Advertisement

ಘಟಬಂಧನ್‌ಗೆ ನಿತೀಶ್‌ ಗುಡ್‌ಬೈ ಏಕೆ?

06:15 AM Jul 31, 2017 | Team Udayavani |

ರಾಜಕೀಯದಲ್ಲಿ ಅನುಭವವೇ ಇಲ್ಲದ ಯುವಕನಂತೆ ಕಂಡರೂ, ತೇಜಸ್ವಿ ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಸೂಕ್ಷ್ಮವನ್ನು ಅರಿತಿದ್ದ ನಿತೀಶ್‌ಕುಮಾರ್‌, 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರ ಬಿಟ್ಟು, ರಾಷ್ಟ್ರ ರಾಜಕಾರಣಕ್ಕೆ ಹೋಗುವ ಒಂದು ದಾರಿಯನ್ನು ಮುಂದಿರಿಸಿಕೊಂಡಿದ್ದರು. ಆದರೆ ಯಾವಾಗ 2019ರಲ್ಲಿ ಚುನಾವಣೆ ಗೆಲ್ಲುವುದು ಸುಲಭವಲ್ಲ, ಹಾಗೆಯೇ, ಕಾಂಗ್ರೆಸ್‌ನ ರಾಹುಲ್‌ ಆಧರಿತ ತಂತ್ರಗಳೂ ತಮ್ಮನ್ನು ದೆಹಲಿ ಗದ್ದುಗೆಗೆ ಕೊಂಡೊಯ್ಯಲು ಬಿಡುವುದಿಲ್ಲ ಎಂಬುದನ್ನು ಅರಿತರೋ, ಚಾಣಾಕ್ಷ ಹೆಜ್ಜೆೆಯಿಟ್ಟರು.

Advertisement

ಎಲ್ಲ ಅಂದುಕೊಂಡಂತೆಯೇ ಆಗಿದ್ದರೆ 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್‌ಕುಮಾರ್‌ ಅವರು ಪ್ರತಿಪಕ್ಷಗಳ ಕಡೆಯಿಂದ ಪ್ರಧಾನಿ ಅಭ್ಯರ್ಥಿಯಾಗಬೇಕಿತ್ತು. ಆದರೆ, ಸದ್ಯದ ಮಟ್ಟಿಗೆ ಈ ಅವಕಾಶ ನಿತೀಶ್‌ ಅವರ ಕೈಯಿಂದ ತಪ್ಪಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್‌ ಒಳಗೊಂಡ ಮಹಾಘಟಬಂಧನ್‌ ತೊರೆದಿರುವ ನಿತೀಶ್‌ಕುಮಾರ್‌ ಅವರು, ಮತ್ತೆ ಎನ್‌ಡಿಎ ತೆಕ್ಕೆಗೆ ಸೇರಿದ್ದಾರೆ. ಅದರಲ್ಲೂ, 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಸ್ಪರ್ಧಿ ಎಂದರೆ ನಿತೀಶ್‌ಕುಮಾರ್‌ ಅವರೊಬ್ಬರೇ ಎಂಬ ಮಾತುಗಳ ನಡುವೆಯೇ ಪ್ರತಿಪಕ್ಷಗಳ ಗುಂಪಿನಿಂದ ನಿತೀಶ್‌ ಹೊರಬಿದ್ದಿದ್ದಾರೆ.

