನಕ್ಕಾಗಿ ಎದುರಾಗುವಂಥವು ಎನ್ನುವುದು ನಮಗೆ ತಿಳಿದಿದೆ. ಇವೆಲ್ಲ ಸೇರಿ ನಮ್ಮ ಕಣ್ಣಿಗೆ (ಮಿದುಳಿಗೆ) ಕಪ್ಪು ಬಟ್ಟೆ ಸುತ್ತಿಬಿಟ್ಟಿರುತ್ತವೆ. ಹೀಗಾಗಿ ನಿಜಕ್ಕೂ ಏನಾಗುತ್ತಿದೆ ಎನ್ನುವುದು ಅರ್ಥವಾಗುವುದಿಲ್ಲ. ಆದರೆ ಅವನ್ನು ನಿಯಂತ್ರಿಸಲೂ ಸಾಧ್ಯವಿದೆಯಲ್ಲ? ಯಾವಾಗ ನೀವು ನಿಮ್ಮ ಯೋಚನೆಗಳ ಬಗ್ಗೆ ಹೆಚ್ಚು ಅರಿವು ಬೆಳೆಸಿಕೊಳ್ಳಲಾರಂಭಿಸುತ್ತೀರೋ ಆಗ ಈ ಕಪ್ಪುಬಟ್ಟೆಯನ್ನು ಕಿತ್ತೆಸೆಯುತ್ತೀರಿ. ಮೆಡಿಟೇಷನ್, ವ್ಯಾಯಾಮ, ಜಾಗಿಂಗ್‌ನಂಥ ಚಟುವಟಿಕೆಗಳ ಮೂಲಕ ಉತ್ತಮ ಯೋಚನಾ ಲಹರಿಯನ್ನು ರೂಢಿಸಿಕೊಳ್ಳಲು ಸಾಧ್ಯವಿದೆ. ಒಂದೇ ವಯೋಮಾನದ ಇಬ್ಬರಲ್ಲಿ ಒಬ್ಬರು ಯುವಕರಂತೆ, ಇನ್ನೊಬ್ಬರು ಮುದುಕರಂತೆ (ಅನಾರೋಗ್ಯದಿಂದ) ಇರಲು ಕಾರಣವೇನೆಂದು ತಿಳಿಯಿತಲ್ಲವೇ? – ಎಲಿಜಬೆತ್ ಬ್ಲ್ಯಾಕ್‌ಬರ್ನ್ ; ಎಲಿಸ್ಸಾ ಎಪೆಲ್
(ಎಲಿಜಬೆತ್ ಬ್ಲ್ಯಾಕ್‌ಬರ್ನ್ ನೊಬೆಲ್ ಪುರಸ್ಕೃತ ವಿಜ್ಞಾನಿ. ಡಾ. ಎಲಿಸ್ಸಾ ಎಪೆಲ್ ಅಮೆರಿಕದ ಮುಂಚೂಣಿ ಮನಶಾಸ್ತ್ರಜ್ಞರು)