Advertisement

ಯಾಕೆ ಶಿವಪೂಜೆಗೆ ಅವಕಾಶ ನೀಡಿಲ್ತ…

04:56 PM Dec 10, 2018 | |

ತುಮಕೂರು: ತಮಿಳುನಾಡಿನ ಚೆನ್ನೈನಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಡಾ.ಶಿವಕುಮಾರ ಸ್ವಾಮೀಜಿ ಶನಿವಾರ ಮಧ್ಯಾಹ್ನದಿಂದ ಶಿವಪೂಜೆ ಮಾಡಿಲ್ಲ. ಶನಿವಾರ ಬೆಳಗ್ಗೆ ಶಿವಪೂಜೆ ಆದನಂತರ ಶಸ್ತ್ರಚಿಕಿತ್ಸೆ ಆದಹಿನ್ನೆಲೆಯಲ್ಲಿ ಶ್ರೀಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಅವರಿಗೆ ವಿಶ್ರಾಂತಿ ನೀಡಲಾಗಿದೆ.

Advertisement

ಆದರೆ, ತಮ್ಮ ಆರೋಗ್ಯದ ಬಗ್ಗೆ ಯಾವುದೇ ಗಮನ ನೀಡದ ಶ್ರೀಗಳು, ಯಾಕೆ ನನಗೆ ಶಿವಪೂಜೆಗೆ ಅವಕಾಶ ನೀಡುತ್ತಿಲ್ಲ. ನನಗೆ ಶಿವಪೂಜೆ ಮಾಡಲು ಅವಕಾಶ ನೀಡಿ ಎಂದು ರೇಲಾ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಮಹಮ್ಮದ್‌ ರೇಲಾ ಅವರನ್ನೇ ಕೇಳಿದ್ದಾರೆ. 

ವಿಶ್ರಾಂತಿ ಪಡೆಯಬೇಕು: ಚೆನ್ನೈನ ರೇಲಾ ಇನ್ಸ್‌ ಟಿಟ್ಯೂಟ್‌ ಆಫ್ ಮೆಡಿಕಲ್‌ ಸೆಂಟರ್‌ ಆಸ್ಪತ್ರೆಯಲ್ಲಿ ಶನಿವಾರ ಶಸ್ತ್ರಚಿಕಿತ್ಸೆಯ ನಂತರ ಭಾನುವಾರ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಸ್ವಾಮೀಜಿಯವರ ಆರೊಗ್ಯ ವಿಚಾರಿಸಲು ಹೋದ ತಜ್ಞ ವೈದ್ಯ ಡಾ.ಮಹಮ್ಮದ್‌ ರೇಲಾ ಅವರನ್ನು ನನಗೆ ಶಿವಪೂಜೆ ಮಾಡಲು ಅವಕಾಶ ನೀಡಿ ಎಂದು ಕೇಳಿದ್ದಾರೆ. ಅದಕ್ಕೆ ವೈದ್ಯರು ತಾವು ವಿಶ್ರಾಂತಿ ಪಡೆಯ ಬೇಕು. ತಮ್ಮ ಆರೋಗ್ಯದಲ್ಲಿ ಗುಣಮುಖ ಆದಮೇಲೆ ನಾವು ತಮಗೆ ಶಿವಪೂಜೆ ಮಾಡಲು ಅನುವು ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ಆದರೂ 111ನೇ ಈ ವಯಸ್ಸಿನಲ್ಲಿ ಲವಲವಿಕೆಯಿಂದ ಇರುವುದು ನೋಡಿ ಶ್ರೀಗಳ ಮಾತುಗಳನ್ನು ಕೇಳಿದ ಡಾ.ರೇಲಾ ಅವರೇ ನಿಬ್ಬೆರಗಾಗಿ ಅವರ ಶ್ರೀಗಳ ಪಾದಮುಟ್ಟಿ ನಮಸ್ಕರಿಸಿ ಇದೊಂದು ಅಪರೂಪದ ಸಂದರ್ಭ ಎಂದಿದ್ದಾರೆ. 