ಕಾಂಗ್ರೆಸ್‌ ಮುಕ್ತ ಭಾರತದ ಕನಸು ಕಾಣುತ್ತಿದ್ದ ಬಿಜೆಪಿ, ಈ ನಿಟ್ಟಿನಲ್ಲಿ ಸ್ವಲ್ಪ ಯಶ ಕಂಡಿದೆ ಎಂದರೆ ತಪ್ಪಾಗಲಾರದು. 1991ರ ಅಂಕಿಅಂಶಗಳನ್ನೇ ಮುಂದಿಟ್ಟುಕೊಂಡರೆ ಇಡೀ ಭಾರತದಲ್ಲಿ ನಮಗೆ ನಾಲ್ಕು ಬಿಜೆಪಿ ಆಡಳಿತದ ರಾಜ್ಯಗಳು ಕಾಣಿಸುತ್ತವೆ. ಆಗ ಕಾಂಗ್ರೆಸ್‌ 12 ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿರುತ್ತದೆ. ಅದೇ 1995ಕ್ಕೆ ಬಂದರೆ ಬಿಜೆಪಿ ಇನ್ನೊ ಒಂದು ರಾಜ್ಯ ಕಳೆದುಕೊಂಡು ಮೂರಕ್ಕೆ ಬಂದಿರುತ್ತದೆ. 2000ನೇ ಇಸವಿಯಲ್ಲಿ ಐದು, 2005ರಲ್ಲಿ ಆರು, 2014ರಲ್ಲಿ 11, 2016ರಲ್ಲಿ 13, 2017ರಲ್ಲಿ 17 ರಾಜ್ಯಗಳಲ್ಲಿ ಬಿಜೆಪಿ ಅಥವಾ ಬಿಜೆಪಿ ಮೈತ್ರಿಕೂಟ ಆಳ್ವಿಕೆಯಲ್ಲಿದೆ. ಅಂದರೆ ಹೆಚ್ಚುಕಡಿಮೆ ಅರ್ಧಕ್ಕಿಂತ ಹೆಚ್ಚು ರಾಜ್ಯಗಳು ಹಾಗೂ ದೊಡ್ಡ ರಾಜ್ಯಗಳು ಎಂದೆನಿಸಿಕೊಂಡಲ್ಲೆಲ್ಲಾ ಬಿಜೆಪಿ ಮೈತ್ರಿಕೂಟೇ ಆಳ್ವಿಕೆ ನಡೆಸುತ್ತಿದೆ. ವಿಚಿತ್ರವೆಂದರೆ 1991ರಲ್ಲಿ 12 ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿದ್ದ ಕಾಂಗ್ರೆಸ್‌ ಈಗ ಆರು ರಾಜ್ಯಗಳಿಗೆ ಕುಸಿದಿದೆ. ಅದರಲ್ಲಿ ಕರ್ನಾಟಕ ಮತ್ತು ಪಂಜಾಬ್‌ ಮಾತ್ರ ದೊಡ್ಡ ರಾಜ್ಯಗಳು.

ಒಂದು ಅರ್ಥದಲ್ಲಿ ಕಾಂಗ್ರೆಸ್‌ ಅನ್ನು ಮಣಿಸುತ್ತಾ ಸಾಗಿರುವ ಬಿಜೆಪಿ, ಕೆಲವು ರಾಜ್ಯಗಳಲ್ಲಿ ಬಲಾಡ್ಯವೆಂದೆನಿಸಿಕೊಂಡಿರುವ ಪ್ರಾದೇಶಿಕ ಪಕ್ಷಗಳ ಮೇಲೂ ಕಣ್ಣಿಟ್ಟಿದೆ. ಸದ್ಯ ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಗಟ್ಟಿ ಆಡಳಿತವಿದೆ. ಇಲ್ಲಿಗೂ ಪ್ರವೇಶಿಸಬೇಕು ಎಂಬುದು ಬಿಜೆಪಿ ಕನಸು. ಹೀಗಾಗಿಯೇ ಪ್ರತಿಪಕ್ಷಗಳ ಮುಕ್ತ ಭಾರತದತ್ತ ಹೆಜ್ಜೆ ಇಟ್ಟಿದ್ದು, ಇದನ್ನು ಸಾಕಾರ ಮಾಡಿಕೊಳ್ಳುವತ್ತಲೂ ಮುನ್ನಡಿ ಇಟ್ಟಿದೆ. 

