ಬೆಂಗಳೂರು: “ಶಿಕ್ಷಣ ಹಕ್ಕು ಕಾಯ್ದೆ’ಗೆ ಅನುಗುಣವಾಗಿ ಶಾಲೆ ಬಿಟ್ಟ ಮತ್ತು ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ವೈಜ್ಞಾನಿಕ ವಿಧಾನ ಅನುಸರಿಸಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಹೈಕೋರ್ಟ್, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಅನುಸರಿಸಬೇಕಾದ ಕ್ರಮಗಳ ಕುರಿತು ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರ ಸಮಿತಿ ರೂಪಿಸಿರುವ ಕರಡು ನೀತಿಯನ್ನು ಹಾಜರು ಪಡಿಸುವಂತೆ ಸರ್ಕಾರಕ್ಕೆ ಸೋಮವಾರ ನಿರ್ದೇಶನ ನೀಡಿದೆ.
ಶಾಲೆಯಿಂದ ಹೊರಗುಳಿದ ಮಕ್ಕಳ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಅರ್ಜಿ ವಿಚಾರಣೆ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಸಿ. ಜಾಫರ್ ಅವರು ಸಲ್ಲಿಸಿರುವ ಪ್ರಮಾಣಪತ್ರವನ್ನು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಹಾಜರುಪಡಿಸಿ, ರಾಜ್ಯದಲ್ಲಿ ಒಟ್ಟು 70 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಇವರನ್ನು ಗುರುತಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಪ್ರಮಾಣಪತ್ರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಸರ್ಕಾರದ ಮಾಹಿತಿ ಗಮನಿಸಿದರೆ ಯಾವುದೇ ಸ್ಪಷ್ಟತೆ ಕಾಣುತ್ತಿಲ್ಲ. ಅಷ್ಟಕ್ಕೂ ಯಾವ ವಿಧಾನ ಅನುಸರಿಸಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲಾಗಿದೆ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು. ಆಗ ಈ ಕುರಿತು ಸಮಗ್ರವಾಗಿ ಪರಿಶೀಲಿಸಿ ಮಾಹಿತಿ ಒದಗಿಸಲಾಗುವುದು. ಇದಕ್ಕಾಗಿ 10 ದಿನ ಕಾಲಾವಕಾಶ ಬೇಕೆಂದು ಸರ್ಕಾರದ ಪರ ವಕೀಲರು ಕೋರಿದರು.