ಗಂಗಾವತಿ: ಪ್ರವಾಸೋದ್ಯಮ ಉದ್ಯೋಗ ಸೃಷ್ಟಿಯ ಕ್ಷೇತ್ರವಾಗಿದ್ದರೂ ವಿಶ್ವದ ಗಮನ ಸೆಳೆದ ಕಿಷ್ಕಿಂದಾ ಆನೆಗೊಂದಿ ಪ್ರದೇಶವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಿರ್ಲಕ್ಷ್ಯ ಮಾಡಿವೆ.
ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ನಂಬರ್ ಒನ್ ಪ್ರವಾಸಿ ಕೇಂದ್ರವಾಗಿರುವ ಕಿಷ್ಕಿಂದಾ-ಆನೆಗೊಂದಿ ಪ್ರದೇಶದ ರಮಣೀಯ ತಾಣ ಮತ್ತು ವಿಜಯನಗರ ಸಾಮ್ರಾಜ್ಯಕ್ಕೂ ಪೂರ್ವದ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶದಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಸರಕಾರ ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಊಟ, ವಸತಿಗಾಗಿ ಗಂಗಾವತಿ, ಹೊಸಪೇಟೆ, ಕೊಪ್ಪಳ ನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ.
ವಿಜಯನಗರ ಸಾಮ್ರಾಜ್ಯಕ್ಕೂ ಮೊದಲುಕುಮ್ಮಟದುರ್ಗಾ ದೊರೆ ಗಂಡುಗಲಿ ಕುಮಾರರಾಮ ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿ ಹಲವು ಸ್ಮಾರಕ, ರಸ್ತೆ, ಕೆರೆಗಳನ್ನು ನಿರ್ಮಿಸಿದ ಮಾಹಿತಿ ಶಿಲಾಶಾಸನಗಳಲ್ಲಿ ಲಭ್ಯವಿದೆ. ವಿಜಯನಗರ ಸಾಮ್ರಾಜ್ಯವನ್ನು 1336ರಲ್ಲಿ ಹರಿಹರ ಮತ್ತು ಬುಕ್ಕರಾಯರು ಆನೆಗೊಂದಿಯಲ್ಲಿ ಸ್ಥಾಪನೆ ಮಾಡಿ ನಂತರ ರಾಜಧಾನಿಯನ್ನು ಹಂಪಿಗೆ ಸ್ಥಳಾಂತರ ಮಾಡಿದರು. ಸಂಗಮ ವಂಶದ ಪ್ರೌಢದೇವರಾಯ ಆನೆಗೊಂದಿ, ಹಿರೇಜಂತಗಲ್ ಸೇರಿ ಹಲವು ಕಡೆ ಶಿವ ದೇಗುಲ ಕೆರೆ, ವಿಜಯನಗರ ಅಣೆಕಟ್ಟುಗಳನ್ನು ನಿರ್ಮಿಸಿ ತೋಟಗಾರಿಕೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಟ್ಟಿದ್ದರಿಂದ ಆನೆಗೊಂದಿ ಮತ್ತು ಜಂತಗಲ್ ಭಾಗದಲ್ಲಿ ತುಂಗಭದ್ರಾ ನದಿಯ ನೀರನ್ನು ಬಳಸಿಕೊಂಡು ವರ್ಷ ಪೂರ್ತಿ ಬಾಳೆ ಬೆಳೆಯಲಾಗುತ್ತಿದೆ. ಇಷ್ಟೆಲ್ಲ ಐತಿಹಾಸಿಕ ಕುರುಹುಗಳಿದ್ದರೂ ಆನೆಗೊಂದಿ ಭಾಗದಲ್ಲಿರುವ ಸ್ಮಾರಕ ವೀಕ್ಷಣೆಗೆ ಪ್ರವಾಸೋದ್ಯಮ ಇಲಾಖೆ ಯಾವುದೇ ಸೌಕರ್ಯ ಕಲ್ಪಿಸಿಲ್ಲ.
ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ, ಪುರಾತತ್ವ ಇಲಾಖೆ, ಪ್ರಾಚ್ಯವಸ್ತು ಇಲಾಖೆಗಳು ವಿಜಯನಗರ ಸಾಮ್ರಾಜ್ಯ ಎಂದರೆ ಹಂಪಿಗೆ ಸೀಮಿತವಾಗಿ ಯೋಜನೆಗಳನ್ನು ರೂಪಿಸಿವೆ. ವಿಜಯನಗರ ಸಾಮ್ರಾಜ್ಯ ಮೂಲ ರಾಜಧಾನಿ ಕಿಷ್ಕಿಂದಾ-ಆನೆಗೊಂದಿ ಪ್ರದೇಶದಲ್ಲಿ ಶ್ರೀಕೃಷ್ಣದೇವರಾಯ ಸಮಾಧಿ(60ಕಾಲಿನ ಮಂಟಪ)ಚಿಂತಾಮಣಿ, ಪಂಪಾಸರೋವರ, ವಿಶ್ವವಿಖ್ಯಾತ ಕಿಷ್ಕಿಂದಾ ಅಂಜನಾದ್ರಿ ಬೆಟ್ಟ, ರಾಮಾಯಣದಲ್ಲಿ ಉಲ್ಲೇಖವಿರುವ ಋಷಿಮುಖಪರ್ವತ, ವಾಲಿಯನ್ನು ವಧೆ ಮಾಡಿದ ಸ್ಥಳ, ಶಬರಿ ಗುಹೆ, ವಾಲೀಕಿಲ್ಲಾ ಹೀಗೆ ಹತ್ತು ಹಲವು ಪುರಾತನ ಸ್ಥಳಗಳಿವೆ. ದಕ್ಷಿಣ ಭಾರತದ ಭೀಮಬೆಟ್ಕಾ ಎಂದು ಖ್ಯಾತಿ ಪಡೆದ ಶಿಲಾಯುಗದ ಜನರು ಗುಡ್ಡಪ್ರದೇಶಗಳಲ್ಲಿ ಬಿಡಿಸಿದ ಚಿತ್ರಗಳು ಏಳುಗುಡ್ಡದ ಪ್ರದೇಶ ಆನೆಗೊಂದಿ ಸಮೀಪವೇ ಇದೆ.
ಶಿಲಾಯುಗದ ಜನರ ಸಮಾಧಿ ಮಾಡಿದ ಮೋರಿಯರ್ ಗುಡ್ಡ ಕೂಡ ಇಲ್ಲೇ ಇದೆ. ಶಿಲಾರೋಹಿಗಳು ಇಷ್ಟಪಡುವ ಬೆಟ್ಟಗಳು ಆನೆಗೊಂದಿ ಸುತ್ತಲಿದ್ದು, ಪ್ರತಿ ವರ್ಷ ದೇಶ ವಿದೇಶದ ಶಿಲಾರೋಹಿಗಳು ಇಲ್ಲಿಗೆ ಆಗಮಿಸಿ ತರಬೇತಿ ಪಡೆಯುತ್ತಾರೆ. ಪ್ರವಾಸೋದ್ಯಮ ಇಲಾಖೆ ಮಾತ್ರ ಶಿಲಾರೋಹಣ ಕುರಿತು ಪ್ರಚಾರ ಮಾಡುತ್ತಿಲ್ಲ. ಇಡೀ ವಿಶ್ವವೇ ಕಿಷ್ಕಿಂದಾ ಆನೆಗೊಂದಿ ಕಡೆ ನೋಡುತ್ತಿದ್ದರೆ
ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಾತ್ರ ಈ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಯಲು ಯಾವುದೇ ಯೋಜನೆ ಅನುಷ್ಠಾನಗೊಳಿಸಿಲ್ಲ. ಸಾಣಾಪೂರದ ಹತ್ತಿರ ಇರುವ ಕೆರೆ ಮತ್ತು ಫಾಲ್ಸ್ ವಿದೇಶಿಗರಿಗೂ ಅಚ್ಚುಮೆಚ್ಚು. ಕಿಷ್ಕಿಂದಾ ಅಂಜನಾದ್ರಿಬೆಟ್ಟ ವಿಶ್ವವಿಖ್ಯಾತವಾಗಿದ್ದು, ದೇಗುಲದ ಆದಾಯ ಒಂದು ಕೋಟಿ ರೂ. ದಾಟಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರ ಮಹಾಯೋಜನೆಯಲ್ಲಿ ಈ ಪ್ರದೇಶದ ವ್ಯಾಪ್ತಿಯ ನಿವಾಸಿಗಳನ್ನು ಯೋಜನೆ ಭಾಗಿದಾರರೆಂದು ಗುರುತಿಸಲಾಗಿದ್ದು, ಪ್ರವಾಸೋದ್ಯಮಕ್ಕೆ ಪೂರಕವಾಗಿ ವ್ಯಾಪಾರ ವಹಿವಾಟು ನಡೆಸಲು ಪ್ರಾಧಿಕಾರ ಬಿಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಕೆ.ನಿಂಗಜ್ಜ