ವಿಷಯವೆಂದರೆ, ಈಗಾಗಲೇ ತಮಿಳುನಾಡು ರಾಜಕೀಯದಲ್ಲಿ ಪ್ರಭಾವ ಬೀರಿರುವ ಬಿಜೆಪಿ, ದೆಹಲಿಯ ಮೇಲೂ ತನ್ನ ಗಮನ ಹರಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲು, ಪಕ್ಷದೊಳಗಿನ ಆಂತರಿಕ ಭಿನ್ನತೆಯಿಂದಾಗಿ ಕುಗ್ಗಿರುವ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಈಗಾಗಲೇ ರಾಜಕೀಯ ತಂತ್ರಗಳ ಬಳಕೆ ಮಾಡಲು ಶುರು ಮಾಡಿದೆ.

Advertisement

ಈ ಮೇಲಿನದ್ದೆಲ್ಲಾ ಬಿಹಾರದ ಹೊರತಾದ ರಾಜಕೀಯ. ಆದರೆ ಬಿಹಾರ ರಾಜಕೀಯದಲ್ಲಿನ ಕ್ಷಿಪ್ರಕ್ರಾಂತಿ ಕೂಡ, ಬಿಜೆಪಿಯ ಪ್ರತಿಪಕ್ಷ ಮುಕ್ತ ಭಾರತದ ಕಡೆಗಿನ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇಡೀ ಭಾರತದ ಮಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಪ್ರತಿಯಾಗಿ ನಿಲ್ಲುವಂಥ‌ ನಾಯಕರಿದ್ದರೆ ಅದು ನಿತೀಶ್‌ಕುಮಾರ್‌ ಮಾತ್ರ. 

ಮೋದಿಯಂತೆಯೇ ಅಭಿವೃದ್ಧಿ ಪ್ರಧಾನ ಆಡಳಿತವೇ ತಮ್ಮ ಗುರಿ ಎಂದು ಹೇಳಿಕೊಂಡೇ ಅಧಿಕಾರಕ್ಕೆ ಬಂದವರು. ಅಭಿವೃದ್ಧಿ ಸಾಧಿಸಿಕೊಳ್ಳುವುದರ ಜತೆಗೆ, ಯಾವುದೇ ಕಾರಣಕ್ಕೂ ಭ್ರಷ್ಟಾಚಾರದೊಂದಿಗೆ ರಾಜಿಯಾಗಬಾರದು, ಜಾತ್ಯತೀತ ತತ್ವಗಳನ್ನು ಬಲಿಕೊಡಬಾರದು ಎಂಬ ನಿಟ್ಟಿನಲ್ಲಿ ಪ್ಯಾನ್‌ ಇಂಡಿಯಾದಲ್ಲಿ ವರ್ಚಸ್ಸು ಬೆಳೆಸಿಕೊಂಡಿದ್ದರು. 
ಅಲ್ಲದೆ ರಾಷ್ಟ್ರಪತಿ ಚುನಾವಣೆಗೂ ಮೂರು ತಿಂಗಳು ಮುಂಚೆಯೇ ಪ್ರಕ್ರಿಯೆಗೆ ಚಾಲನೆ ನೀಡಿದ್ದವರೂ ನಿತೀಶ್‌ಕುಮಾರ್‌ ಅವರೇ. ಪ್ರತಿಪಕ್ಷಗಳೆಲ್ಲಾ ಒಂದುಗೂಡಿ ರಾಷ್ಟ್ರಪತಿ ಅಭ್ಯರ್ಥಿಯನ್ನು ನಿಲ್ಲಿಸಬೇಕು. ಬಿಹಾರದಲ್ಲಿನ ಮಹಾಘಟಬಂಧನ್‌ ಮಾದರಿಯಲ್ಲೇ 2019ರ ಲೋಕಸಭೆ ಚುನಾವಣೆಗೆ ಎಲ್ಲ ಪ್ರತಿಪಕ್ಷಗಳು ಒಗ್ಗೂಡಬೇಕು ಎಂಬ ಆಶಯಕ್ಕೆ ಈ ಚುನಾವಣೆ ಅಡಿಪಾಯವಾಗಬೇಕು ಎಂಬ ಒತ್ತಾಸೆಯೊಂದಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಇದಷ್ಟೇ ಅಲ್ಲ, ಸ್ವತಃ ನಿತೀಶ್‌ಕುಮಾರ್‌ ಅವರೇ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರಲ್ಲದೇ, ಇತರೆ ನಾಯಕರು ಲಗುಬಗೆಯ ಚಟುವಟಿಕೆಗೂ ಕಾರಣರಾಗಿದ್ದರು.

