Advertisement
ಸರಕಾರ ಯಾವುದೇ ಬರಲಿ ಅದು ನಾಡು-ನುಡಿ ನೆಲ-ಜಲದ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಬೇಕು. ಆದರೆ ಈಗಿನ ಸರಕಾರ ಕನ್ನಡ ಭಾಷೆಗೆ ಮಾರಕವಾಗುವಂತಹ ನಡೆಯನ್ನು ಅನುಸರಿಸುತ್ತಿರುವುದು ವ್ಯಕ್ತವಾಗುತ್ತಿದೆ. ಶಾಲೆಗಳ ವಿಲೀನ, ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವುದು, ಸಾಕಷ್ಟು ಪ್ರಮಾಣದ ವಿದ್ಯಾರ್ಥಿಗಳಿಲ್ಲದ ಶಾಲೆಯನ್ನು ಮುಚ್ಚುವುದು ಮುಂತಾದ ಪ್ರಕ್ರಿಯೆಗಳಿಗೆ ಚಾಲನೆ ನೀಡುವ ಚಿಂತನೆಯಲ್ಲಿದೆ. ಇವುಗಳು ಕನ್ನಡ ಭಾಷಾ ಬೆಳವಣಿಗೆಗೆ ಮಾರಕವಾಗಬಹುದಾದಂತಹ ಹೆಜ್ಜೆಗಳು. ಇದನ್ನು ಹಿರಿಯ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ತೀರ್ವವಾಗಿ ವಿರೋಧಿಸಿದ್ದಾರೆ. ಸರಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದರೆ ಗೋಕಾಕ ಚಳವಳಿ ಮಾದರಿಯಲ್ಲಿ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆಂಬ ಎಚ್ಚರಿಕೆ ಯನ್ನು ಈಗಾಗಲೇ ಸರಕಾರಕ್ಕೆ ಮುಟ್ಟಿಸಿದ್ದಾರೆ.
Related Articles
Advertisement
ಸರಕಾರ ಇದನ್ನು ಮಾಡದೇ ಕನ್ನಡ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಆರಂಭಿಸಲು ಮುಂದಾಗಿದೆ. ಆಂಗ್ಲ ಭಾಷೆ ಅಂತಾ ರಾಷ್ಟ್ರೀಯವಾಗಿ ಮನ್ನಣೆ ಪಡೆದ ಭಾಷೆ ಆಗಿರುವುದರಿಂದ ಅದನ್ನು ಎಲ್ಲರೂ ಕಲಿಯಬೇಕು ಎಂಬ ವಿಚಾರದಲ್ಲಿ ಅಭ್ಯಂತರವಿಲ್ಲ. ಇಂಗ್ಲೀಷನ್ನು ಬೇಕಾದರೆ ಒಂದನೇ ತರಗತಿಯಿಂದಲೇ ಒಂದು ಭಾಷೆಯಾಗಿ ಸರಕಾರಿ ಶಾಲೆಗಳಲ್ಲೂ ಕಲಿಸಲಿಕ್ಕೆ ಯಾವುದೇ ತಕರಾರು ಕೂಡಾ ಇಲ್ಲ. ಆದರೆ ಇಂಗ್ಲೀಷ್ ಮಾಧ್ಯಮವನ್ನು ಸರಕಾರಿ ಶಾಲೆಯಲ್ಲಿ ಆರಂಭಿಸಲು ವಿರೋಧವಿದೆ. ಕೊನೆಯ ಪಕ್ಷ ಪ್ರಾಥಮಿಕ ಶಿಕ್ಷಣವಾದರೂ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಮಾಡಿದರೆ ಮಾತ್ರ ಕನ್ನಡ ಭಾಷೆಯನ್ನು ಅಭಿವೃದ್ಧಿಗೊಳಿಸಬಹುದು ಎಂಬ ವಾದ ಕನ್ನಡಿಗರದು. ಕರ್ನಾಟಕದಲ್ಲಿದ್ದು ಕನ್ನಡ ಕಲಿಯದಿದ್ದರೆ ಉಳಿದ ರಾಜ್ಯದಲ್ಲಿಂದು ಕನ್ನಡವನ್ನು ಕಲಿತಾರೆ? ಕರ್ನಾಟಕದಲ್ಲೇ ಕನ್ನಡವನ್ನು ಬಲಪಡಿಸುವ ಕೆಲಸವಾಗಬೇಕಾಗಿದೆ.