ಶಿವಪೂಜೆ ಮಾಡಬೇಕು: ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಿರುವುದರಿಂದ ಅವರು ಕುಳಿತು ಶಿವಪೂಜೆ ಮಾಡುವಂತ್ತಿಲ್ಲ. ಈಗ ವಿಶ್ರಾಂತಿ ಮಾತ್ರ ಪಡೆಯಬೇಕು. ಅದಕ್ಕಾಗಿಯೇ ಐಸಿಯುಗೆ ಯಾರನ್ನೂ ಬಿಡುತ್ತಿಲ್ಲ. ಆದರೆ, ನಿಗಾಘಟದ ಒಳಗೆ ಯಾರೇ ಗೊತ್ತಿರುವವರು ಹೋದರೆ ಶ್ರೀಗಳು ನನ್ನನ್ನು ಎಬ್ಬಿಸಿರಿ ನಾನು ಶಿವಪೂಜೆ ಮಾಡಬೇಕು ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

Advertisement

ಚೆನ್ನೈನಲ್ಲಿ ಭಕ್ತರು: ಶ್ರೀಗಳಿಗೆ ತಮಿಳುನಾಡಿನ ಚೆನ್ನೈ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಳನ್ನು ನೋಡಲು ತುಮಕೂರಿನಿಂದ ಹಲವು ಭಕ್ತರು ವಾಹನಗಳಲ್ಲಿ ತೆರಳಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಶ್ರೀಗಳನ್ನು ನೋಡಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಭಕ್ತರು ಮಾತ್ರ ತಮಿಳುನಾಡಿಗೆ ತೆರಳುತ್ತಿದ್ದಾರೆ.

ಶನಿವಾರ ರಾತ್ರಿ ಡಿಕೆಶಿ ಭೇಟಿ: ಶನಿವಾರ ರಾತ್ರಿ ಸಚಿವ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಶ್ರೀಗಳು ಅವರನ್ನೂ ನನಗೆ ಶಿವಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.

ಸಿದ್ಧಗಂಗಾ ಮಠದ ಹಿರಿಯ ಶ್ರೀಗಳು ಶಸ್ತ್ರಚಿಕಿತ್ಸೆಯ ನಂತರವೂ ಲವಲವಿಕೆಯಾಗಿದ್ದಾರೆ. ಶ್ರೀಗಳು ಐಸಿಯುನಲ್ಲಿ ಚಿಕಿತ್ಸೆ ಪಡೆ‌ಯುತ್ತಿರುವಾಗಲೂ ನಾನು ಸ್ನಾನ ಮಾಡಬೇಕು. ಭಸ್ಮ ಧರಿಸಬೇಕು. ಪೂಜೆ ಮಾಡಬೇಕು ಎನ್ನುತ್ತಿದ್ದಾರೆ. ಜೊತೆಗೆ ಮಠದ ಮಕ್ಕಳ ಬಗ್ಗೆ ಕೇಳುತ್ತಾರೆ.
ಆದರೂ ನಾವು ಶ್ರೀಗಳಿಗೆ ಮನವರಿಕೆ ಮಾಡಿದ್ದೇವೆ. ಶ್ರೀಗಳು ಆರೋಗ್ಯವಾಗಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಶ್ರೀಘ್ರ ಮಠಕ್ಕೆ ಬಂದು ಎಲ್ಲರಿಗೂ ಶ್ರೀಗಳು ದರ್ಶನ ನೀಡುತ್ತಾರೆ.
 ಸಿದ್ಧಲಿಂಗಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷ 

ಡಾ.ರೇಲಾ ಪುಸ್ತಕ ಬರೆಯುವ ಇಂಗಿತ
ಶಿವಕುಮಾರ ಸ್ವಾಮೀಜಿಯವರಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಶ್ರೀಗಳು ಶಸ್ತ್ರ ಚಿಕಿತ್ಸೆಯ ನಂತರವೂ ಲವಲವಿಕೆಯಾಗಿರುವುದು ನೋಡಿದ ಡಾ.ಮಹಮ್ಮದ್‌ ರೇಲಾ, ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ಆದ ಅನುಭವ ಕುರಿತು ಒಂದು ಪುಸ್ತಕ ಬರೆಯಬೇಕು ಎಂದು ತಮ್ಮ ಆಪ್ತರ
ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ವಾರ್ಡ್‌ಗೆ
ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀಗಳನ್ನು ಐಸಿಯುನಿಂದ ವಾರ್ಡ್‌ಗೆ ವರ್ಗಾಯಿಸಬಹುದು ಎಂದು ತಿಳಿದು ಬಂದಿದೆ. ಆ ನಂತರ ಮತ್ತೆ ಶ್ರೀಗಳ ಆರೋಗ್ಯ ಪರಿಶೀಲಿಸಿ ಅವರಿಗೆ ಶಿವಪೂಜೆ ಮಾಡಲು ಅನುವು ಮಾಡುವ ಸಾಧ್ಯತೆ ಇದೆ. 

 ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next