ಈ ಆಯ್ಕೆ ಪ್ರಕ್ರಿಯೆ ವೇಳೆಯಲ್ಲೇ ನಿತೀಶ್‌ಕುಮಾರ್‌ ಅವರ ಕಡೆಯಿಂದಲೇ ಒಂದು ಟ್ವಿಸ್ಟ್‌ ಕೂಡ ಸಿಕ್ಕಿತ್ತು. ವಿಶೇಷವೆಂದರೆ ಈ ಟ್ವಿಸ್ಟ್‌ನಲ್ಲೇ ನಿತೀಶ್‌ ಪ್ರತಿಪಕ್ಷಗಳ ಸಂಗ ಬಿಡುವ ಮುನ್ಸೂಚ ನೆಯೂ ಸಿಕ್ಕಿತ್ತು. ಇತ್ತ ದೆಹಲಿಯಲ್ಲಿ ಅಭ್ಯರ್ಥಿ ಆಯ್ಕೆ ಮಾಡಿ, ಇನ್ನೇನು ಘೋಷಿಸಬೇಕು ಎಂಬ ಹೊತ್ತಲ್ಲೇ, ಪಾಟ್ನಾದಲ್ಲಿ ಮಾತನಾಡಿದ್ದ ನಿತೀಶ್‌ಕುಮಾರ್‌, ಸರ್ಕಾರಕ್ಕಿಲ್ಲದ ಅವಸರ ಪ್ರತಿಪಕ್ಷಗಳಿಗೇಕೆ ಎಂದು ಹೇಳಿ, ಅಭ್ಯರ್ಥಿಯ ಘೋಷಣೆಯನ್ನೇ ತಡೆದುಬಿಟ್ಟರು. ಮೊದಲು ಕೇಂದ್ರ ಸರ್ಕಾರವೇ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಘೋಷಿಸಲಿ. ಅವರು ನಮಗೆ ಇಷ್ಟವಾಗದೇ ಹೋದರೆ, ಬೇರೆ ಅಭ್ಯರ್ಥಿ ಆಯ್ಕೆ ಮಾಡಬಹುದು ಎಂಬುದು ನಿತೀಶ್‌ ಅವರ ಮಾತಿನ ತಿರುಳಾಗಿತ್ತು. ಅಲ್ಲದೆ ಪ್ರತಿಪಕ್ಷಗಳ ಒಗ್ಗೂಡಿಕೆಗೆ ಸಾಂಕೇತಿಕವೆಂಬಂತಿದ್ದ ಸೋನಿಯಾ ಗಾಂಧಿ ಅವರು ಕರೆದಿದ್ದ ಭೋಜನಕೂಟಕ್ಕೂ ಗೈರಾದ ನಿತೀಶ್‌, ಮಾರನೇ ದಿನವೇ ಮೋದಿ ಕರೆದಿದ್ದ ಔತಣಕೂಟಕ್ಕೆ ಹೋಗಿ ಎಲ್ಲರ ಹುಬ್ಬೇರಿಸಿದ್ದರು. ಜತೆಗೆ ಎನ್‌ಡಿಎ ಅಭ್ಯರ್ಥಿ ರಾಮನಾಥ್‌ ಕೋವಿಂದ್‌ ಅವರ ಬೆಂಬಲಕ್ಕೆ ನಿಂತು ಪ್ರತಿಪಕ್ಷ ವಲಯವನ್ನೇ ದಂಗುಬಡಿಸಿದ್ದರು. ಇದಕ್ಕೂ ಹಿಂದೆ ನೋಟು ಅಮಾನ್ಯದ ವೇಳೆಯೂ ಮೋದಿ ನಿರ್ಧಾರ ಶ್ಲಾ ಸಿ ಅಚ್ಚರಿಗೆ ಕಾರಣವಾಗಿದ್ದರು. ವಿಶೇಷವೆಂದರೆ, ಇವೆಲ್ಲವೂ ನಿತೀಶ್‌ ಮತ್ತು ಮೋದಿ ಒಂದಾಗುವ ದಿನಗಳಿಗೆ ಹತ್ತಿರವಾಗುವ ಸನ್ನಿವೇಶಗಳಂತೆ ಭಾಸವಾಗುತ್ತಿದ್ದವು. 