ಇನ್ನು ಶಾಲೆಗಳನ್ನು ವಿಲೀನ ಮಾಡಿದರೆ ಆ ಪ್ರದೇಶದಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಯುವ ಕನ್ನಡದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅವರು ಹತ್ತಿರದ ಶಾಲೆ ಬಿಟ್ಟು ದೂರದ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ತಲೆದೋ ರುತ್ತದೆ. ಹೆಚ್ಚಾಗಿ ಸರಕಾರಿ ಶಾಲೆಯಲ್ಲಿ ಕಲಿಯುವವರು ಆರ್ಥಿಕ ವಾಗಿ ಹಿಂದುಳಿದವರೇ ಆಗಿರುತ್ತಾರೆ. ಹಿಂದುಳಿದವರಿಗೆ ಪೂರಕವಾಗಿರಬೇಕಾದ ಸರಕಾರಿ ಶಾಲೆಗಳು ಮಾರಕವಾಗಿ ಪರಿಣಮಿಸಿದಂತಾಗುತ್ತದೆ. ಖಾಸಗಿ ಶಾಲೆಗಳಲ್ಲಿರುವ ಎಲ್ಲಾ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣವನ್ನು ಸರಕಾರಿ ಶಾಲೆಗಳಲ್ಲೂ ನೀಡಿ, ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲು ನಮ್ಮ ಸರಕಾರ ಮುಂದಾಗಬೇಕು. ಆಗ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಸಾರ್ವಜನಿಕರು ಪೂರಕವಾಗಿ ಸ್ಪಂದಿಸಿದರೆ ಮಾತ್ರ ನಮ್ಮ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬಹುದು.
ಕನ್ನಡ ಭಾಷಾಭಿವೃದ್ಧಿಗಾಗಿ ನಮ್ಮ ಸರಕಾರ ಇಚ್ಛಾಶಕ್ತಿಯನ್ನು ತಾಳಬೇಕಾದ ಅವಶ್ಯಕತೆ ಇದೆ. ಕನ್ನಡ ಭಾಷೆಯನ್ನು ಕನ್ನಡಿಗರು ಹಾಗೂ ನಮ್ಮ ಸರಕಾರ ಸೇರಿಕೊಂಡು ಬೆಳೆಸಬೇಕಾಗಿದೆ. ಸರಕಾರ ಈ ಬಗ್ಗೆ ಚಿಂತನೆ ಮಾಡಬೇಕೇ ವಿನಹ ಸರಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗುವ ಕ್ರಮ ಸಮಂಜಸವಾ ದುದಲ್ಲ. ನಮ್ಮ ನಾಡು-ನುಡಿ ನೆಲ-ಜಲದ ಉಳಿವಿನ ಪ್ರಶ್ನೆ ಬಂದಾಗಲೆಲ್ಲ ಕನ್ನಡಿಗರು ಒಗ್ಗಟ್ಟಾಗಿದ್ದಾರೆ. ಆದರೆ ಕನ್ನಡಿಗರ ಕೂಗು ಸರಕಾರಕ್ಕೆ ಕೇಳಿಸುತ್ತಿಲ್ಲ ಅಥವಾ ಕೇಳಿಸಿದರೂ ಜಾಣ ಕಿವುಡುತನ ಪ್ರದರ್ಶಿಸುತ್ತಿದೆ. ಸರಕಾರದ ಈ ಧೋರಣೆ ಸರಿಯಾದುದಲ್ಲ ನಮ್ಮ ಸರಕಾರ ಕರ್ನಾಟಕದ ಸಮಸ್ಯೆಗಳಿಗೆಲ್ಲ ಪೂರಕವಾಗಿ ಸ್ಪಂದಿಸಬೇಕು.
ನಾಡು-ನುಡಿ ನೆಲ-ಜಲದ ಸಮಸ್ಯೆಗಳು ಯಾವ, ಜಾತಿ, ಧರ್ಮ, ಮತ ಪಕ್ಷಕ್ಕೆ ಸೀಮಿತವಾದುದಲ್ಲ. ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಈ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸ ಬೇಕಾದ ಅಗತ್ಯ ಇರುತ್ತದೆ. ಆದರೆ ಆಡಳಿತಕ್ಕೆ ಬಂದ ಸರಕಾರಗಳು ಹೇಳುವುದು ಒಂದು, ಮಾಡುವುದು ಇನ್ನೊಂದು ಆಗಬಾರದು. ಸರಕಾರಕ್ಕೆ ನಮ್ಮ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಇಚ್ಛಾಶಕ್ತಿ ಇರಬೇಕಾಗುತ್ತದೆ, ಮಾತೃ ಭಾಷೆಯ ಬಗ್ಗೆ ಕಾಳಜಿ ಇರಬೇಕಾಗುತ್ತದೆ. ಕನ್ನಡ ಶಾಲೆಗಳನ್ನು ಮುಚ್ಚುವುದು ಕನ್ನಡಕ್ಕೆ ಕೊಟ್ಟ ದೊಡ್ಡ ಕೊಡಲಿ ಏಟು ಎಂದು ಪರಿಗಣಿಸಬೇಕಾಗುತ್ತದೆ. ಮುಖ್ಯಮಂತ್ರಿಯವರು ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗದೆ, ಅದನ್ನು ಸಬಲೀಕರಣ ಮಾಡಲು ಮುಂದಾಗಲಿ. ಇನ್ನಾದರೂ ಕನ್ನಡಿಗರ ಕೂಗಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿ.
ಜಿ. ಕೇಶವ ಪೈ