ಆದರೆ, ಪ್ರತಿಪಕ್ಷಗಳ ವಲಯದಿಂದಲೇ ಮೊದಲಿಗೆ ಅಭ್ಯರ್ಥಿ ಇಳಿಸುವ ಬಗ್ಗೆ ಮಾತನಾಡಿ, ನಂತರ ಅವರೇ ಹಿಂದೆ ಸರಿದು ಕೊಂಡರೇಕೆ ಎಂಬುದು ಇನ್ನೂ ಕುತೂಹಲಕ್ಕೆ ಕಾರಣವಾದ ವಿಷಯವಾಗಿದೆ. ಒಂದು ವಿಶ್ಲೇಷಣೆಯ ಪ್ರಕಾರ, ನಿತೀಶ್‌ ಅವರ ನಿರ್ಧಾರಕ್ಕೆ ಕಾಂಗ್ರೆಸ್‌ ಪರೋಕ್ಷ ಕಾರಣ. ರಾಷ್ಟ್ರಪತಿ ಚುನಾವಣೆ, 2019ರ ಲೋಕಸಭೆ ಚುನಾವಣೆಗೆ ವೇದಿಕೆ ಎಂದು ಖಚಿತವಾಗುತ್ತಿದ್ದಂತೆ, ಆಗ ತಮ್ಮ ಸ್ಥಾನವೇನು ಎಂಬುದನ್ನು ಖಚಿತ ಮಾಡಿಕೊಳ್ಳುವ ನಿಟ್ಟಿನಲ್ಲೂ ನಿತೀಶ್‌ ಗಮನಹರಿಸಿದ್ದರು. ಯಾವಾಗ 2019ಕ್ಕೆ ತಮ್ಮನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಕಾಂಗ್ರೆಸ್‌ ಹಿಂದೇಟು ಹಾಕಬಹುದು ಎಂಬುದು ಅರಿವಾಯಿತೋ ಆಗ, ನಿತೀಶ್‌ ಒಮ್ಮೆಗೆ ಹಿಂದೆ ಸರಿದು 2019ರ ಬಗ್ಗೆ ಈಗೇಕೆ ಮಾತು? ಪ್ರಧಾನಿ ಮೋದಿ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರಲ್ಲ, ತಮಗೆ ಪ್ರಧಾನಿಯಾಗುವ ಕನಸಿಲ್ಲ ಎಂದುಬಿಟ್ಟರು. 

ಈ ಬಗ್ಗೆ ಆಂಗ್ಲ ಪತ್ರಿಕೆ ಹಫಿಂಗ್ಟನ್‌ ಪೋಸ್ಟ್‌ ವಿಶ್ಲೇಷಿಸಿದ್ದು, ನಿತೀಶ್‌ ಮತ್ತೆ ಎನ್‌ಡಿಎ ಸ್ನೇಹಕ್ಕೆ ಬೀಳಲು ಕಾಂಗ್ರೆಸ್ಸೇ ಕಾರಣ ಎಂದಿದೆ. 2016ರ ಏಪ್ರಿಲ್‌ನಲ್ಲಿ ಆರ್‌ಎಸ್‌ಎಸ್‌-ಬಿಜೆಪಿ ಮುಕ್ತ ಭಾರತ ಮಾಡೋಣ ಎಂದಿದ್ದ ನಿತೀಶ್‌ ದಿಢೀರ್‌ ಎಂದು ಬದಲಾಗಲು ಕಾರಣವೇನು ಎಂಬ ಪ್ರಶ್ನೆ ಹಾಕಿದೆ. ಅಂದರೆ, 2019ರ ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷವೆನ್ನಿಸಿಕೊಂಡಿರುವ ಕಾಂಗ್ರೆಸ್‌ನಿಂದಲೇ ಪ್ರಧಾನಿ ಅಭ್ಯರ್ಥಿ ಹೊರಹೊಮ್ಮಬೇಕು ಎಂಬುದು ಕೈ ನಾಯಕರ ಅಭಿಪ್ರಾಯ. ನಿತೀಶ್‌ ಬಿಹಾರವೊಂದಕ್ಕೆ ಸೀಮಿತವಾಗಿದ್ದು, ಇವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಕಾಂಗ್ರೆಸ್‌ ಹಿಂದೆ ಮುಂದೆ ನೋಡಿದ್ದೇ ನಿತೀಶ್‌ ಅವರ ಇಂಥ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

ಅಲ್ಲದೆ, ಮಹಾಘಟಬಂಧನ್‌ ರಚನೆಯಾಗಿ, ನಿತೀಶ್‌ಕುಮಾರ್‌ ಅವರ ಹೆಸರಲ್ಲೇ ವೋಟು ಕೇಳಿದರೂ ಹೆಚ್ಚು ಸ್ಥಾನ ಗೆದ್ದಿದ್ದು ಲಾಲು ಪ್ರಸಾದ್‌ ಯಾದವ್‌ ನೇತೃತ್ವದ ಆರ್‌ಜೆಡಿ. ಆದರೂ, ಲಾಲು ನಿತೀಶ್‌ ಅವರಿಗೇ ಮುಖ್ಯಮಂತ್ರಿ ಸ್ಥಾನ ಕೊಟ್ಟು, ಪುತ್ರ ತೇಜಸ್ವಿ ಯಾದವ್‌ಗೆ ಸಂಪುಟದಲ್ಲಿ ಎರಡನೇ ಸ್ಥಾನವೆನಿಸಿಕೊಂಡಿರುವ ಉಪಮುಖ್ಯಮಂತ್ರಿ ಸ್ಥಾನ ಸಿಗುವಂತೆ ಮಾಡಿದ್ದರು. ಕಳೆದ ಒಂದೂವರೆ/ಎರಡು ವರ್ಷಗಳಲ್ಲಿ ನಿತೀಶ್‌ಗಿಂತ ಹೆಚ್ಚು ಸುದ್ದಿಯಲ್ಲಿದ್ದದ್ದು ತೇಜಸ್ವಿ ಯಾದವ್‌. ಅಲ್ಲದೆ ರಾಜಕೀಯದಲ್ಲಿ ಅನುಭವವೇ ಇಲ್ಲದ ಯುವಕನಂತೆ ಕಂಡರೂ, ತೇಜಸ್ವಿ ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಸೂಕ್ಷ್ಮವನ್ನು ಅರಿತಿದ್ದ ನಿತೀಶ್‌ಕುಮಾರ್‌, 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರ ಬಿಟ್ಟು, ರಾಷ್ಟ್ರ ರಾಜಕಾರಣಕ್ಕೆ ಹೋಗುವ ಒಂದು ದಾರಿಯನ್ನು ಮುಂದಿರಿಸಿಕೊಂಡಿದ್ದರು. ಆದರೆ ಯಾವಾಗ 2019ರಲ್ಲಿ ಚುನಾವಣೆ ಗೆಲ್ಲುವುದು ಸುಲಭವಲ್ಲÉ, ಹಾಗೆಯೇ, ಕಾಂಗ್ರೆಸ್‌ನ ರಾಹುಲ್‌ ಆಧರಿತ ತಂತ್ರಗಳೂ ತಮ್ಮನ್ನು ದೆಹಲಿ ಗದ್ದುಗೆಗೆ ಕೊಂಡೊಯ್ಯಲು ಬಿಡುವುದಿಲ್ಲ ಎಂಬುದನ್ನು ಅರಿತರೋ, ಚಾಣಾಕ್ಷ ಹೆಜ್ಜೆೆಯಿಟ್ಟರು. 2019ರಲ್ಲಿ ದೆಹಲಿ ಗದ್ದುಗೆಗೆ ಏರುವ ಕನಸನ್ನು ಮುಂದಿಟ್ಟುಕೊಂಡು ಅತ್ತ ಗಮನಹರಿಸುವ ವೇಳೆಯಲ್ಲೇ ತೇಜಸ್ವಿ, ನಾಯಕನಾಗಿ ಬೆಳೆದು ಬಿಹಾರದಲ್ಲಿ ತಮ್ಮ ಅಸ್ತಿತ್ವಕ್ಕೆ ಭಂಗ ತರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನೂ ಅರಿತು ಅನಿವಾರ್ಯವಾಗಿ ಎನ್‌ಡಿಎ ಜತೆಗೆ ಕೈಜೋಡಿಸಿದರು ಎನ್ನಲಾಗುತ್ತಿದೆ.
  
ಅಲ್ಲದೆ, ಭ್ರಷ್ಟಾಚಾರ ವಿರೋಧಿ ನಿಲುವು ಹಾಗೂ ಅಭಿವೃದ್ದಿ ಕೇಂದ್ರಿತ ಆಡಳಿತದಿಂದ ಹೆಸರುಗಳಿಸಿರುವ ನಿತೀಶ್‌, ಲಾಲು ಜತೆಯಲ್ಲೇ ಇದ್ದರೆ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದೇ ಇದ್ದರೂ, ಅದನ್ನು ನೋಡಿಯೂ ಸುಮ್ಮನೆ ಕುಳಿತುಕೊಳ್ಳುವುದು ಅಪರಾಧವಾಗುತ್ತದೆ ಎಂದು ಭಾವಿಸಿ ಮಹಾಘಟಬಂಧನ್‌ ತೊರೆದರು ಎಂಬ ಮಾತುಗಳೂ ಇವೆ. ಒಟ್ಟಿನಲ್ಲಿ ನಿತೀಶ್‌ ಮಹಾಘಟಬಂಧನ್‌ ಬಿಟ್ಟಿದ್ದು, ಪ್ರತಿಪಕ್ಷಗಳ ಪಾಲಿಗೆ ಈಗ ದೊಡ್ಡ ಮಟ್ಟದ ಶಾಕ್‌. ಕಾಂಗ್ರೆಸ್‌ ಅನ್ನು ತೆಗೆದು ಬದಿಗಿರಿಸಿದರೂ, ಉಳಿದ ಪ್ರತಿಪಕ್ಷಗಳ ಪಾಲಿಗೆ ದೊಡ್ಡ ನಾಯಕನಂತೆಯೇ ವಿಜೃಂಭಿಸಬಹುದಿತ್ತು ಎಂಬುದು ಇತರೆ ಪಕ್ಷಗಳ ನಾಯಕರ ಮಾತಿನಲ್ಲಿ ವ್ಯಕ್ತವಾಗುತ್ತಿವೆ. ನಿತೀಶ್‌ ರಾಜೀನಾಮೆ ಕೊಟ್ಟಾಕ್ಷಣ, ಸಿಪಿಎಂನ ಸೀತಾರಾಂ ಯೆಚೂರಿ ಹೇಳಿದ್ದು, “”ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ, ಅಲ್ಪಸಂಖ್ಯಾತರ ಮೇಲೆ ದಾಳಿಗಳಾಗುತ್ತಿವೆ. ಇಂಥ ವೇಳೆಯಲ್ಲಿ ನಿತೀಶ್‌ ಕೂಡ ಅತ್ತ ಸರಿದರೆ, ಇವರಿಗೆಲ್ಲಾ ದನಿಯಾಗುವವರು ಯಾರು?”. ಇಂಥ ಮಾತುಗಳು ಉಳಿದ ಪಕ್ಷಗಳ ನಾಯಕರ ಬಾಯಿಂದಲೂ ಬಂದಿವೆ.

– ಸೋಮಶೇಖರ ಸಿ.ಜೆ.

Advertisement

Udayavani is now on Telegram. Click here to join our channel and stay updated with the latest news.

Next